8 ತಿಂಗಳ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಪಿಯು ವಿದ್ಯಾರ್ಥಿನಿಯರು ಪತ್ತೆ: ಒಬ್ಬಳು ಮದುವೆಯಾಗಿ ಗರ್ಭಿಣಿ, ಆಧಾರ್‌ ಸುಳಿವಿನಿಂದ CIDಗೆ ಸಿಕ್ಕ ಜಾಡು!

09-09-26 12:16 pm       HK News Staffer   ಕ್ರೈಂ

ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರಿನ ವಿದ್ಯಾರಣ್ಯಪುರ ಮೂಲದ ಇಬ್ಬರು ಪಿಯು ವಿದ್ಯಾರ್ಥಿನಿಯರನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಪತ್ತೆಹಚ್ಚಿದ್ದಾರೆ.

ಬೆಂಗಳೂರು, ಸೆ.9: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರಿನ ವಿದ್ಯಾರಣ್ಯಪುರ ಮೂಲದ ಇಬ್ಬರು ಪಿಯು ವಿದ್ಯಾರ್ಥಿನಿಯರನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಪತ್ತೆಹಚ್ಚಿದ್ದಾರೆ.

ಜನವರಿ 31ರಂದು ಇಬ್ಬರು ವಿದ್ಯಾರ್ಥಿನಿಯರು ಏಕಕಾಲದಲ್ಲಿ ನಾಪತ್ತೆಯಾಗಿದ್ದರು. ಅವರ ಪೈಕಿ ಒಬ್ಬಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ಮತ್ತೊಬ್ಬಳು ಪ್ರಥಮ ಪಿಯುಸಿ ಓದುತ್ತಿದ್ದಳು. ಇಬ್ಬರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿನಿಯರ ಪತ್ತೆಗೆ ವ್ಯಾಪಕ ಹುಡುಕಾಟ ನಡೆಸಿದ್ದರು. ಈ ನಡುವೆ ಇಬ್ಬರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಸಿಕ್ಕಿತ್ತು. ಅಲ್ಲಿ ಅವರು ಮಗುವಿನೊಂದಿಗೆ ಆಟವಾಡುತ್ತಿದ್ದಾಗ, ಮಗುವಿನ ತಾಯಿ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಆದರೆ ಬಳಿಕ ಮತ್ತೆ ವಿದ್ಯಾರ್ಥಿನಿಯರ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಹೈಕೋರ್ಟ್‌ ಮೊರೆ ಹೋದ ಕುಟುಂಬಸ್ಥರು:

ವಿದ್ಯಾರ್ಥಿನಿಯರು ಪತ್ತೆಯಾಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹೈಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣ ದಾಖಲಾದ ಐದಾರು ತಿಂಗಳ ಬಳಿಕ ಹೈಕೋರ್ಟ್‌ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಅಧಿಕಾರಿಗಳು ವಿದ್ಯಾರ್ಥಿನಿಯರ ಪತ್ತೆಗೆ ವಿಶೇಷವಾಗಿ ಹುಡುಕಾಟ ನಡೆಸುತ್ತಿದ್ದರು. ವಿದ್ಯಾರ್ಥಿನಿಯರ ಕುರಿತು ಯಾವುದೇ ಮಾಹಿತಿ ದೊರೆತರೆ ತಿಳಿಸುವಂತೆ ವಿವಿಧ ಮೂಲಗಳ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವನ್ನೂ ನಡೆಸಿದ್ದರು.

ಆಧಾರ್‌ ನಂಬರ್‌ನಿಂದ ಸಿಕ್ಕ ಮಹತ್ವದ ಸುಳಿವು

ಈ ನಡುವೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹೊಸ ಸಿಮ್‌ ಕಾರ್ಡ್‌ ಖರೀದಿಸಲು ತೆರಳಿದ್ದಳು. ಈ ವೇಳೆ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಬಳಸಿದ್ದರಿಂದ ಸರ್ವಿಸ್‌ ಪ್ರೊವೈಡರ್‌ ವ್ಯವಸ್ಥೆಯಲ್ಲಿ ದಾಖಲಾಗಿದ್ದ ಮಾಹಿತಿ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಸುಳಿವನ್ನು ಆಧರಿಸಿ ತನಿಖೆ ಮುಂದುವರಿಸಿದ ಸಿಐಡಿ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿನಿಯರಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ.

ಬಳಿಕ ಅವರ ನಾಪತ್ತೆಯ ಹಿಂದಿನ ಘಟನೆಗಳ ಕುರಿತು ಮಾಹಿತಿ ಕಲೆಹಾಕಿದಾಗ, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಕುಟುಂಬದ ಒತ್ತಡದಿಂದ ಸುಳ್ಳು ಹೇಳಿದ್ದಳು:

ಕುಟುಂಬದಲ್ಲಿ ಎದುರಾಗಿದ್ದ ಒತ್ತಡದಿಂದಾಗಿ ವಿದ್ಯಾರ್ಥಿನಿ ಯುವಕನ ಬಳಿ ತನ್ನ ಕುಟುಂಬದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಳು. ತನ್ನೊಂದಿಗೆ ಇರುವ ವಿದ್ಯಾರ್ಥಿನಿ ತನ್ನ ತಂಗಿ, ತಮ್ಮೊಂದಿಗೆ ತಾಯಿ-ತಂದೆ ಅಥವಾ ಕುಟುಂಬಸ್ಥರು ಯಾರೂ ಇಲ್ಲ ಎಂದು ಹೇಳಿದ್ದಳು ಎನ್ನಲಾಗಿದೆ. ಇದಾದ ಬಳಿಕ ಇಬ್ಬರು ವಿದ್ಯಾರ್ಥಿನಿಯರು ಆ ಯುವಕನೊಂದಿಗೆ ತೆರಳಿದ್ದರು. ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆ ಯುವಕನನ್ನು ಮದುವೆಯಾಗಿದ್ದು, ಆತನೊಂದಿಗೆ ಸಂಸಾರ ನಡೆಸುತ್ತಿದ್ದಳು ಎಂಬುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿ ಈಗ ಗರ್ಭಿಣಿ

ಎಂಟು ತಿಂಗಳ ಬಳಿಕ ಇಬ್ಬರು ವಿದ್ಯಾರ್ಥಿನಿಯರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಅವರ ಹೇಳಿಕೆಗಳು ಹಾಗೂ ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಳ್ಳುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರನ್ನು ಇಂದು ಪೊಲೀಸರು ಹೈಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ.