ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ ಕಳ್ಳನ ಸೆರೆಹಿಡಿದ ಮಂಗಳೂರು ಪೊಲೀಸರು, ನಾಲ್ಕು ದ್ವಿಚಕ್ರ ವಾಹನ ಸೇರಿ, ಎರಡು ಚಿನ್ನದ ಸರ ವಶಕ್ಕೆ 

05-12-25 11:00 pm       Mangalore Correspondent   ಕ್ರೈಂ

ಚಿನ್ನದ ಸರ ಕಸಿದ ಪ್ರಕರಣದ ಬೆನ್ನತ್ತಿದ ಕದ್ರಿ ಠಾಣೆ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಸೆರೆಹಿಡಿದು ನಾಲ್ಕು ದ್ವಿಚಕ್ರ ವಾಹನ ಮತ್ತು ಎರಡು ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.  

ಮಂಗಳೂರು, ಡಿ.5 : ಚಿನ್ನದ ಸರ ಕಸಿದ ಪ್ರಕರಣದ ಬೆನ್ನತ್ತಿದ ಕದ್ರಿ ಠಾಣೆ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಸೆರೆಹಿಡಿದು ನಾಲ್ಕು ದ್ವಿಚಕ್ರ ವಾಹನ ಮತ್ತು ಎರಡು ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.  

ಆರೋಪಿಯನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ವೆಲ್ಲಟ್ಟಿ ವೀಡು, ವಲಿಯರ್ತಲ ನಿವಾಸಿ ಆದಿತ್ ಗೋಪಾನ್ @ ಮುತ್ತು ಕೃಷ್ಣ (32) ಎಂದು ಗುರುತಿಸಲಾಗಿದೆ. ಕಳೆದ ನ.21ರಂದು ಸಂಜೆ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ದ ಮಹಿಳೆಯು ತನ್ನ ಮನೆಯ ಬಳಿಯಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರವನ್ನು ಕಸಿದುಕೊಂಡು ಹೋದ ಬಗ್ಗೆ  ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಡಿ.4 ರಂದು ಆರೋಪಿಯ ಬಗ್ಗೆ ವಿಶೇಷ ತಂಡಕ್ಕೆ ದೊರೆತ ಮಾಹಿತಿಯಂತೆ ಕದ್ರಿ ಜೋಗಿ ಮಠದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದವಾಗಿ ದ್ವಿಚಕ್ರ ವಾಹನ ಸಂಖ್ಯೆ KA19HC6946 ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ಈ ವಾಹನವು  ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ವಾಹನವೆಂದು ತಿಳಿದುಬಂದಿದೆ. 

ಆತನನ್ನು ವಿಚಾರಿಸಿದಾಗ ಆರೋಪಿ ಕಳ್ಳತನ ಮಾಡಿದ ದ್ವಿಚಕ್ರ ವಾಹನವನ್ನು ಬಳಸಿಕೊಂಡು ವಯೋವೃದ್ದರು, ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಡಿ.05 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

ಸದ್ರಿ ಆರೋಪಿಯ ವಿಚಾರಣೆಯನ್ನು ನಡೆಸಿದಾಗ, ಹಲವು ಪ್ರಕರಣಗಳಲ್ಲಿ ಕಳವಾದ ಸೊತ್ತುಗಳನ್ನು ಸ್ವಾಧೀನ ಪಡಿಸಲಾಗಿದೆ. ಕದ್ರಿ ಬಟ್ಟಗುಡ್ಡೆ ಬಳಿ ವಯೋವೃದ್ದ ಮಹಿಳೆಯ 1.5 ಪವನ್ ಸರವನ್ನು ಸುಲಿಗೆ ಮಾಡಿದ ಪ್ರಕರಣ, ಸೆ.27ರಂದು ಮುಲ್ಕಿ  ಠಾಣಾ ವ್ಯಾಪ್ತಿಯ ಕೋಟೆಕೇರಿ ಬಳಿ ಒಂಟಿ ಮಹಿಳೆಗೆ ಚೂರಿ ತೋರಿಸಿ ಬೆದರಿಸಿ 2 ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿರ ಪ್ರಕರಣ, ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣ, ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣ, ಸುರತ್ಕಲ್ ಠಾಣೆ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿ ನಡೆಸಿದ ದ್ವಿಚಕ್ರ ವಾಹನ ಕಳವು ಪ್ರಕರಣ, ಸುರತ್ಕಲ್ ಠಾಣಾ  ವ್ಯಾಪ್ತಿಯ ಅಗರಮೇಲು ಬಳಿ ನಡೆಸಿದ  ದ್ವಿ ಚಕ್ರ ವಾಹನ ಕಳವು ಪ್ರಕರಣವನ್ನು ಪತ್ತೆ ಮಾಡಲಾಗಿದೆ. 

ಎಲ್ಲಾ ಪ್ರಕರಣಗಳು ಒಟ್ಟು ಸೇರಿ  ಆರೋಪಿಯಿಂದ 4 ದ್ವಿ ಚಕ್ರ ವಾಹನ ಮತ್ತು ಚಿನ್ನಾಭರಣ ಸಮೇತ ಒಟ್ಟು 5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಆರೋಪಿಯ ಮೇಲೆ ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ಮನೆಗಳಿಗೆ ಹೊಂಚು ಹಾಕಿ 4 ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸವನ್ನು  ಅನುಭವಿಸಿ ಬಿಡುಗಡೆಗೊಂಡಿದ್ದ. ಈತನು ಅಂತರ್ ರಾಜ್ಯ ಕುಖ್ಯಾತ ಕಳ್ಳನಾಗಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ರೈಲಿನಲ್ಲಿ ಭಾರತ ದೇಶದ ಎಲ್ಲಾ ಕಡೆ ಸುತ್ತಾಡಿಕೊಂಡು ರೈಲ್ವೇ ನಿಲ್ದಾಣದ ಬಳಿ ಆಸುಪಾಸಿನಲ್ಲಿ ಇರುವ  ದ್ವಿಚಕ್ರ ವಾಹನ ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದ. ನಂತರ ರೈಲಿನಲ್ಲಿ ವಿವಿಧ ಕಡೆ ಪ್ರಯಾಣ ಮಾಡಿ ತಲೆಮರೆಸಿಕೊಳ್ಳುತ್ತಿದ್ದ. 

ಪ್ರಕರಣವನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ ಮತ್ತು ಕದ್ರಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಚರಣೆಯನ್ನು ನಡೆಸಿ ಪತ್ತೆ ಮಾಡಿರುತ್ತಾರೆ.

The Kadri Police in Mangaluru have arrested a notorious inter-state thief, recovering four stolen two-wheelers and two gold chains valued at around ₹5 lakh.  The accused has been identified as Adit Gopan @ Muthu Krishna (32), a resident of Thiruvananthapuram district, Kerala.