ಅಮ್ಟಾಡಿ: ಉಂಡ ಮನೆಗೆ ದ್ರೋಹ; ಚಿನ್ನದ ಆಸೆಗೆ ಬಿದ್ದು ಕೆಲಸದಾಕೆಯಿಂದ್ಲೇ ಅಜ್ಜಿಯ ಕೊಲೆ !

03-02-21 07:57 pm       Mangalore Correspondent   ಕ್ರೈಂ

ವೃದ್ಧ ತಾಯಿಯನ್ನು ನೋಡಿಕೊಳ್ಳಲು ಕೆಲಸಕ್ಕೆಂದು ಯುವತಿಯನ್ನು ನೇಮಿಸಿದ್ದರು. ಆದರೆ ಹಣ ಕೊಟ್ಟು ಇಟ್ಟುಕೊಂಡಿದ್ದ ಕೆಲಸದ ಯುವತಿ ಇಬ್ಬರು ಯುವಕರ ಜೊತೆ ಸೇರಿ ವೃದ್ಧ ಮಹಿಳೆಯನ್ನೇ ಕೊಂದು ಬಿಟ್ಟಿದ್ದಾಳೆ.

ಬಂಟ್ವಾಳ, ಫೆ.3: ಉಂಡ ಮನೆಗೆ ದ್ರೋಹ ಬಗೆದ ಕತೆ ಇದು. ಮಕ್ಕಳು ದೂರ ಇದ್ದಾರೆಂದು ಮನೆಯಲ್ಲಿದ್ದ ವೃದ್ಧ ತಾಯಿಯನ್ನು ನೋಡಿಕೊಳ್ಳಲು ಕೆಲಸಕ್ಕೆಂದು ಯುವತಿಯನ್ನು ನೇಮಿಸಿದ್ದರು. ಆದರೆ ಹಣ ಕೊಟ್ಟು ಇಟ್ಟುಕೊಂಡಿದ್ದ ಕೆಲಸದ ಯುವತಿ ಇಬ್ಬರು ಯುವಕರ ಜೊತೆ ಸೇರಿ ವೃದ್ಧ ಮಹಿಳೆಯನ್ನೇ ಕೊಂದು ಬಿಟ್ಟಿದ್ದಾಳೆ.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ವಾಸವಿದ್ದ ಬೆನೆಡಿಕ್ಟ್ ಕಾರ್ಲೋ (72) ಜ.25ರಂದು ರಾತ್ರಿ ಮೃತಪಟ್ಟಿದ್ದಾಗಿ ಆಕೆಯನ್ನು ನೋಡಿಕೊಳ್ಳುತ್ತಿದ್ದ ಯುವತಿ ಕುಟುಂಬಸ್ಥರಿಗೆ ತಿಳಿಸಿದ್ದಳು. ಬೆನೆಡಿಕ್ಟ್ ಕಾರ್ಲೋಗೆ ಏಳು ಮಕ್ಕಳಿದ್ದು ವಿದೇಶಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದಾರೆ.  ತಾಯಿ ಸಾವಿನ ವಿಚಾರ ತಿಳಿದು ಆಗಮಿಸಿದ್ದ ಬೆಂಗಳೂರಿನಲ್ಲಿದ್ದ ಮಗ ರೊನಾಲ್ಡ್ ಕಾರ್ಲೋ ಮನೆಗೆ ಬಂದು ತಾಯಿಯ ಮೃತದೇಹ ನೋಡಿ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

ರೊನಾಲ್ಡ್ ಬಳಿಕ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಕೆಲಸದ ಯುವತಿ ಮಾತ್ರ ವೃದ್ಧ ತಾಯಿ ರಾತ್ರಿ ವೇಳೆ ಸಹಜವಾಗಿ ಮೃತಪಟ್ಟಿದ್ದಾರೆಂದು ಹೇಳುತ್ತಾ ಇದ್ದಳು. ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದು ಅನುಮಾನದ ಮೇರೆಗೆ ಅಜ್ಜಿಯ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದ್ದರು. ಪೋಸ್ಟ್ ಮಾರ್ಟಂ ವರದಿಯಲ್ಲಿ ಅಜ್ಜಿಯ ಸಾವು ಉಸಿರುಗಟ್ಟಿದ ಕಾರಣ ಸಂಭವಿಸಿತ್ತು ಎನ್ನೋದು ತಿಳಿದುಬಂದಿತ್ತು. 

ಹೀಗಾಗಿ ಫೆ.2ರಂದು ಪೊಲೀಸರು ಅಸಹಜ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮನೆ ಕೆಲಸದಾಕೆ ಯುವತಿ ಮೊಡಂಕಾಪು ನಿವಾಸಿ ವಿಲ್ಮಾ ಪ್ರಶ್ಚಿತಾ ಬರೆಟ್ಟೋ (25) ಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ. ಅಜ್ಜಿಯಲ್ಲಿದ್ದ ಚಿನ್ನದ ಒಡವೆಗಳನ್ನು ದೋಚಲು ಕೆಲಸದ ಯುವತಿಯೇ ಅಜ್ಜಿಯನ್ನು ಕೊಲ್ಲಲು ಪ್ಲಾನ್ ಹಾಕಿದ್ದನ್ನು ಒಪ್ಪಿಕೊಂಡಿದ್ದಾಳೆ. ಅದಕ್ಕಾಗಿ ನರಿಕೊಂಬು ನಿವಾಸಿಗಳಾದ ಸತೀಶ ನಾಯಕ್ (31) ಮತ್ತು ಚರಣ್ (28) ಎಂಬವರ ಸಹಾಯ ಪಡೆದಿದ್ದು ಅಜ್ಜಿ ಬೆನೆಡಿಕ್ಟ್ ಜ.25ರಂದು ರಾತ್ರಿ ಮಲಗಿದ್ದಾಗ ಮನೆಗೆ ಬಂದಿದ್ದಾರೆ. ಅಜ್ಜಿ ಮಲಗಿದಲ್ಲೇ ತಲೆದಿಂಬನ್ನು ಮುಖಕ್ಕೆ ಒತ್ತಿ ಹಿಡಿದು ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ಪೊಲೀಸರು ಇಬ್ಬರು ಯುವಕರು ಮತ್ತು ಯುವತಿಯನ್ನು ಬಂಧಿಸಿ, ಅವರು ಅಜ್ಜಿಯ ಮನೆಯಿಂದ ದೋಚಿಕೊಂಡು ಹೋಗಿದ್ದ 98 ಗ್ರಾಮ್ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ. 

ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ವೈಲೆಂಟೈನ್‌ ಡಿʻಸೋಜ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪಿ.ಎಸ್.ಐ ಪ್ರಸನ್ನ ಎಂ.ಎಸ್, ವಿಟ್ಲ ಠಾಣಾ ಪಿ.ಎಸ್.ಐ ವಿನೋದ್‌ ಹಾಗೂ ಹೆಚ್.ಸಿಗಳಾದ ಗಿರೀಶ್‌, ಸುರೇಶ್‌, ಜನಾರ್ದನ, ಪ್ರಮೀಳಾ, ಕಿರಣ್‌, ಪಿ.ಸಿಗಳಾದ ನಝೀರ್‌, ಪುನೀತ್‌, ಮನೋಜ್‌, ಪ್ರಸನ್ನ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

A case of unnatural death of an old woman identified as Benedict Carlo (72) resident of Ammunje village, Bantwal has turned to Murder. The Police have arrested three persons including a woman