ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕಾರವಾರದಲ್ಲಿ ವೈದ್ಯ ಸಾವಿಗೆ ಶರಣು, ಮೂವರನ್ನು ಬಂಧಿಸಿದ ಪೊಲೀಸರು, ಕೇರಳ ಮಾದರಿಯಲ್ಲೇ ಮತ್ತೊಂದು ಕೃತ್ಯ! 

24-01-26 02:13 pm       HK News Staffer   ಕ್ರೈಂ

ಅವಧಿ ಮೀರಿದ ಮಾತ್ರೆ ನೀಡಿದ್ದಾರೆಂದು ವಿಡಿಯೋ ವೈರಲ್ ಮಾಡಿದ್ದಕ್ಕೆ ನೊಂದುಕೊಂಡು ವೈದ್ಯರೊಬ್ಬರು ಡಬಲ್ ಬ್ಯಾರಲ್ ಗನ್ ನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದ್ದು ಘಟನೆ ಸಂಬಂಧಿಸಿ ವಿಡಿಯೋ ವೈರಲ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ಕಾರವಾರ, ಜ.24: ಅವಧಿ ಮೀರಿದ ಮಾತ್ರೆ ನೀಡಿದ್ದಾರೆಂದು ವಿಡಿಯೋ ವೈರಲ್ ಮಾಡಿದ್ದಕ್ಕೆ ನೊಂದುಕೊಂಡು ವೈದ್ಯರೊಬ್ಬರು ಡಬಲ್ ಬ್ಯಾರಲ್ ಗನ್ ನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದ್ದು ಘಟನೆ ಸಂಬಂಧಿಸಿ ವಿಡಿಯೋ ವೈರಲ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಹಟ್ಟಿಕೇರಿಯಲ್ಲಿ ಕಾರವಾರದ ಪಿಕಳೆ ನರ್ಸಿಂಗ್ ಹೋಂನಲ್ಲಿ ಸಹಾಯಕ ವೈದ್ಯರಾಗಿದ್ದ ರಾಜೀವ ಪಿಕಳೆ ಆತ್ಮಹತ್ಯೆ  ಮಾಡಿಕೊಂಡವರು. ಹದಿನೈದು ದಿನದ ಹಿಂದೆ ಕಾರವಾರದ ಪಿಕಳೆ ನರ್ಸಿಂಗ್ ಹೋಂ ನಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಯನ್ನ ಕೊಟ್ಟಿದ್ದಾರೆಂದು ಮರುದಿನ ಬಂದ ರೋಗಿ ಕಡೆಯವರು, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವಧಿ ಮೀರಿದ ಮಾತ್ರೆಯನ್ನ ಕೊಟ್ಟು ಜೀವಕ್ಕೆ ಕುತ್ತು ತರುತ್ತೀರಿ ಎಂದು ವಿಡಿಯೋ ಮಾಡಿದ್ದು ರಾಜೀವ್ ಪಿಕಳೆಗೆ ಜೀವ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಲಾಗಿತ್ತು. ರಾಜೀವ್ ಪಿಕಳೆಯವರು, ಇದು ಕಣ್ತಪ್ಪಿನಿಂದ ಆಗಿದ್ದು, ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳ್ತೀನಿ ಎಂದಿದ್ದರು. ಆದರೆ ವಿಡಿಯೋ ವೈರಲ್ ಆಗಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 

ಶುಕ್ರವಾರ ಬೆಳಗ್ಗೆ ರಾಜೀವ ಪಿಕಳೆ ಮನೆಯಲ್ಲಿದ್ದಾಗ ತನ್ನ ರಕ್ಷಣೆಗೆ ಇಟ್ಟುಕೊಂಡಿದ್ದ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ, ಮನೆ ಕೆಲಸಕ್ಕೆ ಒಬ್ಬರು ಮಹಿಳೆಯನ್ನು ಇಟ್ಟುಕೊಂಡಿದ್ದರು. ಅವರು ಬೆಳಗ್ಗೆ ಕೆಲಸಕ್ಕೆ ಬಂದಾಗ, ರಾಜೀವ ಪಿಕಳೆ ತಲೆ ಒಡೆದುಕೊಂಡು ನೆಲಕ್ಕೆ ಬಿದ್ದಿದ್ದರು.‌ ವಾರದ ಹಿಂದಷ್ಟೇ ಕೇರಳದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಯುವತಿಯೊಬ್ಬಳು ತನಗೆ ಬಸ್ಸಿನಲ್ಲಿ ಕಿರುಕುಳ ನೀಡಿದ್ದಾಗಿ ಆರೋಪಿಸಿ ಯುವಕನ ಬಗ್ಗೆ ವಿಡಿಯೋ ವೈರಲ್ ಮಾಡಿದ್ದರು. ಇದರಿಂದ ನೊಂದುಕೊಂಡ ಯುವಕ ದೀಪಕ್ ತಾನು ತಪ್ಪು ಮಾಡಿಲ್ಲವೆಂಬ ನೋವಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. 

ಇದೀಗ ವೈದ್ಯರ ಸಾವಿಗೆ ಕಾರಣವಾದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿರುವ ಘಟನೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ್, ಹರಿಶ್ಚಂದ್ರ ಹಾಗೂ ಅನಿಲ್ ಎನ್ನುವವರನ್ನು ಬಂಧಿಸಿದ್ದಾರೆ. ಅಂಕೋಲಾ ಠಾಣಾ ಪೊಲೀಸರು ವಿಡಿಯೋ ವೈರಲ್ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

A tragic incident was reported from Aversa village in Ankola taluk, Karwar district, where a doctor died by suicide after a video accusing him of administering expired medicine was circulated on social media. Police have arrested three persons in connection with the case.