ನಕಲಿ ದಾಖಲೆಯಲ್ಲಿ ಉತ್ತರ ಪ್ರದೇಶಕ್ಕೆ ಅಡಿಕೆ ಸಾಗಣೆ ; ಪುತ್ತೂರಿನ ಸಂಸ್ಥೆಗೆ 53 ಲಕ್ಷ ರೂ. ದಂಡ !!

10-11-20 04:48 pm       Udupi Correspondent   ಕ್ರೈಂ

ಕೇರಳದ ವರ್ತಕರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾಸರಗೋಡಿನಿಂದ ಉತ್ತರ ಪ್ರದೇಶಕ್ಕೆ ಸಾಗಣೆ ಮಾಡುತ್ತಿರುವ ರೀತಿ ತೋರಿಸಿದ್ದು ಪತ್ತೆ ಹಚ್ಚಲಾಗಿದೆ.

ಉಡುಪಿ, ನ.10: ಸರಕು ವಾಹನದಲ್ಲಿ ಕಾಸರಗೋಡಿನಿಂದ ಉತ್ತರ ಪ್ರದೇಶಕ್ಕೆ ನಕಲಿ ದಾಖಲೆಗಳೊಂದಿಗೆ ಅಡಿಕೆ ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಮಾಡಿರುವ ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, 53,10,500 ರೂ. ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಿದ್ದಾರೆ. 

ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಮೇ 23ರಂದು ರಸ್ತೆ ಜಾಗೃತಿ ಕಾರ್ಯ ನಡೆಸುವ ಸಂದರ್ಭದಲ್ಲಿ ಅಂಪಾರು- ಕೊಲ್ಲೂರು ರಸ್ತೆಯ ವಂಡ್ಸೆ ಎಂಬಲ್ಲಿ ಸರಕು ವಾಹನವನ್ನು ತಡೆದು ಅದರಲ್ಲಿ ಇದ್ದ 24,700 ಕೆ.ಜಿ. ತೂಕದ ಒಟ್ಟು 380 ಚೀಲ ಅಡಿಕೆ ಸರಕನ್ನು ಮತ್ತು ವಾಹನವನ್ನು ವಶಪಡಿಸಿಕೊಂಡು ತನಿಖೆಗೆ ಒಳಪಡಿಸಿದ್ದರು. 

ತನಿಖೆ ವೇಳೆ ವ್ಯಾಪಾರಸ್ಥರು ಕರ್ನಾಟಕದಲ್ಲಿ ಅಡಿಕೆಯನ್ನು ಪಡೆದು ಅದನ್ನು ಕೇರಳದ ವರ್ತಕರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾಸರಗೋಡಿನಿಂದ ಉತ್ತರ ಪ್ರದೇಶಕ್ಕೆ ಸಾಗಣೆ ಮಾಡುತ್ತಿರುವ ರೀತಿ ತೋರಿಸಿದ್ದು ಪತ್ತೆ ಹಚ್ಚಲಾಗಿದೆ.

ಈ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 129(1)(ಬಿ) ಅಡಿಯಲ್ಲಿ ನಕಲಿ ಲೈಸನ್ಸ್ ಪಡೆದಿದ್ದ ಪುತ್ತೂರು ಯೂನಿಯನ್ ಕಾರ್ಗೊ ಮೂವರ್ಸ್‌ ಸಂಸ್ಥೆಗೆ ಒಟ್ಟು 53,10,500 ರೂ. ತೆರಿಗೆ ಮತ್ತು ದಂಡವನ್ನು ವಿಧಿಸಿ ವಸೂಲಿ ಮಾಡಿದ್ದಾಗಿ ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ(ಜಾರಿ) ಉದಯ ಶಂಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Truck carrying Arecanut to Uttar Pradesh illegally with fake documents held at Udupi with a fine of 53 lakhs.