ಗಾಂಜಾ ಎಣ್ಣೆ ಬಳಸೋದನ್ನು ಕೇಳಿದ್ದೀರಾ..? ಕರಾವಳಿಯಲ್ಲಿ ಮೊದಲ ಪ್ರಕರಣ ಪತ್ತೆ !

05-10-20 10:48 am       Mangalore Correspondent   ಕ್ರೈಂ

ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.ಸುಮಾರು 80 ಸಾವಿರ ರೂ. ಮೌಲ್ಯದ ಗಾಂಜಾ ಎಣ್ಣೆಯನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು, ಅಕ್ಟೋಬರ್ 5: ನಶೆ ಏರಿಸಿಕೊಳ್ಳೋಕೆ ಗಾಂಜಾ ಕಡ್ಡಿಗಳನ್ನು ಬಳಸುವುದನ್ನು ಕೇಳಿದ್ದೇವೆ. ಆದರೆ ಗಾಂಜಾ ಎಣ್ಣೆ ಬಳಕೆ ಬಗ್ಗೆ ಕೇಳಿದ್ದೀರಾ? ನಶೆ ಏರಿಸಿಕೊಳ್ಳಲು ಗಾಂಜಾವನ್ನು ಎಣ್ಣೆ ರೂಪದಲ್ಲಿ ಬಳಸುತ್ತಿರುವ ಪ್ರಕರಣ ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಬೆಳಕಿಗೆ ಬಂದಿದೆ. 

ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಸರ್ಕಲ್ ಟಿ.ಡಿ ನಾಗರಾಜ್ ನೇತೃತ್ವದ ತಂಡ ಬಂಧಿತನಿಂದ ಸುಮಾರು 80 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಎಣ್ಣೆಯನ್ನು ವಶಕ್ಕೆ ಪಡೆದಿದೆ. ಬಂಧಿತನನ್ನು ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ಅಬ್ದುಲ್ ಖಾದರ್ ಯಾನೆ ಅದ್ದು (25) ಎಂದು ಗುರುತಿಸಲಾಗಿದೆ. ಆತನಿಂದ ಸುಮಾರು 300 ಗ್ರಾಂ ತೂಕದ ಗಾಂಜಾ ಎಣ್ಣೆ, 40 ಗ್ರಾಂ ಮೊಗ್ಗು ಕಾಯಿ ಮಿಶ್ರಿತ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. 

ಗಾಂಜಾ ಎಣ್ಣೆ ಅತಿ ಹೆಚ್ಚು ಬೆಲೆಯುಳ್ಳಂಥದ್ದು. ಅರ್ಧ ಕೆಜಿ ಎಣ್ಣೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಬೆಲೆ ಇದೆ ಎನ್ನುತ್ತಾರೆ ಪೊಲೀಸರು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾ ಎಣ್ಣೆ ತೆಗೆಯುವ ಜಾಲ ಇದ್ದು ಆರೋಪಿ ಅಬ್ದುಲ್ ಖಾದರ್ ಅಲ್ಲಿಂದ ಗಾಂಜಾ ತರಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಗಾಂಜಾವನ್ನು ಎಣ್ಣೆಯ ರೂಪದಲ್ಲಿ ಬಳಕೆ ಮಾಡುವ ಪ್ರಕರಣ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಉಳಿದಂತೆ ಗಾಂಜಾದಿಂದ ಎಣ್ಣೆ ತೆಗೆಯುವುದು ಅತ್ಯಂತ ದುಬಾರಿ ಮತ್ತು ಅಪರೂಪದ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.