ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆ ; ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ

04-12-20 12:02 pm       Headline Karnataka News Network   ಕ್ರೈಂ

ನೆಹರೂ ಕ್ರೀಡಾಂಗಣಕ್ಕೆ ವಾಕಿಂಗ್ ಗೆಂದು ಹೊರಟಿದ್ದ ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲೆ ದುಷ್ಕರ್ಮಿಗಳು ಲಷ್ಕರ್ ಮೊಹಲ್ಲಾದಲ್ಲಿ ಹಲ್ಲೆ ನಡೆಸಿದ್ದರು.

ಶಿವಮೊಗ್ಗ, ಡಿಸೆಂಬರ್ 03: ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಗರದ ಕೆಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 3 ಗುರುವಾರ ಮಧ್ಯಾಹ್ನದಿಂದ ಶನಿವಾರ, ಡಿ. 5ರ ಬೆಳಿಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.ಗುರುವಾರ ಬೆಳಿಗ್ಗೆ ನೆಹರೂ ಕ್ರೀಡಾಂಗಣಕ್ಕೆ ವಾಕಿಂಗ್ ಗೆಂದು ಹೊರಟಿದ್ದ ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲೆ ದುಷ್ಕರ್ಮಿಗಳು ಲಷ್ಕರ್ ಮೊಹಲ್ಲಾದಲ್ಲಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವಿಷಯ ಹರಡುತ್ತಿದ್ದಂತೆ ಬಜರಂಗದಳದ ಮುಖಂಡರು, ಕಾರ್ಯಕರ್ತರು ಆಸ್ಪತ್ರೆ ಮುಂದೆ ಸೇರಿದ್ದರು. ಹಲ್ಲೆ ಪ್ರಕರಣ ಸಂಬಂಧ ಗುರುವಾರ ಮಧ್ಯಾಹ್ನ ಶಿವಮೊಗ್ಗ ನಗರ ಕೋಟೆ ಠಾಣಾ ವ್ಯಾಪ್ತಿಯಲ್ಲಿ ಎರಡು ಕೋಮಿನ ನಡುವೆ ಜಗಳವಾಗಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಶಾಂತಿ ಕಾಪಾಡುವ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ತಹಶೀಲ್ದಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಡಳಿತದ ಆದೇಶದ ಮೇರೆಗೆ ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದು, ಜನರು‌ ಗುಂಪುಗೂಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮೆರವಣಿಗೆ, ಸಭೆ ಸಮಾರಂಭಗಳನ್ನು ನಡೆಸದಂತೆ ನಿಷೇಧ ಹೇರಲಾಗಿದೆ.

Communal Violence in Shivamogga, Prohibitory orders imposed to be in force from Thursday, December 3 till Saturday, December 5