ಅಡಿಕೆ ವರ್ತಕನ ದರೋಡೆ ; ಮೂವರು ಖದೀಮರ ಸೆರೆ 

09-11-20 08:34 pm       Mangaluru Correspondent   ಕ್ರೈಂ

ಅಡಿಕೆ ವರ್ತಕರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ನಗದು ಮತ್ತು ಚಿನ್ನದ ಸರ ದರೋಡೆಗೈದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

ಉಪ್ಪಿನಂಗಡಿ, ನ.9: ಅಡಿಕೆ ವರ್ತಕರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ನಗದು ಮತ್ತು ಚಿನ್ನದ ಸರ ದರೋಡೆಗೈದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

ಬಂಟ್ವಾಳ ತಾಲೂಕು ಸಜಿಪಪಡು ಗ್ರಾಮದ ನಿವಾಸಿ ಅಪ್ರೀದ್ (22) , ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಾಗಡಿಕಟ್ಟೆ ಮನೆ ದೊಡ್ಡಹನಕೊಡು ಗ್ರಾಮದ ನಿವಾಸಿ ಜುರೈಝ್ (20 ) ಹಾಗೂ ಬಂಟ್ವಾಳ ತಾಲೂಕು ಕಡೆಶಿವಾಲಯ ಗ್ರಾಮ ದೊಡ್ಡಾಜೆ ಮನೆಯ ಮೊಹಮ್ಮದ್ ತಂಝಿಲ್ (22) ಬಂಧಿತ ಆರೋಪಿಗಳು. 

ಆರೋಪಿಗಳ ಬಳಿಯಿಂದ ಗ್ರೇ ಬಣ್ಣದ ಆಕ್ಟಿವಾ, ಕೃತ್ಯಕ್ಕೆ  ಬಳಸಿದ ಚೂರಿ ಹಾಗೂ ಮೂರು ಮೊಬೈಲ್ ಫೋನುಗಳು ಹಾಗೂ ದರೋಡೆಗೈದ ಹಣವನ್ನು ವಶಪಡಿಸಿಕೊಂಡಿದ್ದಾರೆ. 

ಪೆರ್ನೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ದೀಪಕ್ ಶೆಟ್ಟಿ ಎಂಬವರು ಅ.27 ರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಅಡಿಕೆ ಮಾರಾಟದಿಂದ ಸಿಕ್ಕಿದ 3.50 ಲಕ್ಷ ರೂ.ಗಳೊಂದಿಗೆ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಘಟನೆ ನಡೆದಿದೆ.  ದೀಪಕ್, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮ ಪಜೆಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಅಪರಿಚಿತರ ತಂಡ ದ್ವಿಚಕ್ರ ವಾಹನದಲ್ಲಿ ಬಂದು ದೀಪಕ್ ಅವರನ್ನು  ತಡೆದು ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾರೆ.‌ ಅವರ ಬಳಿ ಇದ್ದ ನಗದು ಮತ್ತು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿದ್ದರು‌. 

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಯಾಳು ದೀಪಕ್ ಶೆಟ್ಟಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಪೆರ್ನೆ ; ಅಡಿಕೆ ವ್ಯಾಪಾರಿಗೆ ಚೂರಿ ಇರಿದು ನಾಲ್ಕು ಲಕ್ಷ ದರೋಡೆ !!

In connection to Stabbing and looting of Arecanut Merchant in Uppinangady, the police have succeeded in arresting three persons. On 27th October Two unidentified men who arrived on a bike stabbed an areca nut trader who was also on his bike and stole Rs 4 lac from him.