Ullal News, Animal Attack, Crime, Kumpala: ಕಣ್ಣು ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ನಿಗೂಢ ಸಾವು ; ಕುಂಪಲ ಬೈಪಾಸಿನಲ್ಲಿ ಘಟನೆ, ಬೀದಿ ನಾಯಿ ದಾಳಿಯೋ, ಕೊಲೆಯೋ?!  ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ದೌಡು 

14-11-25 11:16 am       Mangalore Correspondent   ಕ್ರೈಂ

ಕಣ್ಣಿನ ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ಭೀಕರ ದಾಳಿಗೀಡಾಗಿ ಸಾವನ್ನಪ್ಪಿರುವ ವ್ಯಕ್ತಿಯೋರ್ವನ ಮೃತದೇಹವು ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಸಿಕ್ಕಿದ್ದು, ಕೊಲೆಯೋ ಅಥವಾ ಪ್ರಾಣಿ ದಾಳಿಯಿಂದ ಮೃತಪಟ್ಟಿದ್ದೋ ಎಂಬ ಬಗ್ಗೆ ಶಂಕೆ ಮೂಡಿದೆ.

ಉಳ್ಳಾಲ, ನ.14 : ಕಣ್ಣಿನ ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ಭೀಕರ ದಾಳಿಗೀಡಾಗಿ ಸಾವನ್ನಪ್ಪಿರುವ ವ್ಯಕ್ತಿಯೋರ್ವನ ಮೃತದೇಹವು ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಸಿಕ್ಕಿದ್ದು, ಕೊಲೆಯೋ ಅಥವಾ ಪ್ರಾಣಿ ದಾಳಿಯಿಂದ ಮೃತಪಟ್ಟಿದ್ದೋ ಎಂಬ ಬಗ್ಗೆ ಶಂಕೆ ಮೂಡಿದೆ.

ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (53) ನಿಗೂಢವಾಗಿ ಸಾವನ್ನಪ್ಪಿರುವ ವ್ಯಕ್ತಿ. ಕುಂಪಲ ಬೈಪಾಸಿನ ಸಾಯಿ ಲಾಂಡ್ರಿಯ ಸಿಟೌಟ್ ನಲ್ಲಿ ನೋಟಿನ ಕಂತೆ ಬಿದ್ದಿದ್ದು ರಕ್ತ ಚೆಲ್ಲಿದೆ. ನೋಟಿನ ಕಂತೆಯ ಬಳಿಯೇ ದಯಾನಂದ್ ಅವರ ಒಂದು ಕಣ್ಣಿನ ಗುಡ್ಡೆ ಬಿದ್ದಿದೆ. ಲಾಂಡ್ರಿ ಎದುರಲ್ಲೇ ದಯಾನಂದ್ ಮೇಲೆ ದಾಳಿ ನಡೆದಿದೆ.

ಇಂದು ಬೆಳಗ್ಗೆ ದಯಾನಂದ್ ಸಾಯಿ ಲಾಂಡ್ರಿಯ ಎದುರಿನ ಖೈರುನ್ನೀಸಾ ಎಂಬವರ ಮನೆಯ ಅಂಗಳದಲ್ಲಿ ಜೀವನ್ಮರಣ ಹೋರಾಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆನ್ನಲಾಗಿದೆ. ಪಕ್ಕದಲ್ಲೇ ಮುಖಕ್ಕೆ ರಕ್ತ ಲೇಪಿಸಿದ್ದ ಬೀದಿ ನಾಯಿಯೊಂದು ಇದ್ದು ಜನರನ್ನ ಕಂಡು ಓಡಿ ಹೋಗಿದೆ. ಸ್ಥಳೀಯರು ಘಟನೆ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಯಾನಂದ್ ಸಾವನ್ನಪ್ಪಿದ್ದರು ಎನ್ನಲಾಗಿದೆ. ದಯಾನಂದ್ ಅವರ ಮೂಗಿನ ಎಡ ಭಾಗ ಮತ್ತು ಎಡ ಕಣ್ಣಿನ ಗುಡ್ಡೆ ಕಿತ್ತೋಗಿದ್ದು ಮುಖದ ಎಡ ಭಾಗವೇ ಜರ್ಜರಿತವಾಗಿದೆ. ಘಟನಾ ಸ್ಥಳಕ್ಕೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಮಹಾಬಲ ಶೆಟ್ಟಿ ನೇತೃತ್ವದ ಫಾರೆನ್ಸಿಕ್ ಮತ್ತು ಸೋಕೊ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಸಾಕ್ಷ್ಯ ಕಲೆ ಹಾಕಿದೆ. 

ಮೇಲ್ನೋಟಕ್ಕೆ ಪ್ರಾಣಿ ದಾಳಿಯಿಂದಲೇ ದಯಾನಂದ್ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದ್ದು ಪೊಲೀಸರು ಸಿಸಿ ಕ್ಯಾಮೆರಗಳನ್ನೂ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಸತ್ಯಾಂಶ ಬೆಳಕಿಗೆ ಬರಲಿದೆ. ಕಳ್ಳತನದ ಗೀಳು, ಕುಡಿತದಿಂದಾಗಿ ಪರಿಸರದಲ್ಲಿ ಇವರ ಬಗ್ಗೆ ಅಸಡ್ಡೆ ಇದೆ. ಶವದ ಬಳಿ ಹಣದ ಕಂತೆ ಇರುವುದರಿಂದ ಕಳವುಗೈದದ್ದೋ ಎನ್ನುವ ಶಂಕೆ ಸ್ಥಳೀಯರಲ್ಲಿದೆ. ಹೀಗಾಗಿ ಯಾರೋ ಹೊಡೆದು ಹಾಕಿದ್ದರೋ, ರಕ್ತಸಿಕ್ತವಾಗಿ ಬಿದ್ದಿದ್ದ ವೇಳೆ ನಾಯಿ ದಾಳಿ ನಡೆಸಿದ್ದೋ ಎನ್ನುವ ಮಾತು ಕೇಳಿಬಂದಿದೆ. 

ಕುಂಪಲ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಈ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಅವರು ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಧ್ವನಿ ಎತ್ತಿದ್ದರು. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್., ಎಸಿಪಿ ವಿಜಯ ಕ್ರಾಂತಿ, ಇನ್ಸ್ ಪೆಕ್ಟರ್ ವಿರೂಪಾಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಯಾನಂದ್ ಅವರು ಅವಿವಾಹಿತರಾಗಿದ್ದು ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟಕ್ಕೆ ಬಲಿಯಾಗಿದ್ದರು. ಇಂದು ನಸುಕಿನ ಜಾವ ಮೂರುವರೆ ಗಂಟೆಯ ವರೆಗೆ ದಯಾನಂದ್ ಬೈಪಾಸ್ ಜಂಕ್ಷನ್ ನಲ್ಲೇ ಇದ್ದುದನ್ನ ಸ್ಥಳೀಯ ಹಾಲಿನ ಡೈರಿಯ ಮಾಲಕರು ನೋಡಿದ್ದಾರೆ. ಮೃತ ದಯಾನಂದ್ ಇಬ್ಬರು ಸಹೋದರ, ಇಬ್ಬರು ಸಹೋದರಿಯನ್ನ ಅಗಲಿದ್ದಾರೆ.

A man was found dead under mysterious circumstances, with one eye gouged out and severe facial injuries, in the courtyard of a house near Kumpala Bypass under the Ullal Police Station limits. Police are investigating whether it was a murder or a stray dog attack.