ಗೂಗಲ್ ಉದ್ಯೋಗಿಯೆಂದು ಹೇಳಿಕೊಂಡು 50ಕ್ಕೂ ಹೆಚ್ಚು ಯುವತಿಯರಿಗೆ ಬ್ಲಾಕ್ ಮೇಲ್, ಮೋಸ !!

19-01-21 06:09 pm       Headline Karnataka News Network   ಕ್ರೈಂ

ಗೂಗಲ್ ಸಂಸ್ಥೆಯಲ್ಲಿ ಎಚ್ ಆರ್ ಮ್ಯಾನೇಜರ್ ಆಗಿದ್ದೇನೆಂದು ಹೇಳಿಕೊಂಡು ನಂಬಿಸಿ ಮೋಸ ಮಾಡಿರುವ ಘಟನೆ ಅಹ್ಮದಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

ಅಹ್ಮದಾಬಾದ್, ಜ.19: ಪ್ರತಿಷ್ಠಿತ ಗೂಗಲ್ ಸಂಸ್ಥೆಯಲ್ಲಿ ಎಚ್ ಆರ್ ಮ್ಯಾನೇಜರ್ ಆಗಿದ್ದೇನೆಂದು ಹೇಳಿಕೊಂಡು ಯುವಕನೊಬ್ಬ 50ಕ್ಕೂ ಹೆಚ್ಚು ಮಂದಿಯನ್ನು ಮದುವೆಯಾಗುವುದಾಗಿ ನಂಬಿಸಿ, ಸಂಬಂಧ ಬೆಳೆಸಿಕೊಂಡಿದ್ದಲ್ಲದೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಘಟನೆ ಅಹ್ಮದಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಅಹ್ಮದಾಬಾದ್ ಸೈಬರ್ ಸೆಲ್ ಪೊಲೀಸರು ಸಂದೀಪ್ ಮಿಶ್ರಾ ಅಲಿಯಾಸ್ ವಿಹಾನ್ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ. ಪ್ರತಿಷ್ಠಿತ ಅಹ್ಮದಾಬಾದ್ ಐಐಎಂನಲ್ಲಿ ಪದವೀಧರನಾಗಿದ್ದು, ಗೂಗಲ್ ಸಂಸ್ಥೆಯಲ್ಲಿ ಎಚ್ ಆರ್ ಮ್ಯಾನೇಜರ್ ಆಗಿದ್ದೇನೆಂದು ಹೇಳಿಕೊಂಡಿದ್ದಲ್ಲದೆ, ತನಗೆ ವಾರ್ಷಿಕ 40 ಲಕ್ಷ ಸಂಬಳ ಎಂದು ಪುಂಗಿ ಊದಿಕೊಂಡಿದ್ದ. ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಹೀಗೆ ಸುಳ್ಳು ಮಾಹಿತಿಗಳನ್ನು ಅಪ್ಲೋಡ್ ಮಾಡಿ, ಯುವತಿಯರನ್ನು ಗಾಳಕ್ಕೆ ಹಾಕುತ್ತಿದ್ದ. ಗಾಳಕ್ಕೆ ಬಿದ್ದ ಯುವತಿಯರ ಜೊತೆಗೆ ದೈಹಿಕ ಸಂಪರ್ಕ ಬೆಳೆಸುವುದಲ್ಲದೆ, ಅದರ ವಿಡಿಯೋ ದಾಖಲಿಸಿಕೊಂಡು ಬ್ಲಾಕ್ ಮೇಲ್ ಮಾಡಿ ಹಣ ಕೀಳುತ್ತಿದ್ದ. 50ಕ್ಕೂ ಹೆಚ್ಚು ಮಂದಿ ಯುವತಿಯರಿಗೆ ಹೀಗೆ ಮೋಸ ಮಾಡಿದ್ದಾನೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಯಿಂದ 30 ಸಿಮ್ ಕಾರ್ಡ್, ನಾಲ್ಕು ಮೊಬೈಲ್ ಫೋನ್, ನಾಲ್ಕು ನಕಲಿ ಐಡಿ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂದೀಪ್ ಮಿಶ್ರಾ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು ಮೋಸ ಮಾಡಿದ್ದಾನೆ. ಆಕಾಶ್ ಶರ್ಮಾ, ವಿಹಾನ್ ಶರ್ಮಾ, ಪ್ರತೀಕ್ ಶರ್ಮಾ ಹೀಗೆ ಹಲವು ಹೆಸರುಗಳಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ. ಮೊದಲು ಯುವತಿಯರನ್ನು ಬಲೆಗೆ ಕೆಡಹುತ್ತಿದ್ದ ಆನಂತ್ರ ದೈಹಿಕ ಸಂಪರ್ಕ ಬೆಳೆಸಿ, ವಿಡಿಯೋ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ, ಆತನ ಮೊಬೈಲಿನಲ್ಲಿ ಹಲವಾರು ವಿಡಿಯೋಗಳು ಲಭ್ಯವಾಗಿವೆ.

ಐಐಎಂ ಅಹ್ಮದಾಬಾದ್ ನಲ್ಲಿ ಡಿಗ್ರಿ ಪಡೆದಿರುವ ಬಗ್ಗೆ ಆತ ನಕಲಿ ಸರ್ಟಿಫಿಕೇಟ್ ಅನ್ನೂ ಮಾಡಿಕೊಂಡಿದ್ದ. ಸಂದೀಪ್ ಶರ್ಮಾ ಹಲವು ರಾಜ್ಯಗಳ ಯುವತಿಯರನ್ನೂ ಟಾರ್ಗೆಟ್ ಮಾಡಿಕೊಂಡಿದ್ದ. ಈತನ ಬಲೆಗೆ ಬಿದ್ದವರಲ್ಲಿ ಅಹ್ಮದಾಬಾದ್, ಗೋವಾ, ಚತ್ತೀಸ್ ಗಢ, ಉಜ್ಜೈನ್, ಗ್ವಾಲಿಯರ್ ಹೀಗೆ ದೇಶದ ಹಲವು ನಗರಗಳ ಯುವತಿಯರನ್ನು ಬಲೆಗೆ ಕೆಡವಿದ್ದ ಎಂದು ಅಹ್ಮದಾಬಾದ್ ಸೈಬರ್ ಸೆಲ್ ಪೊಲೀಸರು ತಿಳಿಸಿದ್ದಾರೆ. 

Hyderabad Man claimed to be a Google Employee has been booked for allegedly cheating Job aspirants by promising to secure them Jobs in Google.