ಹಿರಿಯಡ್ಕ ಕಿಶನ್ ಹೆಗ್ಡೆ ಕೊಲೆ ಪ್ರಕರಣ ; ಮತ್ತೆ ನಾಲ್ವರು ಆರೋಪಿಗಳ ಅರೆಸ್ಟ್ 

02-10-20 06:32 pm       Udupi Reporter   ಕ್ರೈಂ

ಹಿರಿಯಡ್ಕ ಪೇಟೆಯಲ್ಲಿ ಸೆ.24ರಂದು ಹಾಡಹಗಲೇ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ, ಅ.2: ಹಿರಿಯಡ್ಕ ಪೇಟೆಯಲ್ಲಿ ಸೆ.24ರಂದು ಹಾಡಹಗಲೇ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು ಒಂಭತ್ತಕ್ಕೇರಿದೆ.

ಕಾಟಿಪಳ್ಳ ಒಂದನೆ ಬ್ಲಾಕ್‌ನ ಸಚಿನ್ ಡಿ.ಅಮೀನ್(37), ಮೂರನೆ ಬ್ಲಾಕ್‌ನ ಅಕ್ಷಯ್ ಶೆಟ್ಟಿಗಾರ್(26), ಜೋಕಟ್ಟೆಯ ಚೇತನ್ ಯಾನೆ ಚೇತು (23), ಕಾಟಿಪಳ್ಳ ಒಂದನೆ ಬ್ಲಾಕ್‌ನ ಸಂಜಿತ್ ಯಾನೆ ಶೈಲೇಶ್(19) ಬಂಧಿತ ಆರೋಪಿಗಳು.

ಇವರನ್ನು ಅ.2ರಂದು ಸುರತ್ಕಲ್ ಬಳಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬ್ರಹ್ಮಾವರ ಎಸ್ಸೈ ರಾಘವೇಂದ್ರ ಸಿ. ನೇತೃತ್ವದ ವಿಶೇಷ ತಂಡ ಬಂಧಿಸಿದೆ. ಬಂಧಿತರ ಪೈಕಿ ಸಚಿನ್ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪರಹಣ, ಹಲ್ಲೆ, ಇಸಿ ಕಾಯಿದೆಯಡಿ ಪ್ರಕರಣಗಳು ದಾಖಲಾಗಿವೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು, ಮಾರುತಿ ರಿಟ್ಝ್ ಕಾರು, ಇನೋವಾ ಕಾರು, ಎರಡು ಪಲ್ಸರ್ ಬೈಕ್, ಮಂಡೆ ಕತ್ತಿ, ಸುತ್ತಿಗೆ, ತಲವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 19.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರ ಪೈಕಿ ಮೂವರು ನ್ಯಾಯಾಂಗ ಬಂಧನ, ಇಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.