ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ; ಕೊಣಾಜೆ ಗುಪ್ತ ವಾರ್ತೆ ಪೊಲೀಸ್ ಅಮಾನತು !!

31-12-20 12:03 pm       Mangalore Correspondent   ಕ್ರೈಂ

ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ನೀಡಿರುವ ಆರೋಪದಡಿ ಕೊಣಾಜೆ ಪೊಲೀಸ್ ಸಿಬ್ಬಂದಿ ಅಶೋಕ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. 

ಕೊಣಾಜೆ, ಡಿ.31:ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ನೀಡಿರುವ ಆರೋಪದಡಿ ಕೊಣಾಜೆ ಪೊಲೀಸ್ ಠಾಣೆಯ ಸ್ಪೆಷಲ್ ಬ್ರಾಂಚ್(ಗುಪ್ತ ವಾರ್ತೆ) ಪೊಲೀಸ್ ಸಿಬ್ಬಂದಿ ಅಶೋಕ್ ಕುಮಾರ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. 

ಕೊಣಾಜೆ ಠಾಣೆ ವ್ಯಾಪ್ತಿಯ ಚೇಳೂರು ಎಂಬಲ್ಲಿ ಅಕ್ರಮ ಮರಳು ಸಂಗ್ರಹ ಮಾಡಲಾಗುತ್ತಿದ್ದು ಅಕ್ರಮ ಅಡ್ಡೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವುದು ಕೊಣಾಜೆ ಠಾಣೆಯ ಗುಪ್ತವಾರ್ತೆ ಪೊಲೀಸ್ ಸಿಬ್ಬಂದಿಗೆ ತಿಳಿದಿದ್ದರೂ ಮಾಹಿತಿ ನೀಡಿಲ್ಲ ಎಂದು ಪೊಲೀಸ್ ಆಯುಕ್ತರಿಗೆ ಭೂ ಮತ್ತು ಗಣಿ ವಿಜ್ನಾನ ಇಲಾಖಾಧಿಕಾರಿಗಳು ದೂರು ನೀಡಿದ್ದರು. 

ಈ ಬಗ್ಗೆ ಕಾನೂನು ಸುವ್ಯವಸ್ಥೆಯ ಡಿಸಿಪಿ ಹರಿರಾಂ ಅವರು ಪರಿಶೀಲನೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಅಶೋಕ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎನ್ನಲಾಗುತ್ತಿದೆ. ಅಶೋಕ್ ಅವರು ಕಳೆದ ಸುಮಾರು ಏಳು ವರ್ಷದಿಂದ ಕೊಣಾಜೆ ಠಾಣೆಯಲ್ಲಿ ಗುಪ್ತವಾರ್ತೆ ಸಿಬ್ಬಂದಿಯಾಗಿ ಸೇವೆಯಲ್ಲಿದ್ದರು.

SB of Konaje Police Station Anand Kumar had been Suspended by Mangalore Police Commissioner Vikas Kumar for links with Sand Smugglers.