ಚೆಕ್‍ನಲ್ಲಿ ಸಂಖ್ಯೆ ತಿದ್ದಿ ಉದ್ಯಮಿಗೆ 6.30 ಕೋಟಿ ವಂಚನೆ

31-07-20 03:16 pm       Bangalore Correspondent   ಕ್ರೈಂ

ಚೆಕ್‍ನಲ್ಲಿನ ಅಂಕಿಗಳನ್ನು ತಿದ್ದಿ ಸಹೋದ್ಯೋಗಿಗಳೇ ಉದ್ಯಮಿಗೆ ಬರೋಬ್ಬರಿ 6.30 ಕೋಟಿ ರೂ. ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು: ಚೆಕ್‍ನಲ್ಲಿನ ಅಂಕಿಗಳನ್ನು ತಿದ್ದಿ ಸಹೋದ್ಯೋಗಿಗಳೇ ಉದ್ಯಮಿಗೆ ಬರೋಬ್ಬರಿ 6.30 ಕೋಟಿ ರೂ. ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ರಾಜಶೇಖರ ರೆಡ್ಡಿ ವಂಚನೆಗೊಳಗಾದ ಉದ್ಯಮಿಯಾಗಿದ್ದು, ಭಾಸ್ಕರ್ ರೆಡ್ಡಿ, ವೆಂಕಟರಮಣ ರೆಡ್ಡಿ ಹಾಗೂ ಸುದರ್ಶನ ಗಾಲಿ ವಂಚಿಸಿದ ಆರೋಪಿಗಳು. ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳು ಚೆಕ್ ಮೌಲ್ಯ ಮಾರ್ಪಾಡುಗೊಳಿಸಿ ಉದ್ಯಮಿಗೆ ಬೃಹತ್ ವಂಚನೆ ಮಾಡಿದ್ದಾರೆ.

ಆರೋಪಿಗಳು ರಾಜಶೇಖರ ರೆಡ್ಡಿ ಜೊತೆ ಖಾಸಗಿ ಕಂಪನಿಯ ಸಹಭಾಗಿತ್ವ ಹೊಂದಿದ್ದರು. ರಾಜಶೇಖರ ರೆಡ್ಡಿ ನೀಡಿದ್ದ 8 ಲಕ್ಷ ರೂ.ಗಳ 7 ಚೆಕ್‍ಗಳನ್ನು ಆರೋಪಿಗಳು 80 ಲಕ್ಷ ರೂ.ಗಳಿಗೆ ಮಾರ್ಪಾಡು ಮಾಡಿದ್ದಾರೆ. 7 ಲಕ್ಷದ ಒಂದು ಚೆಕ್‍ನ್ನು 70 ಲಕ್ಷ ರೂ.ಗೆ ಬದಲಿಸಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಒಂದು ವರ್ಷದ ಹಿಂದಿನ ಮೋಸ ಆಡಿಟ್ ವೇಳೆ ಬಯಲಿಗೆ ಬಂದಿದೆ. ಅಸಲಿ ವಿಚಾರ ತಿಳಿಯುತ್ತಿದ್ದಂತೆ 1,00,60,000 ರೂ.ಗಳನ್ನು ಆರೋಪಿಗಳು ಮರಳಿ ನೀಡಿದ್ದಾರೆ. ಉಳಿದ ಹಣ ವಾಪಾಸ್ ನೀಡದೆ ಸತಾಯಿಸುತ್ತಿದ್ದಾರೆ.

ಉಳಿದ ಹಣವನ್ನು ನೀಡದೆ ಕಾಡಿಸುತ್ತಿದ್ದ ಹಿನ್ನೆಲೆ ರಾಜಶೇಖರ್ ರೆಡ್ಡಿ ಅವರು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.