ಕೊರೊನಾ ಹಣ ; ಮುಗ್ಧ ಮಹಿಳೆಯರನ್ನು ಯಾಮಾರಿಸುತ್ತಿದ್ದ ಯುವಕ ಪೊಲೀಸ್ ಬಲೆಗೆ..!

09-12-20 11:11 am       Mangalore Correspondent   ಕ್ರೈಂ

ಕೊರೊನಾದಲ್ಲಿ ಹಣ ಬಂದಿದೆ ಎಂದು ಹೇಳಿ ಮುಗ್ಧರನ್ನು ಯಾಮಾರಿಸುತ್ತಿದ್ದ ಕತರ್ನಾಕ್ ಆಸಾಮಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌

ಮಂಗಳೂರು, ಡಿ.9: ಮುಗ್ಧ ಮಹಿಳೆಯರೇ ಆತನ ಟಾರ್ಗೆಟ್‌ ಆಗಿದ್ದರು. ಕೊರೊನಾದಲ್ಲಿ ಹಣ ಬಂದಿದೆ ಎಂದು ಹೇಳಿ ಮುಗ್ಧರನ್ನು ಯಾಮಾರಿಸುವುದನ್ನೇ ಆತ ಕಾಯಕ ಮಾಡಿಕೊಂಡಿದ್ದ. ಹೀಗೆ ಮುಗ್ಧರನ್ನು ಯಾಮಾರಿಸಿ ಚಿನ್ನದ ಸರ ಕೀಳುತ್ತಿದ್ದ ಕತರ್ನಾಕ್ ಆಸಾಮಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ‌

ಇತ್ತೀಚೆಗೆ ನ.20ರಂದು ಮಹಿಳೆಯೊಬ್ಬರು ತೊಕ್ಕೊಟ್ಟು ಒಳಪೇಟೆಯಲ್ಲಿ ನಿಂತಿದ್ದಾಗ ಒಬ್ಬಾತ ಬಂದು 'ತನ್ನ ಹೆಸರು ರಾಕೇಶ್‌ ಎಂದು ಹೇಳಿ ಪರಿಚಯ ಮಾಡಿದ್ದ. ತಾನು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಈಗ ಕೊರೊನಾ ಸಲುವಾಗಿ ಅಸ್ಪತ್ರೆಯಲ್ಲಿ 2 ಲಕ್ಷ ರೂ. ನೀಡುತ್ತಿದ್ದಾರೆ. ಇವತ್ತೇ ಹಣ ಸಿಗುತ್ತದೆ, ಅದಕ್ಕೊಂದು ಟೆಸ್ಟ್ ಆಗಬೇಕೆಂದು ಹೇಳಿ ಮಹಿಳೆಯನ್ನು ನಂಬಿಸಿ ಆಸ್ಪತ್ರೆಗೆ ಕರೆದೊಯ್ದಿದ್ದ. ಮಹಿಳೆ ಯುವಕನ ಮಾತನ್ನು ನಂಬಿ, ಆತನ ಜತೆ ರಿಕ್ಷಾದಲ್ಲಿ ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಅಸ್ಪತ್ರೆಗೆ ಹೋಗಿದ್ದಾರೆ.

ಆಸ್ಪತ್ರೆಗೆ ತಲುಪಿದ ಬಳಿಕ, ಟೆಸ್ಟಿಂಗ್ ಚಾರ್ಜ್ ಮತ್ತು  ಡಾಕ್ಟರ್‌ಗೆ ಒಂದಷ್ಟು ಹಣ ಕೊಟ್ಟರೆ ಮಾತ್ರ ನಮಗೆ 2 ಲಕ್ಷ ಸಿಗುತ್ತದೆ ಎಂದು ಯುವಕ ಹೇಳಿದ್ದಾನೆ. ಮಹಿಳೆ ತನ್ನ ಕೈಯಲ್ಲಿದ್ದ 20 ಸಾವಿರ ರೂ. ನೀಡಿದ್ದಾರೆ. ಇದು ಸಾಗಾಕುವುದಿಲ್ಲ, ನಿಮ್ಮ ಬಳಿ ಇದ್ದ ಚಿನ್ನವನ್ನು ಕೊಡಿ. ನನ್ನಲ್ಲಿ ನನ್ನ ತಾಯಿಯ ಚಿನ್ನದ ಸರ ಇದೆ, ಇದನ್ನು ನೀವು ಸದ್ಯಕ್ಕೆ ಇಟ್ಟುಕೊಳ್ಳಿ ಎಂದು ನಕಲಿ ಚಿನ್ನವನ್ನು ನೀಡಿ ಮಹಿಳೆಯ ಬಳಿಯಿದ್ದ 4 ಪವನ್‌ ತೂಕದ ಚಿನ್ನದ ಕರಿಮಣಿ ಸರ ಪಡೆದುಕೊಂಡು ಹೋಗಿದ್ದಾನೆ. ಬಳಿಕ ಯುವಕ ವಾಪಸ್‌ ಬಂದಿರಲಿಲ್ಲ. 

ಕೊನೆಗೂ ಪೊಲೀಸ್‌ ಬಲೆಗೆ ಬಿದ್ದ ಆರೋಪಿ 

ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು, ಮೂಡುಬಿದಿರೆ, ಬಂಟ್ವಾಳ, ಕದ್ರಿ ಸೇರಿದಂತೆ ನಾನಾ ಠಾಣೆಗಳಲ್ಲಿ ಇದೇ ರೀತಿಯ 11 ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮುಸ್ತಫಾ ಎಂದು ಗುರುತಿಸಲಾಗಿದೆ. ಮುಸ್ತಫಾ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಬಾಡಿ ವಾರಂಟ್‌ ಹಾಕಲಾಗಿದೆ. ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಒಂದು ತಿಂಗಳ ಹಿಂದೆ ಇದೇ ರೀತಿಯ ವಂಚನೆ ಪ್ರಕರಣ ನಡೆದಿತ್ತು. ಆರೋಪಿ ಕೊರೊನಾ ಪರಿಹಾರದ ಹಣ ಬಂದಿದೆ ಎಂದು ಹೇಳಿ ಮಹಿಳೆಯನ್ನು ಯಾಮಾರಿಸಿ ಆಕೆಯ ಬಳಿಯಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ.