Exclusive: ಸುರೇಂದ್ರ ಬಂಟ್ವಾಳ್ ಹತ್ಯೆಗೆ ಹೈಲೆವೆಲ್ ಸ್ಕೆಚ್ ; ಕೇಸ್ ಮುಚ್ಚಿ ಹಾಕಲು ಪೊಲೀಸ್ ಮುಖ್ಯೋಪಾಧ್ಯಾಯರಿಗೇ ಡೀಲ್ !!

11-02-21 06:27 pm       Crime Correspondent   ಕ್ರೈಂ

ಫೈನಾನ್ಸರ್ ಕಂ ಚಿತ್ರನಟ ಸುರೇಂದ್ರ ಬಂಟ್ವಾಳ್ ಕೊಲೆಗೆ ಹೈಲೆವೆಲ್ ಪ್ರೀ ಪ್ಲಾನ್ ಸ್ಕೆಚ್ ಆಗಿತ್ತು ಅನ್ನೋ ಸ್ಫೋಟಕ ಸತ್ಯ ಹೊರಬೀಳುತ್ತಿದೆ.

ಮಂಗಳೂರು, ಫೆ.11: ತುಳು ಚಿತ್ರನಟ, ಫೈನಾನ್ಸರ್ ಸುರೇಂದ್ರ ಬಂಟ್ವಾಳ್ ಹತ್ಯೆಯಾಗಿದ್ದು ಕರಾವಳಿಯ ಮಟ್ಟಿಗೆ ದೊಡ್ಡ ಸುದ್ದಿಯಾಗಿತ್ತು. ಕಳೆದ ಅಕ್ಟೋಬರ್ 20ರಂದು ಮಧ್ಯಾಹ್ನ ಹೊತ್ತಿಗೆ ಸುರೇಂದ್ರ ಬಂಟ್ವಾಳ್ ಬಿ.ಸಿ.ರೋಡ್ ಬಳಿಯ ಭಂಡಾರಿಬೆಟ್ಟುವಿನಲ್ಲಿದ್ದ ತನ್ನದೇ ಫ್ಲಾಟ್ ನಲ್ಲಿ ಕೊಲೆಯಾಗಿದ್ದಾನೆ ಅನ್ನೋ ಸುದ್ದಿ ರಟ್ಟಾದೊಡನೆ ಕೆಲವರು ಹೌಹಾರಿದ್ದರು. ಛೆ, ಇಲ್ಲೇ ಪಿವಿಎಸ್ ಬಳಿಯ ಜಿಮ್ ಗೆ ಬರುತ್ತಿದ್ದ. ಕಾರು ನಿಲ್ಲಿಸಿ ಪೋಸು ಕೊಡುತ್ತಿದ್ದ. ಕೊಲೆಯಾಗಿ ಹೋದ್ನಾ ಅಂತ ಆತನ ಒಡನಾಟ ಇದ್ದವರು ಮಾತನಾಡಿಕೊಂಡಿದ್ದರು. ಆದರೆ, ಈ ಫೈನಾನ್ಸರ್ ಕಂ ಚಿತ್ರನಟನ ಕೊಲೆಗೆ ಹೈಲೆವೆಲ್ ಪ್ರೀ ಪ್ಲಾನ್ ಸ್ಕೆಚ್ ಆಗಿತ್ತು ಅನ್ನೋ ಸ್ಫೋಟಕ ಸತ್ಯ ಹೊರಬೀಳುತ್ತಿದೆ.

ನೀವು ನಂಬ್ತೀರೋ, ಬಿಡ್ತೀರೋ.. ಸುರೇಂದ್ರ ಬಂಟ್ವಾಳ್ ಹತ್ಯೆಗೆ ಪ್ಲಾನ್ ಆಗಿದ್ದು ಮಂಗಳೂರಿನಲ್ಲಿ ಆಗ ಆಯಕಟ್ಟಿನ ಹುದ್ದೆಗಳಲ್ಲಿದ್ದ ಪೊಲೀಸರಿಗೆ ಗೊತ್ತಿತ್ತು. ಇತ್ತೀಚೆಗೆ ಕಾರು ಮಾರಾಟ ಪ್ರಕರಣದಲ್ಲಿ ಸುದ್ದಿಗೆ ಗ್ರಾಸವಾಗಿರುವ ಕಾಸ್ಕುಮಾರ್, ಕಬ್ಬಾಳಪುತ್ರ ಕೇಡಿರಾಜ್ ಸೇರಿದಂತೆ ಮಂಗಳೂರು ಸಿಸಿಬಿಯ ಆಸುಪಾಸಿನ ಗೋಡೆ, ಕಂಬಗಳಿಗೂ ಈ ವಿಷ್ಯ ಗೊತ್ತಿತ್ತಂತೆ. ಅಷ್ಟೇ ಅಲ್ಲಾ, ಈ ವಿಭಾಗ ನೋಡಿಕೊಳ್ಳೋ ಮುಖ್ಯಾಧಿಕಾರಿಗೂ ಸುರೇಂದ್ರನ ಕೊಲೆಗೆ ಸುಪಾರಿ ರೆಡಿಯಾಗಿದ್ದು, ಅದಕ್ಕೇಂತ ಕೆಲವರನ್ನು ಫಿಕ್ಸ್ ಮಾಡೋದು, ಆನಂತ್ರ ಅವರನ್ನು ಸದ್ದಿಲ್ಲದೆ ಬಿಟ್ಟು ಕಳಿಸಬೇಕು ಹೀಗೆ ಎಲ್ಲದಕ್ಕೂ ಪ್ಲಾನ್ ಆಗಿದ್ದು ಗೊತ್ತಾಗಿತ್ತು.

ಸುರೇಂದ್ರ ಬಂಟ್ವಾಳ್ ಬಗ್ಗೆ ಆಗದವರು ಮಂಗಳೂರಿನಲ್ಲಿ ಬಹಳಷ್ಟು ಮಂದಿಯಿದ್ದರು. ಅವರೆಲ್ಲಾ ಮಂಗಳೂರಿನ ಆಯಕಟ್ಟಿನಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಗಳಿಗೆ ಆಪ್ತರೇ ಆಗಿದ್ದರೋ ಏನೋ.. ಆವತ್ತು ಸುರೇಂದ್ರನ ಕತೆ ಮುಗಿಸಲೇಬೇಕೆಂದು ನಿರ್ಧಾರ ಮಾಡಿದ್ದ ಒಂದು ತಂಡ, ಮೊದಲು ಸ್ಕೆಚ್ ಹಾಕಿ ಅದಕ್ಕೆ ಪೊಲೀಸರ ನೆರವು ಪಡೆಯಲು ಮುಂದಾಗಿತ್ತು. ಮಂಗಳೂರಿನ ಕ್ರೈಂ ರೇಟ್ ಬಗ್ಗೆ ನಿಗಾ ಇಡಬೇಕಿದ್ದ ಸಿಸಿಬಿಯ ಒಬ್ಬ ಕುಖ್ಯಾತ ಅಧಿಕಾರಿಯನ್ನೇ ಅದಕ್ಕಾಗಿ ಫಿಕ್ಸ್ ಮಾಡಿದ್ದರು. ಆ ಮನುಷ್ಯ, ನೇರವಾಗಿ ಮುಖ್ಯೋಪಾಧ್ಯಯರ ಗಮನಕ್ಕೆ ತಂದಿದ್ದಾರೆ. ಮುಖ್ಯೋಪಾಧ್ಯಾಯರು ಎಂಥಾ ಮನುಷ್ಯ ಅಂದ್ರೆ, ಈ ಪ್ಲಾನ್ ಕೇಳಿದ್ದೇ ತಡ 30 ಲಕ್ಷ ಅಡ್ವಾನ್ಸ್ ಆಗಿಯೇ ಹಣವನ್ನು ಪಡೆದಿದ್ದರಂತೆ.. ಏನೇ ಆದ್ರೂ ಆರೇ ತಿಂಗಳಲ್ಲಿ ತಗ್ಲಾಕ್ಕೊಂಡಿಡ್ಡ ಆ ಮನುಷ್ಯ ಇಲ್ಲಿದ್ದುಕೊಂಡು ಮುಕ್ಕಿ ತೇಗಿದ್ದೇ ಕೋಟಿ ಕೋಟಿಯಂತೆ..

ಆಬಳಿಕ ಪೊಲೀಸ್ ವಿಭಾಗದ ಪ್ರಭಾರಿಗೂ ಈ ವಿಚಾರ ಗೊತ್ತಾಗಿತ್ತು. ಪ್ಲಾನ್ ಮಾಡಿದ್ದ ತಂಡ ಅಷ್ಟೊಂದು ಪ್ರಭಾವಿಗಳೇ ಆಗಿದ್ದರೋ ಏನೋ.. ಅವರಿಗೂ ಒಂದಷ್ಟು ಕೊಡೋದಾಗಿ ಡೀಲ್ ಕುದುರಿತ್ತು. ಬಂಟ್ವಾಳದ ತಾಲೂಕು ಸಂಯೋಜಕರ ಆಪ್ತರಾಗಿದ್ದ ವಿಭಾಗ ಪ್ರಭಾರಿ ಎಲ್ಲದಕ್ಕೂ ಓಕೆ ಎಂದಿದ್ದರು. ಆ ಪ್ರಕಾರ, ಸುರೇಂದ್ರನ ಕೊಲೆಯ ಬಳಿಕ ಇಬ್ಬರನ್ನು ಪ್ರೊಡ್ಯೂಸ್ಮಾಡ್ತೇವೆ. ಅವರೇ ಕೆಲಸ ಮಾಡಿದ್ದವರು. ಅಷ್ಟಕ್ಕೇ ಕೇಸ್ ಮುಚ್ಚಿ ಹಾಕಬೇಕು. ಅದಕ್ಕಿಂತ ಮೇಲೆ ಹೋಗಬಾರದು. ಬೇರೆ ಯಾರನ್ನೂ ಅರೆಸ್ಟ್ ಕೂಡ ಮಾಡಬಾರದು ಅಂತ ಸ್ಕೆಚ್ ಹಾಕಿದ್ದ ತಂಡ ಫರ್ಮಾನು ಹಾಕಿತ್ತು. 

ಹೀಗೆ ಫೈನಾನ್ಸರ್ ಒಬ್ಬನ ಕೊಲೆಗೆ ಹೈಲೆವೆಲ್ ಸುಪಾರಿ ಪೊಲೀಸರ ಮೂಲಕನೇ ನಡೆದಿತ್ತು. ಅಷ್ಟೇ ಅಲ್ಲಾ, ಅದಕ್ಕಾಗಿ ಕೋಟಿಗಟ್ಟಲೆ ಹಣವನ್ನು ಸುರೇಂದ್ರನ ಕತೆ ಮುಗಿಯೋ ಮುನ್ನವೇ ಖರ್ಚು ಮಾಡಲಾಗಿತ್ತು ಅನ್ನೋ ಗುಸು ಗುಸು ಕೇಳಿಬರುತ್ತಿದೆ. ಈ ವಿಷ್ಯಕ್ಕೂ ಪ್ರಮುಖ ಡೀಲರ್ ಆಗಿದ್ದು ಪೊಲೀಸರ ಡೀಲಿಂಗ್ ವಹಿವಾಟನ್ನು ನೋಡಿಕೊಂಡಿದ್ದ, ಆಪ್ತರ ವಲಯದಲ್ಲಿ ಡೀಡಿ ಎಂದೇ ಕರೆಸಿಕೊಳ್ಳುತ್ತಿದ್ದ ಭವ್ಯದರ್ಶನ್ (ಹೆಸರು ಚೂರು ಬದಲಿಸಿದೆ) ಮತ್ತು ಬೆಳ್ತಂಗಡಿಯಲ್ಲಿ ಪತ್ರಕರ್ತನ ಸೋಗು ಹಾಕ್ಕೊಂಡಿದ್ದ ಪ್ರತೀಕ್ ಎನ್ನುವಾತ. ಸಿಸಿಬಿ ಅಧಿಕಾರಿಯಾಗಿದ್ದ ಕಬ್ಬಾಳಪುತ್ರ ಕೇಡಿರಾಜನ ಆಪ್ತನಾಗಿದ್ದ ಟ್ರಾವೆಲ್ ಏಜಂಟನೊಬ್ಬನ ಕಚೇರಿಯಲ್ಲಿ ಕುಳಿತುಕೊಂಡೇ ಈ ಡೀಲಿಂಗ್ ನಡೆದಿತ್ತು. ಪೊಲೀಸ್ ಖಬರಿಯಾಗಿದ್ದ ಏಜಂಟ್ ಸಿಸಿಬಿಯ ಕೇಡಿರಾಜನ ಆಪ್ತನೂ ಆಗಿದ್ದಾತ. ಆತನ ಕಚೇರಿಯಲ್ಲೇ ಕುಳಿತು ಈ ಡೀಲಿಂಗ್ ನಡೆದಿತ್ತು ಅಂತಿದ್ದವೆ, ಮೂಲಗಳು.

ಕೊನೆಗೆ, ಅಕ್ಟೋಬರ್ 19ರ ರಾತ್ರಿ ಬಿ.ಸಿ.ರೋಡ್ ಬಳಿಯ ಭಂಡಾರಿಬೆಟ್ಟುವಿನ ಫ್ಲಾಟ್ ನಲ್ಲಿ ಸುರೇಂದ್ರನ ಕತೆ ಮುಗಿಸುತ್ತಾರೆ. ಮರುದಿನ ಮಧ್ಯಾಹ್ನ ಕೊಲೆ ಕೃತ್ಯ ಬೆಳಕಿಗೆ ಬರುತ್ತಲೇ, ಕೃತ್ಯವನ್ನು ತಾನೇ ಮಾಡಿದ್ದಾಗಿ ಸತೀಶ ಕುಲಾಲ್ ಎಂಬ ಹೆಸರಿನ, ಅಷ್ಟರವರೆಗೂ ಸುರೇಂದ್ರ ಬಂಟ್ವಾಳನ ಜೊತೆಗೇ ಇದ್ದ ಖಾಸಾ ದೋಸ್ತಿ ಆಡಿಯೋ ರಿಲೀಸ್ ಮಾಡಿದ್ದ. ಎರಡು ದಿನಗಳ ನಂತರ ಸತೀಶ್ ಕುಲಾಲ್ ಮತ್ತು ಗಿರೀಶ್ ಎಂಬ ಇಬ್ಬರನ್ನು ಪೊಲೀಸರು ಬೆಳ್ತಂಗಡಿಯಲ್ಲಿ ಅರೆಸ್ಟ್ ಮಾಡಿದ್ದರು. ಅಷ್ಟಕ್ಕೇ ಮುಗಿದು ಹೋಗಬೇಕೆಂದು ಹೈಲೆವೆಲ್ ಕಂಡೀಶನ್ ಇದ್ದರೂ ಅದೇನಾಯ್ತೋ ಏನೋ.. ಸುರೇಂದ್ರ ಬಂಟ್ವಾಳ್ ಕೊಲೆ, ಬಳಿಕ ಅದರ ತನಿಖೆಯ ಪ್ರಗತಿ, ಉಸ್ತುವಾರಿ ಹೊತ್ತ ಉಪವಿಭಾಗ ಸಂಯೋಜಕರ ನಿಧಾನಗತಿ ಇವೆಲ್ಲದರ ನಡುವೆ ಎಸ್ಪಿ ಸಾಹೇಬ್ರಿಗೆ ಪ್ರೀ ಪ್ಲಾನ್ಡ್ ಆಗಿರೋ ಇಶ್ಯು ತಿಳಿದುಹೋಗಿತ್ತು. ಮೊದಲೇ ಸ್ಕೆಚ್ ಹಾಕಿದ್ದು, ಅದಕ್ಕಾಗಿ ಹೈಲೆವೆಲ್ ಡೀಲಿಂಗ್ ಆಗಿತ್ತು ಅನ್ನೋ ವಿಚಾರ ತಿಳಿದ ಸಾಹೇಬ್ರು ತನಿಖೆಯ ಹೊಣೆಯನ್ನು ಸರ್ಕಲ್ ಇನ್ ಸ್ಪೆಕ್ಟರ್‌ಗೆ ವಹಿಸುತ್ತಾರೆ.  

ಏನೇ ಆದ್ರೂ ನಾನಿದ್ದೀನಿ, ನೀನು ಏನ್ ಬೇಕೋ ಮಾಡು ಅನ್ನೋ ಹುಕುಂ ಹಾಕಿದ್ದೇ ತಡ, ಪೊಲೀಸ್ ಟೀಮ್ ರೆಡಿಯಾಗಿತ್ತು. ಬಂಟ್ವಾಳ, ಬೆಳ್ತಂಗಡಿ ಆಸುಪಾಸಿನ ಇನ್ಸ್ ಪೆಕ್ಟರ್ ಗಳನ್ನು ಸೇರಿಸ್ಕೊಂಡು ಟಿಡಿ ನಾಗರಾಜ್ ನೇತೃತ್ವದಲ್ಲಿ ಟೀಮ್ ರೆಡಿ ಮಾಡಲಾಯ್ತು. ಸಿಕ್ಕಿಬಿದ್ದ ಇಬ್ಬರ ಮೇಲೆ ಫುಲ್ ಟ್ರೀಟ್ಮೆಂಟ್ ನೀಡಿ, ಸತ್ಯ ಕಕ್ಕುವಂತೆ ಮಾಡಿದ್ದರು. ಬೆಂಗಳೂರು ಜೈಲಿನಲ್ಲಿದ್ದ ರೌಡಿ ಆಕಾಶ್ ಭವನ್ ಶರಣ್ ಸ್ಕೆಚ್ ರೆಡಿ ಮಾಡಿದ್ದು, ಅಲ್ಲಿಂದ ಹಂತಕರು ಪಾರಾಗಲು ವಾಹನ ವ್ಯವಸ್ಥೆಗೆ ಪ್ರತ್ಯೇಕ ತಂಡ ರೆಡಿಯಾಗಿದ್ದು, ಕೊಲೆ ಯಾಕಾಯ್ತು ಅನ್ನೋದ್ರ ಬಗ್ಗೆ ರೆಡಿ ಮಾಡಿದ್ದ ಕತೆಯನ್ನೂ ಅಷ್ಟಿಷ್ಟು ಎಂಬಂತೆ ಬಾಯಿಬಿಟ್ಟರು. ಕೊನೆಗೆ ಪ್ರಕರಣದ ಬೆಂಬತ್ತಿದ ಪೊಲೀಸ್ ತಂಡ, ಜೈಲಿನಲ್ಲಿದ್ದ ಶರಣ್ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ಹೆಡೆಮುರಿ ಕಟ್ಟಿದ್ದರು. ರಿವೇಂಜ್ ತೀರಿಸಿದ ಕತೆಯನ್ನೂ ರಿಯಲ್ ಎನ್ನುವಂತೆ ಪೊಲೀಸರು ಕೂಡ ಬಿಚ್ಚಿಟ್ಟಿದ್ದರು. ಎಲ್ಲ ಮುಗಿದು ಪೊಲೀಸರು ಕೊನೆಗೆ, ಸುಪಾರಿ ನೀಡಿದ್ದು ಅಂತ ತೋರಿಸಿದ್ದು ಇಬ್ಬರನ್ನು. ಜುವೆಲ್ಲರಿಗಾಗಿ ಸುರೇಂದ್ರನಿಂದ ಭಾರೀ ಮೊತ್ತದ ಹಣ ಸಾಲ ಪಡೆದಿದ್ದ ಪ್ರದೀಪ್ ಮತ್ತು ವೆಂಕಟೇಶ್ ಅಂತ ಇಬ್ಬರನ್ನು ಮಾತ್ರ. ಅವರು ಸುರೇಂದ್ರನ ಹತ್ಯೆಗೆ ಫೈನಾನ್ಸ್ ಮಾಡಿದ್ದನ್ನು ಪೊಲೀಸರೂ ಹೇಳಿದ್ದರು. ಆದರೆ, ಉಳಿದವರು ಯಾರೆಲ್ಲಾ ಫೈನಾನ್ಸ್ ಮಾಡಿದ್ದರು ಅನ್ನೋದ್ರ ಬಗ್ಗೆ ತನಿಖೆ ನಡೆಸಿಲ್ಲ.

ಇಷ್ಟೆಲ್ಲಾ ಆದ್ರೂ, ವಿಶೇಷ ಅಂದ್ರೆ ಡೀಲಲ್ಲಿ ಅಡ್ವಾನ್ಸ್ ಪಡೆದವನಿಗೆ ಮಾತ್ರ ಭರಪೂರ ಲಾಭ ಆಗಿತ್ತು. ಆಮೇಲೆ ಗಳಿಸ್ಕೊಂಡವರಿಗೆ ಸಿಕ್ಕಿದ್ದು ಅಷ್ಟಿಷ್ಟು ಮಾತ್ರ. ವಿಭಾಗ ಪ್ರಭಾರಿಗೆ 5 ಲಕ್ಷ , ಹಣಕ್ಕಾಗಿ ಬಾಯಿಬಿಟ್ಟಿದ್ದ ಉಪವಿಭಾಗ ಸಂಯೋಜಕರಿಗೆ ಎರಡೂವರೆ ಲಕ್ಷ ಮಾತ್ರ ಅಂತೆ. ಕೊನೆಗೆ ಡೀಲ್ ಮಾಡಿದ್ದ ಪತ್ರಕರ್ತ ಅರೆಸ್ಟ್ ಆಗಿದ್ದ. ಇನ್ನೊಬ್ಬ ಡೀಲರ್ ಡೀಡಿ ಮಾತ್ರ ಅದ್ಯಾರದ್ದೋ ಕೈಕಾಲು ಹಿಡಿದು ಪಾರಾಗಿದ್ದ. 

ಅಷ್ಟೊಂದು ವ್ಯವಸ್ಥಿತವಾಗಿ ಪಕ್ಕಾ ಪ್ಲಾನ್ ಆಗಿದ್ದ ಸುರೇಂದ್ರ ಬಂಟ್ವಾಳ್ ಹತ್ಯೆಯಲ್ಲಿ ಹೈಲೆವೆಲ್ ಸುಪಾರಿ ಆಗಿತ್ತು ಅನ್ನೋದು ತನಿಖೆ ನಡೆಸಿದ ಪೊಲೀಸರಿಗೂ ಗೊತ್ತಿತ್ತು. ಆದರೆ, ಅದನ್ನು ಹೊರಗೆ ಬಿಟ್ಟಿರಲಿಲ್ಲ. ಅದರ ತನಿಖೆಗೂ ಹೋಗಲಿಲ್ಲ. ಸಿಸಿಬಿ ಒಳಗಿನ ವೈರುಧ್ಯಗಳು, ನೋಟಿನ ಕಂತೆಗಳ ವಹಿವಾಟುಗಳು ಹೊರಬೀಳುತ್ತಿದ್ದಂತೆ ಈ ಹೊಸ ವಿಷ್ಯ ಈಗ ಹೊರಬಿದ್ದಿದೆ. ಒಬ್ಬನ ಹತ್ಯೆಗಾಗಿ ಅಧಿಕಾರಿಗಳಾಗಿದ್ದವರು ಇಷ್ಟು ಹೇಯವಾಗಿ ಕೈಯಾಡಿಸಿ ಕಾಸು ಮಾಡಿಕೊಳ್ಳುತ್ತಾರಲ್ಲಾ ಎಂದು ಪೊಲೀಸರ ಬಗ್ಗೆ ಅನುಮಾನ, ಜಿಗುಪ್ಸೆ, ರೇಜಿಗೆ ಹುಟ್ಟಿಸುವಂತೆ ಮಾಡಿದೆ ಈ ವಿದ್ಯಮಾನ. 

A High-Level Dealing of Money with top cops and conspiracy exposed in the Murder of Actor Surendra Bantwal by Unknown Hands in Mangalore. A detailed crime report by Headline Karnataka.