ಯುವತಿಗೆ ಮದುವೆ ಆಮಿಷ, ವಂಚನೆ ; ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ !

30-01-21 12:40 pm       Udupi Correspondent   ಕ್ರೈಂ

ಯುವತಿಯನ್ನು ಪ್ರೀತಿಸಿ ವಂಚಿಸಿದ ಆರೋಪಿಗೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ನೀಡಿದೆ.

ಕುಂದಾಪುರ, ಜ.30: ಆರು ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಬಳಿಕ ಮದುವೆ ನಿರಾಕರಿಸಿದ ಆರೋಪಿಗೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.

ಅರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2005ರಲ್ಲಿ ಹೊಸ ಮನೆಯ ಗಾರೆ ಕೆಲಸಕ್ಕೆಂದು ಬಂದಿದ್ದ ಪ್ರದೀಪ್, ಅಲ್ಲಿನ ಯುವತಿಯೊಂದಿಗೆ ಸ್ನೇಹ ಬೆಳಸಿದ್ದನು. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದನು. ಮುಂದೆ ಮದುವೆಗೆ ನಿರಾಕರಿಸಿ ವಂಚಿಸಿದ್ದು ಯುವತಿ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತ ಯುವತಿ ಹಾಗೂ ಆಕೆ ತಂದೆ-ತಾಯಿ ಸೇರಿ ಒಟ್ಟು 9 ಮಂದಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟರು.

ಅದರಂತೆ ಅತ್ಯಾಚಾರ ಪ್ರಕರಣ ಐಪಿಸಿ ಕಲಂ 376ಗೆ 10 ವರ್ಷ ಕಠಿಣ ಜೈಲು ಮತ್ತು 50 ಸಾವಿರ ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 448 ಹಾಗೂ ಮೋಸ (ಐಪಿಸಿ ಕಲಂ 417) ಕ್ಕೆ ತಲಾ 1 ವರ್ಷ ಸಜೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದಲ್ಲಿ 50 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.

Kundapur district and additional sessions Justice Narahari Prabhakar Marate has announced the quantum of punishment for the accused who had raped a girl for several years by making false promises of marriage.