ಉಳ್ಳಾಲ ; ಪೊಲೀಸರಿಂದ ಶಂಕಿತ ಕಾರು ಚೇಸಿಂಗ್, ಅಡ್ಡಾದಿಡ್ಡಿ ಚಲಿಸಿ ಪರಾರಿ

28-12-20 01:23 pm       Mangalore Correspondent   ಕ್ರೈಂ

ಕಳವು ಪ್ರಕರಣದಲ್ಲಿ ಶಂಕೆ ಮೇರೆಗೆ ಕಾರೊಂದನ್ನು ಪೊಲೀಸರು ಮತ್ತು ಸಾರ್ವಜನಿಕರು ಚೇಸಿಂಗ್ ಮಾಡಿದ್ದು, ಅನೇಕರಿಗೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಉಳ್ಳಾಲದಲ್ಲಿ ನಡೆದಿದೆ. 

ಉಳ್ಳಾಲ, ಡಿ.28; ಕಳವು ಪ್ರಕರಣದಲ್ಲಿ ಶಂಕೆ ಮೇರೆಗೆ ಬಿಳಿ ಕ್ವಿಡ್ ಕಾರೊಂದನ್ನು ಪೊಲೀಸರು ಮತ್ತು ಸಾರ್ವಜನಿಕರು ಚೇಸಿಂಗ್ ಮಾಡಿದ್ದು, ಯದ್ವಾತದ್ವಾ ಚಲಿಸಿದ ಕಾರು ಅನೇಕರಿಗೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. 

ಬಿಳಿ ಕ್ವಿಡ್ ಕಾರೊಂದನ್ನು ತೊಕ್ಕೊಟ್ಟಿನಲ್ಲಿ ಪೊಲೀಸರು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಕಾರನ್ನು ನಿಲ್ಲಿಸದ ಚಾಲಕ ತೊಕ್ಕೊಟ್ಟು, ಪಂಡಿತ್ ಹೌಸ್, ದಾರಂದಬಾಗಿಲು, ಪಿಲಾರು ಮೂಲಕ ಕೊಲ್ಯ ಹೆದ್ದಾರಿ ಮಾರ್ಗವಾಗಿ ಕೋಟೆಕಾರು ಬೀರಿ ಜಂಕ್ಷನ್ ನಿಂದ ಮಾಡೂರಿಗೆ ಪರಾರಿಯಾಗಿದ್ದಾನೆ.

ಯದ್ವಾ ತದ್ವಾ ಚಲಿಸುತ್ತಿದ್ದ ಕಾರನ್ನು ಪೊಲೀಸರು ಮತ್ತು ದಾರಂದಬಾಗಿಲು, ಪಿಲಾರಿನ ಯುವಕರು ಬೈಕಲ್ಲಿ ಬೆನ್ನಟ್ಟಿದ್ದಾರೆ. ಬಳಿಕ ಬೀರಿ ಹೆದ್ದಾರಿ ಜಂಕ್ಷನ್ ನಲ್ಲಿ ಕಾರು ತಪ್ಪಿಸಿಕೊಂಡಿದೆ ಎನ್ನಲಾಗಿದೆ. ಕಾರಿನ ಧಾವಂತಕ್ಕೆ ಅಂಬಿಕಾ ರೋಡಲ್ಲಿ ಓರ್ವ ಮಹಿಳೆಯು ಕಾರಿನ ಅಡಿಗೆ ಬೀಳುವುದರಿಂದ ಕೂದಲೆಲೆಯ ಅಂತರದಲ್ಲಿ ಪಾರಾಗಿದ್ದಾರೆ. 

ಕೆಲವು ದಿನಗಳಿಂದ ತೊಕ್ಕೊಟ್ಟು, ಉಳ್ಳಾಲ ಆಸುಪಾಸಿನಲ್ಲಿ ಆಡು ಕಳವಿನ ಬಗ್ಗೆ ದೂರು ಕೇಳಿಬಂದಿತ್ತು. ಕ್ವಿಡ್ ಕಾರಿನಲ್ಲಿ ಬರುವ ಕಳ್ಳರು ಮನೆಯಿಂದ ಹೊರಗೆ ಬಿಡುವ ಆಡುಗಳನ್ನು ಹಿಡಿದು ಕಾರಿನಲ್ಲಿ ತುಂಬಿಸ್ಕೊಂಡು ಕಳವು ಮಾಡಲಾಗುತ್ತಿದೆ. ಈಗ ಆಡು, ಕುರಿ ಮಾಂಸಕ್ಕೆ ವಿಪರೀತ ದರ ಆಗಿರುವುದರಿಂದ ಆಡು ಕದಿಯಲು ಶುರು ಮಾಡಿದ್ದಾರೆ.

Police chase a Suspected Kwid car in Ullal, Mangalore during which the car hits many public walking on the road and escapes.