ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್‌ಗಳ ನಕಲಿ ವಿಮಾ ಜಾಲ ಪತ್ತೆ ; ಕೋಟ್ಯಂತರ ರೂ. ಹಣ ವಂಚನೆ, ಇಬ್ಬರ ಸೆರೆ 

08-10-25 09:17 am       Udupi Correspondent   ಕ್ರೈಂ

ಶಾಲಾ, ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮಾ ಪಾಲಿಸಿ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್ (33) ಮತ್ತು ಶಿರಸಿಯ ಚರಣ ಬಾಬು ಮೇಸ್ತ ಬಂಧಿತರು.

ಉಡುಪಿ, ಅ 07 : ಶಾಲಾ, ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮಾ ಪಾಲಿಸಿ ಮಾಡಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್ (33) ಮತ್ತು ಶಿರಸಿಯ ಚರಣ ಬಾಬು ಮೇಸ್ತ ಬಂಧಿತರು.

2024ರ ನ.25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಾಡಿ-ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನವೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ರಿಕ್ಷಾದ ಚಾಲಕ ವಿಮಾ ಪರಿಹಾರವಾಗಿ 15,95,000 ರೂ. ಹಣ ನೀಡಬೇಕೆಂದು ಮನವಿ ಮಾಡಿದ್ದರು.

ವಿಮಾ ಕಂಪನಿಯವರು ಪರಿಶೀಲಿಸಿದಾಗ ಶಾಲಾ ಬಸ್ಸಿನ ವಿಮಾ ಪಾಲಿಸಿಯು ನಕಲಿ ಆಗಿರುವುದು ಕಂಡುಬಂದಿದೆ. ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ, ಅದನ್ನು ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಮಾ ಕಂಪನಿಗೆ ಮೋಸ ಮಾಡಿರುವುದಾಗಿ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪನಿಯ ಮ್ಯಾನೇಜರ್​ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ತನಿಖೆ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಶಾಲಾ, ಕಾಲೇಜು ಬಸ್‌ಗಳೇ ಟಾರ್ಗೆಟ್: 

ತನಿಖಾ ತಂಡ ಸೆ.6ರಂದು ಪ್ರಕರಣದ ಆರೋಪಿ ರಾಕೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪನಿಯಲ್ಲಿ ಎಸ್‌ಡಿಒ ಆಗಿದ್ದ ಚರಣ ಬಾಬು ಮೇಸ್ತನ ಜೊತೆ ಸೇರಿಕೊಂಡು ಕುಂದಾಪುರ, ಕೋಟ, ಬ್ರಹ್ಮಾವರ, ಶಿರೂರು, ಭಟ್ಕಳಗಳಲ್ಲಿನ ಶಾಲೆ ಹಾಗೂ ಕಾಲೇಜಿನ ಬಸ್ಸಿಗೆ ವಿಮೆ ಪಾಲಿಸಿ ಮಾಡುವುದಾಗಿ ನಂಬಿಸಿ ನಕಲಿ ವಿಮೆ ಪಾಲಿಸಿ ಮಾಡಿ ಮೋಸ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಚರಣ ಬಾಬು ಮೇಸ್ತನನ್ನು ಪೊಲೀಸರು ಅ.3ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಭಟ್ಕಳ ಹಾಗೂ ಉಡುಪಿ ಕಡೆಯ ಖಾಸಗಿ/ಅನುದಾನಿತ ಶಾಲಾ ಕಾಲೇಜಿನಲ್ಲಿ ಶಾಲಾ ಬಸ್ಸಿನ ವಿಮೆ ಮಾಡಿಸುವುದಾಗಿ ಹಣ ಪಡೆದು ಇದೇ ರೀತಿಯ ಕೃತ್ಯವೆಸಗಿರುವುದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, "ಬಂಧಿತ ಆರೋಪಿಗಳು ನಕಲಿ ವಿಮೆ ಮೂಲಕ ಕೋಟ್ಯಂತರ ರೂ. ಹಣ ವಂಚನೆ ಎಸಗಿದ್ದಾರೆ. ಮಕ್ಕಳು ಇರುವುದರಿಂದ ಶಾಲಾ, ಕಾಲೇಜು ಬಸ್​ಗಳು ನಿಧಾನವಾಗಿಯೇ ಚಲಿಸುತ್ತದೆ ಮತ್ತು ಈ ಬಸ್‌ಗಳು ಅಪಘಾತಕ್ಕೆ ಒಳಗಾಗುವುದು ಬಹಳಷ್ಟು ವಿರಳ ಎಂಬುದಾಗಿ ತಿಳಿದು ಆರೋಪಿಗಳು, ಶಾಲಾ ಕಾಲೇಜು ವಾಹನಗಳನ್ನೇ ಗುರಿಯಾಗಿಸಿಕೊಂಡು ನಕಲಿ ವಿಮೆ ಸೃಷ್ಟಿಸಿದ್ದಾರೆ" ಎಂದು ತಿಳಿಸಿದರು.

"ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಉಡುಪಿ ಜಿಲ್ಲೆಯ ಕುಂದಾಪುರ, ಕೋಟ ಠಾಣಾ ವ್ಯಾಪ್ತಿಯಲ್ಲಿರುವ ಶಾಲೆ/ಕಾಲೇಜಿನ ಶಾಲಾ ಬಸ್ಸಿಗೆ ವಿಮೆ ಮಾಡಿಸುವುದಾಗಿ ಆರೋಪಿಗಳು ಸೇರಿ ಸುಮಾರು 86 ಪಾಲಿಸಿಗಳಲ್ಲಿ 29 ಪಾಲಿಸಿ ನಕಲಿ ಹಾಗೂ 2ನೇ ಆರೋಪಿತ ಒಬ್ಬನೇ 111 ಪಾಲಿಸಿಯಲ್ಲಿ 17 ನಕಲಿ ಪಾಲಿಸಿ ಮಾಡಿ ಒಟ್ಟು 46 ಶಾಲೆ/ಕಾಲೇಜು ವಾಹನಗಳ ವಿಮೆಯನ್ನು ನಕಲಿ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ" ಎಂದರು.

"ಆರೋಪಿಗಳು ಈ ಹಿಂದೆ ರಿಲಾಯನ್ಸ್ ಜನರಲ್ ಇನ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡಿರುವುದರಿಂದ ಹಳೆ ಪಾಲಿಸಿಗಳನ್ನು ಪಿಡಿಎಫ್ ಫೈಲ್​ ಮಾಡಿ ಕಂಪ್ಯೂಟರ್​​ನಲ್ಲಿ ಸಂಗ್ರಹಿಸಿ ಪಿಡಿಎಫ್ ಎಡಿಟರ್ ಆ್ಯಪ್ ಮೂಲಕ ವಿಮೆ ಪಾಲಿಸಿಯಲ್ಲಿ ವಿಮೆ ನಂಬರ್​, ದಿನಾಂಕ, ವಾಹನದ ನಂಬರ್​ ಮತ್ತು ವಿಮೆ ಮೊತ್ತದ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ವಿಮೆ ಪಾಲಿಸಿ ಮಾಡಲು ನೀಡಿದ ಶಾಲಾ /ಕಾಲೇಜಿಗೆ ಕಳುಹಿಸಿರುವುದು ತನಿಖೆಯಿಂದ ತಿಳಿದು ಬಂದಿದೆ" ಎಂದು ಮಾಹಿತಿ ನೀಡಿದರು.

Udupi police have uncovered a large-scale fake insurance scam involving school and college buses across Udupi and Uttara Kannada districts. Two accused — Rakesh S. from Sastana-Kunjikere and Charan Babu Mesta from Sirsi, a former SDO at Reliance General Insurance — were arrested for fabricating fake insurance policies and defrauding institutions of crores of rupees.