ಫೇಸ್ಬುಕ್ ಗೆಳೆಯನ ದೊಡ್ಡ ಗಿಫ್ಟ್ ಪಡೆಯಲು 13 ಲಕ್ಷ ತೆತ್ತ ಮಹಿಳೆ 

28-12-20 11:13 pm       Mangaluru Correspondent   ಕ್ರೈಂ

ಫೇಸ್ಬುಕ್ ಮೂಲಕ ಪರಿಚಯ ಆಗಿದ್ದ ವ್ಯಕ್ತಿಯ ಮಾತು ನಂಬಿ ಮಹಿಳೆಯೊಬ್ಬರು 13 ಲಕ್ಷ ರೂಪಾಯಿ ಕಳಕೊಂಡ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಡಿ.28: ಫೇಸ್ಬುಕ್ ಮೂಲಕ ಪರಿಚಯ ಆಗಿದ್ದ ವ್ಯಕ್ತಿಯ ಮಾತು ನಂಬಿ ಮಹಿಳೆಯೊಬ್ಬರು 13 ಲಕ್ಷ ರೂಪಾಯಿ ಕಳಕೊಂಡ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎಕ್ಕೂರಿನ ಜೂಲಿಯಾ ಸ್ಯಾಂಟೋಸ್ ಎಂಬ ಮಹಿಳೆಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಫೇಸ್ಬುಕ್ ನಲ್ಲಿ ಡಾ.ಜಿಮ್ ಕಿಯಾ ಎಂಬ ಹೆಸರಲ್ಲಿ ವ್ಯಕ್ತಿಯೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಗೆಳೆಯನಾಗಿಸಿದ ಬಳಿಕ ಅವರಿಬ್ಬರು ಚಾಟಿಂಗ್ ನಡೆಸುತ್ತಿದ್ದರು. ಇತ್ತೀಚೆಗೆ ಮಹಿಳೆಯ ಮಗಳಿಗೆ ದೊಡ್ಡ ಗಿಫ್ಟ್ ನೀಡುವುದಾಗಿ ಸಂದೇಶ ಕಳಿಸಿದ್ದ. 

ಆನಂತರ ಬೇರೆಯದ್ದೇ ವ್ಯಕ್ತಿಯೊಬ್ಬ ತಾನು ಕಸ್ಟಮ್ಸ್ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ತಮ್ಮ ಗಿಫ್ಟ್ ಬಂದಿದ್ದು ಅದನ್ನು ಕಳುಹಿಸಲು ಒಂದಷ್ಟು ಶುಲ್ಕ ಆಗುತ್ತದೆ ಎಂದಿದ್ದಾನೆ. ಅದರಂತೆ, ಬೇರೆ ಬೇರೆ ಖಾತೆಗಳಿಗೆ ಹಣ ರವಾನೆ ಮಾಡಲು ಸೂಚಿಸಿದ್ದಾನೆ. ಮಹಿಳೆ, ಒಂದೊಂದೇ ಖಾತೆಗೆ ಹಣ ರವಾನಿಸಿದ್ದು ಒಟ್ಟು 13.35 ಲಕ್ಷ ರೂ. ಹಣವನ್ನು ಕಳುಹಿಸಿದ್ದಾರೆ. ಹಣ ಕಳಿಸಿದ ಬಳಿಕವೂ, ಗಿಫ್ಟ್ ಬರದೇ ಇರದಿರುವುದನ್ನು ಅರಿತ ಮಹಿಳೆ ತಾವು ಮೋಸ ಹೋಗಿರುವುದನ್ನು ಅರಿತು ಪೊಲೀಸರ ಬಳಿಗೆ ಬಂದಿದ್ದಾರೆ. ಪೊಲೀಸರ ಸೂಚನೆಯಂತೆ, ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ತ ಡಾ. ಜಿಮ್ ಕಿಯಾ ನೀಡುತ್ತೇನೆಂದಿದ್ದ ಗಿಫ್ಟೂ ಇಲ್ಲ. ಇತ್ತ ಕಳುಹಿಸಿದ ಹಣವೂ ಇಲ್ಲ.

A woman from Mangalore was allegedly duped of Rs 13 lakhs by a person she met on Facebook, who claimed from the UK. A person who claimed to be a customs officer demanded a fee to get the parcel released.