ಮೂಗ, ಕಿವುಡಿ ಬಾಲಕಿ ಮೇಲೆ ಅತ್ಯಾಚಾರ ಆರೋಪ ಸಾಬೀತು

21-02-21 01:48 pm       Udupi Correspondent   ಕ್ರೈಂ

ಕಿವಿ ಕೇಳದ, ಮಾತನಾಡಲು ಬಾರದ 15 ವರ್ಷ ಪ್ರಾಯದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸಾಬೀತಾಗಿದೆ.

ಉಡುಪಿ, ಫೆಬ್ರವರಿ 21; ಕಿವಿ ಕೇಳದ, ಮಾತನಾಡಲು ಬಾರದ 15 ವರ್ಷ ಪ್ರಾಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪದಡಿಯಲ್ಲಿ ಬಂಧಿತನಾಗಿದ್ದ ಆರೋಪಿ ಮೇಲಿನ ಎಲ್ಲಾ ದೋಷಾರೋಪಣೆಗಳು ರುಜುವಾತಾದ ಹಿನ್ನೆಲೆಯಲ್ಲಿ ಆತ ಅಪರಾಧಿಯಾಗಿದ್ದಾನೆ.

ಫೆಬ್ರವರಿ 22ರ ಸೋಮವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2018ರ ಡಿಸೆಂಬರ್ ತಿಂಗಳಿನಲ್ಲಿ 15 ವರ್ಷದ ತನ್ನ ಮನೆ ಸಮೀಪದ ಬಾಲಕಿಯನ್ನು ಹರೀಶ್ (33) ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ.

ಸಂತ್ರಸ್ತ ಬಾಲಕಿಗೆ ಕಿವಿ ಕೇಳದ, ಮಾತನಾಡಲು ಬಾರದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. 2019ರಲ್ಲಿ ಒಂದು ದಿನ ರಾತ್ರಿ ಆಕೆ ಹೊಟ್ಟೆನೋವಿನಿಂದ ಬಳಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿ 7ನೇ ತರಗತಿ ಓದಿದ್ದು, ಪಕ್ಕದ ಮನೆಯ ಆರೋಪಿಯನ್ನು ಕೈ ಸನ್ನೆ ಹಾಗೂ ಬರವಣಿಗೆ ಮೂಲಕ ಗುರುತಿಸಿದ ಹಿನ್ನೆಲೆ ಫೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು.

ಅಂದಿನ ಕಾರ್ಕಳ ಪ್ರಭಾರ ಸಿಪಿಐ ಮಹೇಶ್ ಪ್ರಸಾದ್ ಮೊದಲಿಗೆ ತನಿಖೆ ನಡೆಸಿದ್ದು, ಬಳಿಕ ಸಿಪಿಐ ಸಂಪತ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 22 ಸಾಕ್ಷಿಗಳ ಪೈಕಿ ಸಂತ್ರಸ್ತೆ ತಾಯಿ ಸೇರಿದಂತೆ 13 ಮಂದಿ ಸಾಕ್ಷ್ಯ ನುಡಿದಿದ್ದರು. ಡಿಎನ್‌ಎ ವರದಿ ಕೂಡ ಅಭಿಯೋಜನೆಗೆ ಪೂರಕವಾಗಿತ್ತು.

District additional and sessions POCSO special court justice Yadav Vanamala Anand Rao who heard arguments of the case involving the rape of 15-year-old deaf and mute girl making her deliver a baby girl has concluded that the guilt of the accused are proved and reserved the verdict for February 22.