ಮಲ್ಪೆ ; ಸಮುದ್ರಕ್ಕೆ ಬಿದ್ದು ಸಾವಿನ ದವಡೆಯಿಂದ ಪಾರಾದ ಬೆಂಗಳೂರಿನ ಪ್ರವಾಸಿಗರು !

09-11-20 04:11 pm       Udupi Correspondent   ಕ್ರೈಂ

ಬೆಂಗಳೂರು ಮೂಲದ ಪ್ರವಾಸಿಗರು ಮಲ್ಪೆ ಕಡಲತೀರದಲ್ಲಿ ನೀರಾಟದಲ್ಲಿ ತೊಡಗಿದ್ದಾಗ, ಆ ಪೈಕಿ ಮೂವರು ಅಲೆಗಳ ನಡುವೆ ಕೊಚ್ಚಿ ಹೋಗಿದ್ದು ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಡುಪಿ, ನವೆಂಬರ್ 09 : ಬೆಂಗಳೂರು ಮೂಲದ ಪ್ರವಾಸಿಗರು ಮಲ್ಪೆ ಕಡಲತೀರದಲ್ಲಿ ನೀರಾಟದಲ್ಲಿ ತೊಡಗಿದ್ದಾಗ, ಆ ಪೈಕಿ ಮೂವರು ಅಲೆಗಳ ನಡುವೆ ಕೊಚ್ಚಿ ಹೋಗಿದ್ದು ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಬೆಳಗ್ಗೆ ಘಟನೆ ನಡೆದಿದೆ. 

ಬೆಂಗಳೂರಿನ 10 ಜನ ಪ್ರವಾಸಿಗರು ಕಡಲತೀರಕ್ಕೆ ಆಗಮಿಸಿದ್ದರು. ಈ ಪೈಕಿ ಐದಾರು ಜನ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಮೊದಲು ಯುವತಿಯೊಬ್ಬಳು ನೀರಿನಲ್ಲಿ ಮುಳುಗಿದ್ದಾಳೆ. ಆಕೆಯ ರಕ್ಷಣೆಗಾಗಿ ಜೊತೆಗಿದ್ದ ಇನ್ನಿಬ್ಬರು ನೀರಿಗೆ ಹಾರಿದ್ದು ಈ ವೇಳೆ ಮೂವರು ಕೂಡ ಅಪಾಯಕ್ಕೆ ಸಿಲುಕಿದ್ದಾರೆ.  ದಡದಲ್ಲಿ ಇದ್ದವರು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಇದನ್ನು ಕೇಳಿ ಸ್ವಲ್ಪ ದೂರದಲ್ಲಿ ಜೆಟ್ ಸ್ಕೀ ನಿರ್ವಹಿಸುತ್ತಿದ್ದವರು ಸ್ಥಳಕ್ಕೆ ಧಾವಿಸಿದ್ದಾರೆ. 

ಜೆಟ್ ಸ್ಕೀ ಬೋಟ್ ಮೂಲಕ ಮೊದಲು ರಕ್ಷಣೆ ಮಾಡಿ, ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರತಿದಿನ 11 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಕಡಲು ಪ್ರಕ್ಷುಬ್ಧ ಇರುತ್ತದೆ. ಈ ಸಂದರ್ಭ ಪ್ರವಾಸಿಗರು ಕಡಲಿಗೆ ಇಳಿಯಬಾರದು ಎಂದು ಸೂಚನಾ ಫಲಕ ಹಾಕಲಾಗಿದೆ. ಆದರೆ, ಸೂಚನೆಯನ್ನು ಉಲ್ಲಂಘಿಸಿ ಪ್ರವಾಸಿಗರು ನೀರಿಗಿಳಿದು ಅಪಾಯಕ್ಕೀಡಾಗುತ್ತಾರೆ.

ಸ್ವಿಮ್ಮಿಂಗ್ ಪೂಲ್, ನದಿಯಲ್ಲಿ ಈಜಲು ಕಲಿತವರು ಸಮುದ್ರಕ್ಕೆ ತಿಳಿದು ಈಜುತ್ತೇವೆ ಎಂದು ಅಂದುಕೊಂಡಿದ್ದರೆ ಅದು ಮೂರ್ಖತನ ಎಂದು ಸ್ಥಳೀಯ ಮೀನುಗಾರ ವಿಠಲ ಕಾಂಚನ್ ಹೇಳುತ್ತಾರೆ.

Three youngsters from Bangalore who were drowned in malpe beach were rescued by localities in malpe Beach, Udupi.