Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನ ಬರ್ಬರ ಕೊಲೆ, ಒಡಹುಟ್ಟಿದ ಅಣ್ಣನಿಂದಲೇ ಬೀದಿ ಹೆಣವಾದ ತಮ್ಮ !

16-01-26 09:01 pm       HK News Desk   ಕ್ರೈಂ

ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ, ಜ.16: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಅಣ್ಣ ಮತ್ತು ಆತನ ಮಕ್ಕಳೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯೋಗೇಶ್​ (35) ಕೊಲೆಯಾದ ವ್ಯಕ್ತಿ. ಈತನ ಮದುವೆ ನಿಶ್ಚಯವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಜೀವನ ಆರಂಭಿಸಲಿದ್ದ. ಆದರೀಗ ಆಸ್ತಿಗಾಗಿ ಈತನ ಪ್ರಾಣವನ್ನೇ ತೆಗೆದಿದ್ದಾರೆ.

ಆಸ್ತಿಗಾಗಿ ಸ್ವಂತ ಅಣ್ಣ ಮತ್ತು ಆತನ ಮಕ್ಕಳು ಸೇರಿಕೊಂಡು ತಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಣ್ಣ ಲಿಂಗರಾಜ್ (ನಿಂಗರಾಜು), ಅಣ್ಣನ ಮಕ್ಕಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಮನೆಯ ಕೊಟ್ಟಿಗೆಯಲ್ಲಿ ಇದ್ದಾಗ ಅಣ್ಣ ಮತ್ತು ಅಣ್ಣನ ಮಕ್ಕಳು ಹರಿತವಾದ ಆಯುಧಗಳೊಂದಿಗೆ ಬಂದು ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ಬಳಿಕ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳ ವಿರುದ್ಧ ಇಡೀ ಗ್ರಾಮಸ್ಥರೇ ರೊಚ್ಚಿಗೆದ್ದಿದ್ದಾರೆ. ಕೊಲೆಗಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನೂ ಈ ಹತ್ಯೆಯ ಸುದ್ದಿ ತಿಳಿದ ಗ್ರಾಮಸ್ಥರು ಕೋಪಗೊಂಡು ಅಣ್ಣ ನಿಂಗರಾಜು ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿ, ಪೀಠೋಪಕರಣಗಳನ್ನು ನಾಶಪಡಿಸಿದ್ದಾರೆ. ಟಿವಿ, ಫ್ರಿಜ್ ಸೇರಿದಂತೆ ವಿವಿಧ ವಸ್ತುಗಳನ್ನು ಪುಡಿಪುಡಿ ಮಾಡಿದರು. ಗ್ರಾಮಸ್ಥರ ಆಕ್ರೋಶವನ್ನು ಸಮಾಧಾನಿಸಲು ಕೆರಗೋಡು ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾದರು. ಯಾವುದೇ ಹೆಚ್ಚುವರಿ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

19 ಎಕರೆ ಜಮೀನಿನ ವಂಚನೆಯ ಜಾಲ ;

ಈ ಭೀಕರ ಹತ್ಯೆಯ ಹಿಂದೆ ಬರೋಬ್ಬರಿ 19 ಎಕರೆ ಜಮೀನಿನ ವಿವಾದವಿದೆ. ತಂದೆಯ ನಿಧನದ ಬಳಿಕ ಸಂಸಾರದ ಜವಾಬ್ದಾರಿ ಹೊತ್ತಿದ್ದ ಅಣ್ಣ ಲಿಂಗರಾಜು, ಇಡೀ ಕುಟುಂಬಕ್ಕೆ ದ್ರೋಹ ಎಸಗಿದ್ದ ಎನ್ನಲಾಗಿದೆ. ಒಟ್ಟು 12 ಎಕರೆ ಪಿತ್ರಾರ್ಜಿತ ಆಸ್ತಿ ಹಾಗೂ ತಾಯಿಯ ಹೆಸರಿನಲ್ಲಿದ್ದ 6 ಎಕರೆ ಜಮೀನನ್ನು ಸಹೋದರ-ಸಹೋದರಿಯರಿಗೆ ಪಾಲು ನೀಡದೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದನು. ಅಷ್ಟೇ ಅಲ್ಲದೆ, ಮೈಸೂರು ಮತ್ತು ಮಂಡ್ಯದಲ್ಲಿದ್ದ 4 ನಿವೇಶನಗಳನ್ನೂ ತನ್ನ ಹೆಸರಿಗೆ ವರ್ಗಾಯಿಸಿಕೊಂಡು, ನಂತರ ಅವುಗಳನ್ನು ತನ್ನಿಂದ ಕಿತ್ತುಕೊಳ್ಳಲಾಗದಂತೆ ತನ್ನ ಪತ್ನಿಯ ಹೆಸರಿಗೆ ಖಾತೆ ಮಾಡಿಸಿದ್ದ ಎನ್ನಲಾಗಿದೆ.

A 35-year-old man, who was to get married in four days, was brutally murdered in Mandya’s Mayappanahalli village over a property dispute. Family members allege that the victim was killed by his own elder brother and nephews, triggering public outrage, vandalism of the accused’s house, and heightened police security as investigations continue.