ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ ; ಉತ್ತರ ಪ್ರದೇಶ ಮೂಲದ ಇಬ್ಬರ ಬಂಧನ 

21-11-25 05:11 pm       Udupi Correspondent   ಕ್ರೈಂ

ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದಲ್ಲಿ ಉಡುಪಿ ಕೊಚ್ಚಿನ್ ಶಿಪ್‌ ಯಾರ್ಡ್‌ ಮಲ್ಪೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ, ನ.21 : ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದಲ್ಲಿ ಉಡುಪಿ ಕೊಚ್ಚಿನ್ ಶಿಪ್‌ ಯಾರ್ಡ್‌ ಮಲ್ಪೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ರೋಹಿತ್ ಮತ್ತು ಸಂತ್ರಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಉತ್ತರ ಪ್ರದೇಶದವರು. 

ಆರೋಪಿಗಳನ್ನು ಸುಷ್ಮಾ ಮೆರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಲಾಗಿತ್ತು. ಕೇರಳದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೊಚ್ಚಿನ್ ಶಿಪ್‌ಯಾರ್ಡ್, ಭಾರತೀಯ ನೌಕಾಪಡೆಗೆ ಟಗ್ ಮತ್ತು ಖಾಸಗಿ ಸಂಸ್ಥೆಗಳಿಗೆ ಹಡಗುಗಳನ್ನು ನಿರ್ಮಿಸುವಲ್ಲಿ ತೊಡಗಿಸಿರುವ ಸಂಸ್ಥೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಆರೋಪಿಗಳು ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ, ತಾಂತ್ರಿಕ ಮಾಹಿತಿಗಳನ್ನು ವಾಟ್ಸ್​ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎಂಬ ವಿಚಾರ ಬಯಲಾಗಿದೆ. ಕೇರಳದಲ್ಲಿ ಕೆಲಸ ಮಾಡುವ ಸಮಯದಲ್ಲಿ ರೋಹಿತ್ ಹಲವು ಬಾರಿ ಮಾಹಿತಿ ಹಂಚಿಕೊಂಡಿದ್ದು, ಮಲ್ಪೆಗೆ ಬರುವವರೆಗೂ ಚಟುವಟಿಕೆ ಮುಂದುವರಿದಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ. 

ಈ ಕುರಿತು ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ ನೀಡಿದ ದೂರಿನ ಆಧಾರದಲ್ಲಿ ಉಡುಪಿ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳ ವಿರುದ್ಧ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ, ಗೌಪ್ಯ ಮಾಹಿತಿ ಮಾರಾಟ ನಡೆಸಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

Udupi police have arrested two men from Uttar Pradesh on charges of leaking sensitive information related to the Indian Navy to Pakistan. The arrested individuals, identified as Rohit and Santri, were working at the Cochin Shipyard’s Malpe unit in Udupi.