ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವಹಿವಾಟು ; ಸೈಬರ್ ವಂಚಕರು ಬಳಸಿರುವ ಸಾಧ್ಯತೆ, 50ಕ್ಕೂ ಹೆಚ್ಚು ಖಾತೆಗಳಿಂದ ಹಣ ವರ್ಗಾವಣೆ ಪತ್ತೆ, ಪೊಲೀಸರೇ ಶಾಕ್ ! 

06-02-26 01:36 pm       HK News Desk   ಕ್ರೈಂ

ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ವೇಳೆ, ಹುಬ್ಬಳ್ಳಿ ಮೂಲದ ಆಟೋ ಚಾಲಕನೊಬ್ಬನ ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂ. ಹಣಕಾಸು ವಹಿವಾಟು ನಡೆದಿರುವುದು ಪತ್ತೆಯಾಗಿದ್ದು, ಸ್ವತಃ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ.

ಹುಬ್ಬಳ್ಳಿ, ಫೆ.05 : ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ವೇಳೆ, ಹುಬ್ಬಳ್ಳಿ ಮೂಲದ ಆಟೋ ಚಾಲಕನೊಬ್ಬನ ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂ. ಹಣಕಾಸು ವಹಿವಾಟು ನಡೆದಿರುವುದು ಪತ್ತೆಯಾಗಿದ್ದು, ಸ್ವತಃ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ.

ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಬೆಂಗಳೂರಿನ ಸೈಬರ್ ಕಮಾಂಡ್ ಸೆಂಟರ್‌ಗೆ ಇತ್ತೀಚೆಗೆ ಹಲವು ದೂರುಗಳು ದಾಖಲಾಗಿದ್ದವು. ಬಹುತೇಕ ದೂರುದಾರರು ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಉಲ್ಲೇಖಿಸಿದ್ದರು. ಪರಿಶೀಲನೆ ನಡೆಸಿದಾಗ, ಆ ಖಾತೆ ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ, ಬೆಂಗಳೂರು ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳು ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಸಿಇಎನ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು ಪರಿಶೀಲಿಸಿದಾಗ ಗೋಪನಕೊಪ್ಪ ನಿವಾಸಿ ಇರ್ಫಾನ್ ಎಂಬುವವರಿಗೆ ಸೇರಿದ್ದ ಖಾತೆಯೆಂದು ತಿಳಿದುಬಂದಿದೆ. ಇರ್ಫಾನ್ ಆಟೋ ಚಾಲಕನಾಗಿದ್ದು, ಕೆಲವೊಮ್ಮೆ ಅಡುಗೆ ಮತ್ತು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿದಾಗ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಇರ್ಫಾನ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಜಮೆಯಾಗಿರುವುದು ಹಾಗೂ ಆ ಖಾತೆಯಿಂದ 50ಕ್ಕೂ ಹೆಚ್ಚು ಬೇರೆ ಬೇರೆ ಖಾತೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಗೊಂಡಿರುವುದು ಪತ್ತೆಯಾಗಿದೆ. ಇರ್ಫಾನ್ ‘ಕುಕ್ಕಿಂಗ್ ವಿತ್ ಕೇಟರಿಂಗ್’ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಖಾತೆ ತೆರೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯಲ್ಲಿ ಸದ್ರಿ ಖಾತೆಯನ್ನು ಸೈಬರ್ ವಂಚಕರು ದುರುಪಯೋಗ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಇರ್ಫಾನ್ ತನ್ನ ಸಂಬಂಧಿಕರ ಕೆಲ ಖಾತೆಗಳಿಗೆ ಕೂಡ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಯಾವೆಲ್ಲ ಖಾತೆಗಳಿಂದ ಹಣ ಜಮೆಯಾಗಿದೆ ಮತ್ತು ಯಾರ ಖಾತೆಗಳಿಗೆ ಹಣ ವರ್ಗಾವಣೆಗೊಂಡಿದೆ ಎಂಬುದರ ಸಂಪೂರ್ಣ ವಿವರಗಳನ್ನು ಬ್ಯಾಂಕ್‌ನಿಂದ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಇರ್ಫಾನ್‌ಗೆ ನೋಟಿಸ್ ನೀಡಲಾಗಿದ್ದು, ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದಾನೋ ಅಥವಾ ಅವನ ಖಾತೆಯನ್ನು ವಂಚಕರು ದುರುಪಯೋಗ ಮಾಡಿಕೊಂಡಿರುವರೋ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಲಾಗಿದ್ದು, ಇರ್ಫಾನ್ ಪಾತ್ರದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

During the investigation of cyber fraud cases, police were shocked to discover that crores of rupees had been transacted through the bank account of an auto-rickshaw driver from Hubballi.  Several complaints recently filed at the Bengaluru Cyber Command Centre mentioned the same bank account number. Upon verification, the account was found to belong to a branch of Bank of Baroda in Keshwapur, Hubballi. The information was then passed on to the Hubballi CEN Police Station for further investigation.