ಹತ್ರಾಸ್ ಪ್ರಕರಣ ; ಎಸ್ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್

03-10-20 10:31 am       Headline Karnataka News Network   ಕ್ರೈಂ

ದಲಿತ ಯುವತಿಯ ಅತ್ಯಾಚಾರ ಪ್ರಕರಣ ಎಸ್ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರಕಾರ ಸಸ್ಪೆಂಡ್ ಮಾಡಿದೆ. 

ನವದೆಹಲಿ, ಅಕ್ಟೋಬರ್ 3: ದಲಿತ ಯುವತಿಯ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸಂಚಲನ ಎಬ್ಬಿಸಿರುವಾಗಲೇ ಹತ್ರಾಸ್ ಜಿಲ್ಲೆಯ ಎಸ್ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರಕಾರ ಸಸ್ಪೆಂಡ್ ಮಾಡಿದೆ. 

ರಾಜ್ಯ ಸರಕಾರ ಪ್ರಕರಣದ ತನಿಖೆಗೆ ನಿಯೋಜಿಸಿರುವ ಎಸ್ಐಟಿ ತಂಡ ನೀಡಿದ ಪ್ರಾಥಮಿಕ ಮಾಹಿತಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಹತ್ರಾಸ್ ಎಸ್ಪಿ ವಿಕ್ರಾಂತ್ ವೀರ್ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಸರ್ಕಲ್ ಇನ್ಸ್ ಪೆಕ್ಟರ್ ರಾಮ್ ಶಬ್ದ್ , ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ವರ್ಮಾ, ಸಬ್ ಇನ್ಸ್ ಪೆಕ್ಟರ್ ಜಗವೀರ್ ಸಿಂಗ್ ಮತ್ತು ಹೆಡ್ ಕಾನ್ಸ್ ಟೇಬಲ್ ಮಹೇಶ್ ಪಾಲ್ ಅವರನ್ನು ಅಮಾನತ್ತಿನಲ್ಲಿಡಲಾಗಿದೆ. 

ಪ್ರಕರಣದ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡುವಂತೆ ಸಿಎಂ ಯೋಗಿ ಆದಿತ್ಯನಾಥ್, ಹೋಮ್ ಸೆಕ್ರೆಟರಿ ಭಗವಾನ್ ಸ್ವರೂಪ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದಾರೆ.‌ ಯುವತಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸದೆ ಅಂತ್ಯಕ್ರಿಯೆ ನಡೆಸಿದ್ದರಲ್ಲಿ ಪೊಲೀಸರ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಎಸ್ಐಟಿ ತಂಡ ಕ್ರಮಕ್ಕೆ ಶಿಫಾರಸು ಮಾಡಿದೆ ಎನ್ನಲಾಗ್ತಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿ ಸಂಶಯಿತ ಆರೋಪಿಗಳನ್ನು ನಾರ್ಕೋ ಅನಾಲಿಸಿಸ್ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರಕಾರ ಆದೇಶ ಮಾಡಿದೆ. ಇದಲ್ಲದೆ, ಮಹಿಳೆಯರ ವಿಚಾರದಲ್ಲಿ ಯಾವುದೇ ಅಸಭ್ಯ ನಡೆಗಳನ್ನು ಸಹಿಸಿಕೊಳ್ಳಲ್ಲ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಸಿಎಂ ಯೋಗಿ ಪುನರುಚ್ಚರಿಸಿದ್ದಾರೆ.