ಸಹಕಾರಿ ಬ್ಯಾಂಕುಗಳಿಗೆ ನಕಲಿ ಚಿನ್ನವಿಟ್ಟು ವಂಚನೆ ; ಆರೋಪಿ ಸೆರೆ

28-01-21 10:53 am       Mangalore Correspondent   ಕ್ರೈಂ

ಗ್ರಾಹಕನಂತೆ ನಟಿಸಿ ಸಹಕಾರಿ ಸಂಸ್ಥೆಗಳಿಗೆ ನಕಲಿ ಚಿನ್ನವನ್ನು ಅಡವಿಟ್ಟು ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿ, ಜ.28 : ಗ್ರಾಹಕನಂತೆ ನಟಿಸಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ನಕಲಿ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂ.  ದೋಚಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ ಗಿರೀಶ್ ಕುಮಾರ್ (32) ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಕೇರಳ ನೋಂದಣಿಯ ಕಾರಿನಲ್ಲಿ ಆಗಮಿಸಿದ್ದ ಆರೋಪಿ ಉಪ್ಪಿನಂಗಡಿಯ ಸಹಕಾರಿ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿರಿಸಿ ಹಣ ಸಾಲ ಪಡೆದಿದ್ದ. ಬಿಝಿಯಾಗಿದ್ದ ಆತ ಅರ್ಜೆಂಟ್ ಹಣ ಬೇಕೆಂದು ಕೇಳಿದ್ದು ನೈಜ ಚಿನ್ನಾಭರಣ ಎಂದೇ ಭಾವಿಸಿ ಅದನ್ನು ಪರಿಶೀಲಿಸುವ ಮೊದಲೇ ಸಿಬಂದಿ ಹಣ ನೀಡಿದ್ದರು. ಆತ ನೀಡಿದ ಆಭರಣ ಅಸಲಿ ಅಲ್ಲ ಎಂದು ಪರಿಶೀಲನೆ ವೇಳೆ ಗೊತ್ತಾಗಿದ್ದು ಅಷ್ಟರಲ್ಲಿ ಆರೋಪಿ ಹಣ ಒಯ್ದಾಗಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು. 

ಒಂದೇ ದಿನ ಇದೇ ವ್ಯಕ್ತಿ ಉಪ್ಪಿನಂಗಡಿಯಲ್ಲಿ ಎರಡು ಸಹಕಾರಿ ಸಂಸ್ಥೆಗಳಿಗೆ ನಕಲಿ ಚಿನ್ನವಿಟ್ಟು ವಂಚಿಸಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಈರಯ್ಯ ಡಿ.ಎನ್. ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.