ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ್ಣ ಪುಟ್ಟ ಖರ್ಚಿಗೆ 40 ಲಕ್ಷ, ಜೆಸಿಬಿ ಕೆಲಸಕ್ಕೆ 70 ಲಕ್ಷ,30 ಲಕ್ಷ ಸೆಲ್ಫ್ ಡ್ರಾ! ವ್ಯವಸ್ಥಾಪನಾ ಸಮಿತಿ ಬರ್ಖಾಸ್ತು ಮಾಡದಿದ್ದರೆ ಜನಾಂದೋಲನ

08-09-26 08:27 am       HK News Staffer   ಕರಾವಳಿ

ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ನಿಯಮಗಳನ್ನು ಮೀರಿ ವ್ಯವಹಾರ ನಡೆಸುತ್ತಿದ್ದು, ವ್ಯವಸ್ಥಾಪನ ಸಮಿತಿಯನ್ನು ಅಮಾನತಿನಲ್ಲಿಟ್ಟು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಪುತ್ತೂರು, ಸೆ.7 : ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ನಿಯಮಗಳನ್ನು ಮೀರಿ ವ್ಯವಹಾರ ನಡೆಸುತ್ತಿದ್ದು, ವ್ಯವಸ್ಥಾಪನ ಸಮಿತಿಯನ್ನು ಅಮಾನತಿನಲ್ಲಿಟ್ಟು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಸೋಮವಾರ ಈ ಕುರಿತ ದಾಖಲೆಗಳನ್ನು ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ ವೇದಿಕೆಯ ಪ್ರಮುಖರಾದ ದಿನೇಶ್ ಕುಮಾರ್ ಜೈನ್, ಹರಿಪ್ರಸಾದ್ ಶೆಟ್ಟಿ ಮೊದಲಾದವರು ದೇವರ ಭೂಮಿಯ ಅವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರದ ತನಿಖೆಯಾಗಬೇಕು, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಯವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಸೆ.21 ರಂದು ಭಕ್ತರ ಸಭೆಯನ್ನು ಜನಾಂದೋಲನದ ಮುಖಾಂತರ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ದೇವಸ್ಥಾನದ ಈಗಿನ ಆಡಳಿತ ಮಂಡಳಿ ಅಧಿಕಾರಿ ವಹಿಸಿಕೊಂಡ ಬಳಿಕ 2025 ಜನವರಿಯಿಂದ ಡಿಸೆಂಬರ್‍ ವರೆಗೆ ಮತ್ತು 2026 ಮೇ ತನಕ ಒಟ್ಟು ರೂ. 40 ಲಕ್ಷಗಳನ್ನು ಸಣ್ಣ-ಪುಟ್ಟ ಖರ್ಚು ಎಂದು ಉಲ್ಲೇಖಿಸಿ ಹಣವನ್ನು ಪಡೆಯಲಾಗಿದೆ. ಅಲ್ಲದೆ ರೂ. 30 ಲಕ್ಷ ರುಪಾಯಿಗಳನ್ನು ಸೆಲ್ಫ್ ಡ್ರಾ ಮಾಡಲಾಗಿದೆ. ಯಾವುದೇ ಸರಕಾರಿ ವ್ಯವಸ್ಥೆಯಲ್ಲಿ ಈ ರೀತಿ ಹಣವನ್ನು ಸೆಲ್ಫ್ ಡ್ರಾ ಮಾಡಲು ಅವಕಾಶವಿಲ್ಲದಿದ್ದರೂ, ಮಹಾಲಿಂಗೇಶ್ವರ ದೇವಸ್ಥಾನದ ಸಮಿತಿ ಕಾನೂನುಬಾಹಿರವಾಗಿ ಈ ರೀತಿ ಮಾಡಿದೆ. 

ದೇವಸ್ಥಾನಕ್ಕೆ ಸೇರಿದ ಜಾಗದ ಕಟ್ಟಡ ತೆರವು ಕಾರ್ಯಕ್ಕೆ ಜೆಸಿಬಿ, ಹಿಟಾಚಿ ಕೆಲಸಗಳಿಗೆ ರೂ. 70 ಲಕ್ಷವನ್ನು ದೇವಸ್ಥಾನದಿಂದ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿಸಲಾಗಿದೆ. ಕಮಿಟಿಯ ಸದಸ್ಯನ ಜೆಸಿಬಿ ಕೆಲಸವನ್ನು ನಿಲ್ಲಿಸಿ ಅಧ್ಯಕ್ಷರು ತನ್ನದೇ ಸ್ನೇಹಿತನ ಜೆಸಿಬಿ, ಹಿಟಾಚಿಗಳಲ್ಲಿ ಕೆಲಸ ಮಾಡಿಸಿದ್ದಾರೆ. ತೆಂಕಿಲದಲ್ಲಿ 15 ಎಕರೆ ಜಾಗವನ್ನು ವಶಪಡಿಸಿಕೊಳ್ಳುವಾಗ ಆ ಜಾಗದಲ್ಲಿದ್ದ ಹಲಸು, ಹೆಬ್ಬಲಸು, ಬೇಂಗ ಮೊದಲಾದ ಬೆಲೆಬಾಳುವ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ ಎಂದು ಹೇಳಿದರು.
ದೇವರಿಗೆ ಯಾರ ರೀತಿ ಬೇಕು, ಹಾಗೆ ದೇವಾಲಯ ಇರಬೇಕು. ಎ ಗ್ರೇಡ್ ದೇವಾಲಯವಾದರೂ ಇಲ್ಲಿ ಅದಕ್ಕೆ ವಿರುದ್ಧ ಪ್ರಕ್ರಿಯೆಗಳು ಕಂಡುಬಂದಿವೆ. ಇಲ್ಲಿ ಯಾವುದಕ್ಕೂ ಅನುಮತಿ ಪಡೆಯುತ್ತಿಲ್ಲ. ಮೌಲ್ಯಮಾಪನ, ಟೆಂಡರ್ ಮಾಡದೆ ತೆರವು ಕಾರ್ಯಗಳನ್ನು ನಡೆಸಲಾಗಿದೆ. ಇದಕ್ಕೆ ಯಾವುದಕ್ಕೂ ದತ್ತಿ ಇಲಾಖೆ ಅನುಮತಿ ಪಡೆದಿಲ್ಲ. ಜೆಸಿಬಿ ಯಂತ್ರಕ್ಕೂ ಟೆಂಡರ್ ಕರೆದಿಲ್ಲ. 8 ಲಕ್ಷ ತಗುಲಿದ ಹೊಸ ಕಟ್ಟೆಗಳ ನಿರ್ಮಾಣಕ್ಕೆ ಭಕ್ತರಿಂದ 25 ಲಕ್ಷ ದೇಣಿಗೆ ಪಡೆಯಲಾಗಿದೆ. ಹೀಗೆ ಅನೇಕ ನಿಯಮ ಮೀರಿದ ಅವ್ಯವಹಾರಗಳ ದಾಖಲೆ ನಮ್ಮಲ್ಲಿದೆ. ಭಕ್ತರ ಭಕ್ತಿಯ ಕಾಣಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಭಕ್ತರ ಸಭೆ ಕರೆಯಿರಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿರುದ್ಧವಾದ ವ್ಯವಸ್ಥೆಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ಚರ್ಚೆ ನಡೆಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೂಡಲೇ ಭಕ್ತರ ಸಭೆ ನಡೆಸಬೇಕು ಎಂದು ಆಗ್ರಹಿಸಿದ ವೇದಿಕೆ ಮುಖಂಡ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಕ್ಷೇತ್ರದಲ್ಲಿ ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಂತೆ ಅಯ್ಯಪ್ಪ ಸ್ವಾಮಿ ಗುಡಿ, ನಾಗನ ಗುಡಿ ಎಲ್ಲವನ್ನೂ ತೆರವುಗೊಳಿಸಲಾಗಿದೆ. ಆದರೆ ಈವರೆಗೂ ಅಯ್ಯಪ್ಪ ಗುಡಿಯ ಮೂರ್ತಿಯನ್ನು ಶಾರದಾ ಭಜನಾ ಮಂದಿರದ ಒಳಗಡೆ ಇಡಲಾಗಿದೆ. ಅಯ್ಯಪ್ಪನ ವಿಗ್ರಹಕ್ಕೆ ಸಲ್ಲಬೇಕಾದ ಪೂಜೆಯೂ ನಡೆಯುತ್ತಿಲ್ಲ. ನವಗ್ರಹ ವಿಗ್ರಹಗಳನ್ನು ಸರಿಯಾದ ವಾಸ್ತು ಪ್ರಕಾರ ಪ್ರತಿಷ್ಠಾಪಿಸಿಲ್ಲ. ಈವರೆಗೆ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಗಳಲ್ಲಿ ಒಬ್ಬೊಬ್ಬ ಒಂದೊಂದು ರೀತಿಯ ವಿಚಾರಗಳನ್ನು ಹೇಳುತ್ತಿರುವುದು ಭಕ್ತರ ಗೊಂದಲಕ್ಕೆ ಕಾರಣವಾಗಿದೆ. ಒಮ್ಮೆ ರಕ್ತೇಶ್ವರಿ ದೇವಿಯನ್ನು ದೇವಸ್ಥಾನದ ಒಳಗೆ ತಂದರೆ, ಇನ್ನೊಮ್ಮೆ ದೇವಸ್ಥಾನದ ಹೊರಗೆ ಹಾಕಲಾಗಿದೆ. ಒಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಸಭಾಂಗಣ ತೆರವುಗೊಳಿಸಲು ಸೂಚಿಸಿದರೆ, ಇನ್ನೊಂದು ಅಷ್ಟಮಂಗಲದಲ್ಲಿ ಸಭಾಂಗಣ ತೆರವು ಅಗತ್ಯವಿಲ್ಲ ಎನ್ನುವುದು ಕಂಡು ಬರುತ್ತಿದೆ. ದೇವಸ್ಥಾನದ ಪುಷ್ಕರಣಿ ಕೆಲಸ ಇನ್ನೂ ಮುಕ್ತಾಯಗೊಳಿಸಲು ಸಾಧ್ಯವಾಗಿಲ್ಲ. ಈ ನಡುವೆ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಹಾಕಲಾಗಿದ್ದು, ಜೀರ್ಣೋದ್ಧಾರ ಸಮಿತಿ ಅಂಗೀಕಾರಗೊಳ್ಳುವ ಮೊದಲೇ ಲಕ್ಷಾಂತರ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಕಾರ್ಯದ ಮೊದಲು ಭಕ್ತರ ಸಭೆ ಕರೆಯಬೇಕೆಂದು ಒತ್ತಾಯಿಸಿದರು. ಅಲ್ಲದೆ ಮತ್ತೊಮ್ಮೆ ಅಷ್ಟಮಂಗಲ ಪ್ರಶ್ನೆಯನ್ನು ಬ್ರಾಹ್ಮಣೇತರ ಪಂಡಿತರ ಮೂಲಕ ನಡೆಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ಸದಸ್ಯರಾದ ಬಾಲಚಂದ್ರ ಸೊರಕೆ, ಸನಿಲ್ ಕರ್ನಾನೂಜಿ, ರಾಜೇಶ್ ಸೌಪರ್ಣಿಕ, ರತ್ನ ಕೆ., ಉಪಸ್ಥಿತರಿದ್ದರು.