ಮೊಮ್ಮಗಳ ಹೆಸರಲ್ಲಿ ಅಜ್ಜಿ ಇಟ್ಟಿದ್ರು ಐದು ಲಕ್ಷ ; ನಕಲಿ ಮೊಮ್ಮಗಳ ತೋರಿಸಿ ಹಣ ಎಗರಿಸಿದ ದಂಪತಿ 

12-08-22 07:50 pm       HK News Desk   ಕ್ರೈಂ

ಅಜ್ಜಿಯೊಬ್ಬರು ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕ್​ನಲ್ಲಿ ಠೇವಣಿಯಿಟ್ಟಿದ್ದ ಹಣವನ್ನು ನಕಲಿ ದಾಖಲೆ ಹಾಗೂ ನಕಲಿ ಮೊಮ್ಮಗಳನ್ನು ಬ್ಯಾಂಕಿಗೆ ತೋರಿಸಿ ಕಬಳಿಸಿದ ಪ್ರಕರಣ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದಿದೆ. 

ರಾಮನಗರ, ಆಗಸ್ಟ್ 12 : ಅಜ್ಜಿಯೊಬ್ಬರು ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕ್​ನಲ್ಲಿ ಠೇವಣಿಯಿಟ್ಟಿದ್ದ ಹಣವನ್ನು ನಕಲಿ ದಾಖಲೆ ಹಾಗೂ ನಕಲಿ ಮೊಮ್ಮಗಳನ್ನು ಬ್ಯಾಂಕಿಗೆ ತೋರಿಸಿ ಕಬಳಿಸಿದ ಪ್ರಕರಣ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದಿದೆ. 

ರಾಮನಹಳ್ಳಿಯ ವೃದ್ಧೆ ನಂಜಮ್ಮ ಎಂಬವರು ಬಿಡದಿಯ ಕೆನರಾ ಬ್ಯಾಂಕ್​ನಲ್ಲಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಟ್ಟಿದ್ದರು. ಕೆಲವು ಸಮಯದ ಬಳಿಕ ನಂಜಮ್ಮ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅಜ್ಜಿಯ ಸಂಬಂಧಿಕರಾಗಿದ್ದ ರತ್ಮಮ್ಮ ಮತ್ತು ಜಗದೀಶ್​ ಎಂಬವರು ಬ್ಯಾಂಕ್​ಗೆ ಜ್ಞಾನೇಶ್ವರಿ ಹೆಸರಲ್ಲಿ ಬಾಲಕಿಯನ್ನು ಕರೆತಂದಿದ್ದು ತಮ್ಮದೇ ಮಗಳು ಜ್ಞಾನೇಶ್ವರಿ. ತಾಯಿ ನಂಜಮ್ಮ ತೀರಿಕೊಂಡಿದ್ದಾರೆಂದು ಜಗದೀಶ್ ದಾಖಲೆ ತೋರಿಸಿದ್ದರು. ಅಲ್ಲದೆ, ಠೇವಣಿ ಹಣಕ್ಕೆ ಜ್ಞಾನೇಶ್ವರಿ ತಂದೆಯಾದ ತನ್ನನ್ನು ಮೈನರ್​ ಗಾರ್ಡಿಯನ್​ ಆಗಿಸಿ, ಜಂಟಿ ಖಾತೆಯಲ್ಲಿ ಠೇವಣಿ ವರ್ಗಾವಣೆ ಮಾಡಲು ಹೇಳಿದ್ದರು. ಅಲ್ಲದೆ ನಂಜಮ್ಮರ ಮರಣ ಪ್ರಮಾಣಪತ್ರ, ಠೇವಣಿ ಹಣದ ಬಾಂಡ್​ ನಂಬರ್​ ಸಹಿತ ದಾಖಲೆಗಳನ್ನು ಬ್ಯಾಂಕ್​ಗೆ ನೀಡಿದ್ದರು. ಇದರ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್​ ಸಿಬ್ಬಂದಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ನಂಜಮ್ಮ ಇಟ್ಟಿದ್ದ 5 ಲಕ್ಷ ರೂ.ಗಳನ್ನು ಜಗದೀಶ್​ ಅವರ ಹೆಸರಿನಲ್ಲಿ ತೆರೆದಿದ್ದ ಜಂಟಿ ಉಳಿತಾಯ ಖಾತೆಗೆ 2022ರ ಜೂನ್​ 23ರಂದು ವರ್ಗಾವಣೆ ಮಾಡಿದ್ದರು.

ಇದಾದ ನಂತರ 2022ರ ಜುಲೈ 1ರಂದು ಮೃತ ನಂಜಮ್ಮ ಅವರ ಮಗ ಚಂದ್ರಶೇಖರ್​ ಬ್ಯಾಂಕ್​ಗೆ ಬಂದು ತನ್ನ ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ತಾಯಿ ಇಟ್ಟಿರುವ ಠೇವಣಿ ಹಣದ ಬಗ್ಗೆ ವಿಚಾರಿಸಿದ್ದರು. ಬ್ಯಾಂಕ್​ ಸಿಬ್ಬಂದಿ ದಾಖಲೆ ಪರಿಶೀಲಿಸಿದಾಗ, ಇದಕ್ಕೂ ಹಿಂದೆ ರತ್ನಮ್ಮ ಹಾಗೂ ಜಗದೀಶ್​ ಅವರು ಬ್ಯಾಂಕ್​ಗೆ ಸಲ್ಲಿಸಿದ್ದ ದಾಖಲೆಗಳು ನಕಲಿ ಅಲ್ಲದೆ, ಬ್ಯಾಂಕ್​ಗೆ ಕರೆತಂದಿದ್ದ ಜ್ಞಾನೇಶ್ವರಿಯೂ ನಕಲಿ ಎಂದು ಗೊತ್ತಾಗಿದೆ. ರತ್ನಮ್ಮ ಹಾಗೂ ಜಗದೀಶ್​ ಮೋಸ ಎಸಗಿರುವ ಬಗ್ಗೆ ಬ್ಯಾಂಕ್​ ಮ್ಯಾನೇಜರ್​ ಕೇಶವಮೂರ್ತಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Family loot Rs 5 lakhs by showing fake grand daughter in the bank at Ramnagara.