Shivamogga Murder, Mother: ಶಿವಮೊಗ್ಗ ; ಮಗಳನ್ನು ಮಚ್ಚಿನಿಂದ ಹೊಡೆದು ಕೊಲೆ, ಆಕೆಯ ಹೆಣದ ಮೇಲೆಯೇ ನಿಂತು ಆತ್ಮಹತ್ಯೆಗೆ ಶರಣಾದ ರಾಕ್ಷಸಿ ತಾಯಿ ! 

04-10-25 02:57 pm       HK News Desk   ಕ್ರೈಂ

ಮಲೆನಾಡು ನಗರ ಶಿವಮೊಗ್ಗದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ ಮಗಳನ್ನೇ ಮಚ್ಚಿನಿಂದ ಕೊಲೆಗೈದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ, ಅ 04 : ಮಲೆನಾಡು ನಗರ ಶಿವಮೊಗ್ಗದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ ಮಗಳನ್ನೇ ಮಚ್ಚಿನಿಂದ ಕೊಲೆಗೈದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಳಕಿಗೆ ಬಂದಿದೆ.

ಜಿಲ್ಲಾ ಆಸ್ಪತ್ರೆಯ ನರ್ಸ್ ಕ್ವಾರ್ಟರ್ಸ್‌ನಲ್ಲಿ ನಡೆದ ಈ ಘಟನೆ ಇಡೀ ಬಡಾವಣೆಯನ್ನೇ ಶೋಕದಲ್ಲಿ ಮುಳುಗಿಸಿದೆ.

ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಾಮಣ್ಣ ನಾಯಕ ಅವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ರಾಮಣ್ಣ ನಾಯಕ ಅವರ ಪತ್ನಿ ಶ್ರುತಿ ಮತ್ತು ಮಗಳು ಪೂರ್ವಿಕಾ (6ನೇ ತರಗತಿ ವಿದ್ಯಾರ್ಥಿನಿ) ಮೃತಪಟ್ಟವರು.

ರಾಮಣ್ಣ ಎಂದಿನಂತೆ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟು ಕರೆದರೂ ಬಾಗಿಲು ತೆರೆಯದ ಕಾರಣ, ಅಕ್ಕಪಕ್ಕದ ನಿವಾಸಿಗಳ ಸಹಾಯದಿಂದ ಬಾಗಿಲನ್ನು ಮುರಿದು ಒಳ ಹೋದಾಗ ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಮಗಳು ಪೂರ್ವಿಕಾಳ ಮೃತದೇಹ ನೆಲದ ಮೇಲೆ ಬಿದ್ದಿದ್ದು, ಆಕೆಯ ಶವದ ಮೇಲೆಯೇ ನಿಂತು ತಾಯಿ ಶ್ರುತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಕಂಡು ರಾಮಣ್ಣ ತೀವ್ರ ದಿಗ್ಭ್ರಾಂತಿಗೆ ಒಳಗಾಗಿದ್ದಾರೆ.

ಮೃತ ಶ್ರುತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಇದಕ್ಕಾಗಿ ವೈದ್ಯರಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಅವರ ಮಾನಸಿಕ ಸ್ಥಿತಿ ಆಗಾಗ ಹದಗೆಡುತ್ತಿದ್ದು, ಮನೆಯಲ್ಲಿ ಘರ್ಷಣೆ ವಾತಾವರಣ ಉಂಟಾಗುತ್ತಿತ್ತು. ರಾತ್ರಿ ಪಾಳಿಯ ಕೆಲಸಕ್ಕೆ ರಾಮಣ್ಣ ಹೋದ ನಂತರ, ಮಗಳು ಪೂರ್ವಿಕಾ ತಂದೆಗೆ ವಿಡಿಯೋ ಕಾಲ್ ಮಾಡಿದ್ದಾಳೆ. 'ಅಪ್ಪ, ಅಮ್ಮ ಹೇಗೇಗೋ ಆಡುತ್ತಿದ್ದಾರೆ, ಬೇಗ ಮನೆಗೆ ಬಾ' ಎಂದು ಕರೆದಿದ್ದಾಳೆ. ಅದಕ್ಕೆ ರಾಮಣ್ಣ ನಾಯಕ, 'ಡ್ಯೂಟಿ ಮಾಡ್ತಾ ಇದ್ದೀನಿ ಮಗಳೇ, ಅಮ್ಮ ಸರಿಹೋಗ್ತಾರೆ, ಬೆಳಗ್ಗೆ ಬರ್ತೀನಿ' ಎಂದು ಸಮಾಧಾನ ಹೇಳಿದ್ದಾರೆ. ದುರದೃಷ್ಟವಶಾತ್, ಇದೇ ತಂದೆ ಮತ್ತು ಮಗಳ ನಡುವಿನ ಕೊನೆಯ ಸಂಭಾಷಣೆಯಾಗಿದೆ. ಮನೆಯಲ್ಲಿ ಇದು ಸಾಮಾನ್ಯ ಎನ್ನುವಂತೆ ಸುಮ್ಮನಾಗಿದ್ದ ರಾಮಣ್ಣ ನಾಯಕ ಅವರಿಗೆ ಬೆಳಗ್ಗೆ ಈ ಭೀಕರ ದುರಂತ ಕಾದಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಜಿಲ್ಲಾ ಪೊಲೀಸ್ ವರಿಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 6ನೇ ತರಗತಿ ಓದುತ್ತಿದ್ದ ಮಗಳು ಪೂರ್ವಿಕಾಳ ತಲೆಗೆ ಮಚ್ಚಿನಿಂದ ಹೊಡೆದು ಸಾಯಿಸಿದ ಶ್ರುತಿ, ನಂತರ ಅದೇ ಕೋಣೆಯಲ್ಲಿ ಮಗಳ ಶವದ ಮೇಲೇ ನಿಂತು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಚಿತಪಡಿಸಿದರು. ತಾಯಿ ಶ್ರುತಿಗೆ ಮಾನಸಿಕ ಖಿನ್ನತೆ ಇತ್ತು ಎಂದು ಪತಿ ರಾಮಣ್ಣ ನಾಯಕ ಪೊಲೀಸರಿಗೆ ದೂರು ನೀಡಿದ್ದಾರೆ.

ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮಹಾನವರಾತ್ರಿ ಮತ್ತು ದಸರಾ ಹಬ್ಬದ ಸಡಗರದಲ್ಲಿದ್ದ ನಗರಕ್ಕೆ ಈ ಘಟನೆ ನಿಜಕ್ಕೂ ಆಘಾತ ಮತ್ತು ದುಃಖವನ್ನುಂಟು ಮಾಡಿದೆ. ಮಾನಸಿಕ ಆರೋಗ್ಯದ ನಿರ್ಲಕ್ಷ್ಯದಿಂದ ಇಂತಹ ದೊಡ್ಡ ದುರಂತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

A shocking tragedy in Shivamogga has left the city in grief. Shruthi, reportedly suffering from severe depression, killed her school-going daughter Poovrika with a machete inside their government hospital quarters, before hanging herself from a ceiling fan—standing over her daughter’s body.