ಸಿಮೆಂಟ್, ಸ್ಟೀಲ್ ಮೇಲೆ ಹೂಡಿಕೆ ಮಾಡಿದರೆ ಭರಪೂರ ಲಾಭ ; ಪುಂಗಿ ಊದುತ್ತಲೇ ನೂರಾರು ಕೋಟಿ ವಂಚನೆ, ಕರ್ನಾಟಕ- ಮಹಾರಾಷ್ಟ್ರದ ಮೋಸ್ಟ್ ವಾಂಟೆಡ್ ಮುಂಬೈನಲ್ಲಿ ಸೆರೆ

02-07-22 10:24 pm       HK News Desk   ಕ್ರೈಂ

ಸಿಮೆಂಟ್, ಸ್ಟೀಲ್ ಮೇಲೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತೆ ಎಂದು ಹೇಳಿ ಉದ್ಯಮಿಗಳು, ವ್ಯಾಪಾರಸ್ಥರ ಬಳಿಯಿಂದ ನೂರಾರು ಕೋಟಿ ರೂಪಾಯಿ ಪಡೆದು ವಂಚಿಸಿರುವ ಪ್ರಕರಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ ಮಹಾವಂಚಕನನ್ನು ಮುಂಬೈನಲ್ಲಿ ಅರೆಸ್ಟ್ ಮಾಡಲಾಗಿದೆ.‌

ಬೆಳಗಾವಿ, ಜುಲೈ 2: ಸಿಮೆಂಟ್, ಸ್ಟೀಲ್ ಮೇಲೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತೆ ಎಂದು ಹೇಳಿ ಉದ್ಯಮಿಗಳು, ವ್ಯಾಪಾರಸ್ಥರ ಬಳಿಯಿಂದ ನೂರಾರು ಕೋಟಿ ರೂಪಾಯಿ ಪಡೆದು ವಂಚಿಸಿರುವ ಪ್ರಕರಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ ಮಹಾವಂಚಕನನ್ನು ಮುಂಬೈನಲ್ಲಿ ಅರೆಸ್ಟ್ ಮಾಡಲಾಗಿದೆ.‌

ಬೆಳಗಾವಿ ಸಿಸಿಬಿ ಪೊಲೀಸರು ಮಹಾವಂಚಕ, ಬೆಳಗಾವಿ ಮೂಲದ ಶಿವಾನಂದ ಕುಂಬಾರನನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ವಂಚನೆಯ ಬಳಿಕ ಊರು ಬಿಟ್ಟು ಎರಡು ವರ್ಷಗಳಿಂದ ಈಜಿಪ್ಟ್, ಮಾಲ್ಡೀವ್ಸ್, ದುಬೈ ಎಲ್ಲ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ಆರೋಪಿ ಕಡೆಗೂ ಮುಂಬೈನಲ್ಲಿ ಸೆರೆಯಾಗಿದ್ದಾನೆ. ನೇಪಾಳದಲ್ಲಿದ್ದಾಗ ಅಲ್ಲಿನ ಪೊಲೀಸರನ್ನು ಇಂಟರ್‌ಪೋಲ್ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು, ಬಂಧನಕ್ಕೆ ನೆರವು ಕೋರಿದ್ದರು. ಈ ವೇಳೆ ಹಣಕಾಸಿನ ಅವಶ್ಯಕತೆಗಾಗಿ ಆರೋಪಿ ಮುಂಬೈಗೆ ಬರುತ್ತಿದ್ದಾನೆಂಬ ಗುಪ್ತಚರ ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ಕಾದು ಕುಳಿತಿದ್ದ ಪೊಲೀಸರು ವಂಚಕ ಶಿವಾನಂದ ಕುಂಬಾರನನ್ನು ಬಂಧಿಸಿದ್ದಾರೆ. ‌ಇದರ ಹಿಂದೆ ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ ಮತ್ತು ಟೀಮ್‌ ಭಾರೀ ವರ್ಕೌಟ್ ಮಾಡಿದೆ.

ಶಿವಾನಂದ ಕುಂಬಾರ ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿಯಾಗಿದ್ದು ಮಹಾರಾಷ್ಟ್ರದ ಗಡಿಭಾಗ ಇಚಲಕರಂಜಿಯಲ್ಲಿ ವಾಸವಿದ್ದ. ಅಲ್ಲಿದ್ದಕೊಂಡೇ ಕರ್ನಾಟಕ- ಮಹಾರಾಷ್ಟ್ರದಲ್ಲಿ ವ್ಯಾಪಾರಸ್ಥರನ್ನು ಸಿಮೆಂಟ್, ಸ್ಟೀಲ್ ‌ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು ನಂಬಿಸಿದ್ದ. ಅಮಾಯಕ ಜನರನ್ನು ಪುಸಲಾಯಿಸಿ ಕೋಟ್ಯಂತರ ಹಣವನ್ನೂ ಪಡೆದಿದ್ದ. ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರನ್ನು ನಂಬಿಕೆ ಬರುವಂತೆ ಮಾಡಿಸಿದ್ದ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಉದ್ಯಮಿಗಳು, ವ್ಯಾಪಾರಿಗಳ ಬಳಿಯಿಂದ 500 ಕೋಟಿಗೂ ಹೆಚ್ಚು ಹಣ ಪಡೆದಿದ್ದ ಎನ್ನುವ ಲೆಕ್ಕಾಚಾರ ಇದೆ. ವಂಚನೆಯ ಬಳಿಕ ದಿಢೀರ್ ನಾಪತ್ತೆಯಾಗಿದ್ದು ಕುಟುಂಬ ಸಮೇತ ಊರು ಬಿಟ್ಟು ಹೋಗಿದ್ದ. ಬೆಳಗಾವಿಯ ಹಲವರು ಶಿವಾನಂದ ಕುಂಬಾರನ ಮಾತು ಕೇಳಿ ಭಾರೀ ಹಣ ಹೂಡಿಕೆ ಮಾಡಿದ್ದರು. ಹೋಲ್‌ಸೇಲ್ ತರಕಾರಿ ವ್ಯಾಪಾರಸ್ಥ ಯಲ್ಲಪ್ಪ ಮನಗುತಕರ್ ಎಂಬಾತನನ್ನು ಮಧ್ಯವರ್ತಿ ಆಗಿಟ್ಟು ಹಣ ಹೂಡಿಕೆ ಮಾಡಿಸುತ್ತಿದ್ದ. ಹಾಗಾಗಿ ಬಹುತೇಕ ಹೋಲ್‌ಸೇಲ್ ತರಕಾರಿ ವ್ಯಾಪಾರಸ್ಥರು ಕೋಟ್ಯಂತರ ಹಣ ಹೂಡಿದ್ದು ಪಂಗನಾಮ ಹಾಕಿಸಿಕೊಂಡಿದ್ದಾರೆ.

ಬ್ರೋಕರ್ ಯಲ್ಲಪ್ಪ ಮನಗುತಕರ್‌ ಮೂಲಕ 75 ಲಕ್ಷ ಹಣ ಹೂಡಿದ್ದ ಜಾಫರವಾಡಿಯ ಅರ್ಜುನ್ ಪಾಟೀಲ್, ತನಗಾದ ವಂಚನೆಯ ಬಗ್ಗೆ ಮೊದಲ ಬಾರಿಗೆ ಬೆಳಗಾವಿಯ ಸಿಇಎನ್ ಠಾಣೆಗೆ ದೂರು ನೀಡಿದ್ದರು.‌ ಯಲ್ಲಪ್ಪ ಮನಗುತಕರ್ ಮತ್ತು ಶಿವಾನಂದ ಕುಂಬಾರ ವಿರುದ್ಧ ಕೇಸ್ ದಾಖಲಾಗಿತ್ತು. ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ತನಿಖೆ ನಡೆದಾಗ, ಎರಡೂ ರಾಜ್ಯಗಳಲ್ಲಿ ನೂರಾರು ಮಂದಿಗೆ ದೋಖಾ ಮಾಡಿರುವುದು ಬಯಲಾಗಿದೆ.

Karnataka Maharashtra most wanted cheater arrested in Belagavi, crores cheated. The arrested has been identified as Shivanandh.