ಸುರತ್ಕಲ್ ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ ಆರೋಪ ; ಮೊಗವೀರ ಸಮಾಜದ ಎಚ್ಚರಿಕೆ ಬೆನ್ನಲ್ಲೇ ತನಿಖೆ ಸಿಐಡಿಗೆ ಹಸ್ತಾಂತರ

04-11-26 10:00 am       HK News Staffer   ಕ್ರೈಂ

ಸುರತ್ಕಲ್‌ ಪೊಲೀಸರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮೊಗವೀರ ಸಮಾಜದ ಸೋಮನಾಥ ಸುವರ್ಣ ಅವರ ಸಾವಿನ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗಿದೆ.

ಮಂಗಳೂರು, ನ.4 : ಸುರತ್ಕಲ್‌ ಪೊಲೀಸರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮೊಗವೀರ ಸಮಾಜದ ಸೋಮನಾಥ ಸುವರ್ಣ ಅವರ ಸಾವಿನ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗಿದೆ. 

ಸೋಮನಾಥ ಆತ್ಮಹತ್ಯೆ ಪ್ರಕರಣದಲ್ಲಿ ಮೊಗವೀರ ಸಮಾಜದ ಮುಖಂಡರು ಪೊಲೀಸರ ವಿರುದ್ಧ ಕ್ರಮಕ್ಕೆ ಎರಡು ದಿನಗಳ ಗಡುವು ನೀಡಿದ್ದರು. ಸಾವಿನ ಪ್ರಕರಣ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರ್ ಅವರ ಶಿಫಾರಸು ಆಧರಿಸಿ ಪ್ರಕರಣವನ್ನು ಡಿಜಿಪಿ ಎಂ.ಎ. ಸಲೀಂ ಸಿಐಡಿಗೆ ವಹಿಸಿದ್ದಾರೆ.‌ 

ಸುರತ್ಕಲ್ ಬಳಿಯ ಹೊಸಬೆಟ್ಟು ಬೀಚಿನಲ್ಲಿ ದೆಹಲಿ ಮೂಲದ ಯುವತಿ ಮತ್ತು ಕಾಸರಗೋಡು ಮೂಲದ ಯುವಕನಿದ್ದ ಜೋಡಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಸೋಮನಾಥ್ ಅವರನ್ನು ವಿಚಾರಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೋಮನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಪೊಲೀಸ್ ಕಿರುಕುಳ ಕಾರಣ ಎಂಬ ಆರೋಪ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದು ಇದರ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ.