ಬೆಂಗಳೂರು: ಮಾನವ ಹಕ್ಕು ಸಂಘಟನೆ ಹೆಸರಲ್ಲಿ ದೋಖಾ ; ಎಸ್ಐ ಜೊತೆ ಸೇರಿ ದರೋಡೆ, ಸಿಕ್ಕಿಬಿದ್ದ ಖದೀಮರು !! 

25-08-20 03:02 pm       Bangalore Crime Correspondant   ಕ್ರೈಂ

ಇಲ್ಲೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಪೊಲೀಸರಿಂದಲೇ ಬಂಧನಕ್ಕೊಳಗಾಗಿದ್ದಾನೆ ಆತನ ಜೊತೆಗೆ ಮಾನವ ಹಕ್ಕು ಹೆಸರಲ್ಲಿ ಸಂಘಟನೆ ಕಟ್ಟಿಕೊಂಡು ಅಮಾಯಕರನ್ನು ಲೂಟಿ ಮಾಡುತ್ತಿದ್ದ ಸಂಘಟನೆ ಅಧ್ಯಕ್ಷನನ್ನೂ ಬಂಧಿಸಿದ್ದಾರೆ. 

ಬೆಂಗಳೂರು, ಆಗಸ್ಟ್ 25: ಕಳ್ಳರು, ದರೋಡೆಕೋರರನ್ನು ಹಿಡಿಯೋರು ಪೊಲೀಸರು. ‌ಆದರೆ, ಪೊಲೀಸರೇ ದರೋಡೆಕೋರರಾದರೆ ಏನ್ ಗತಿ ? ಹೌದು.. ಇಲ್ಲೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಪೊಲೀಸರಿಂದಲೇ ಬಂಧನಕ್ಕೊಳಗಾಗಿದ್ದಾನೆ. ಜೊತೆಗೆ ಮಾನವ ಹಕ್ಕು ಹೆಸರಲ್ಲಿ ಸಂಘಟನೆ ಕಟ್ಟಿಕೊಂಡು ಅಮಾಯಕರನ್ನು ಲೂಟಿ ಮಾಡುತ್ತಿದ್ದ ಸಂಘಟನೆ ಅಧ್ಯಕ್ಷನನ್ನೂ ಬಂಧಿಸಿದ್ದಾರೆ. 

ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಅಧ್ಯಕ್ಷ , ಜ್ಞಾನಭಾರತಿ ನಿವಾಸಿ ಜ್ಞಾನಪ್ರಕಾಶ್ (44) ಮತ್ತು ಎಸ್ ಜೆ ಪಾರ್ಕ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ (31) ಬಂಧನಕ್ಕೊಳಗಾಗಿದ್ದಾರೆ. 

ಜ್ಞಾನಪ್ರಕಾಶ್ ಮಾನವ ಹಕ್ಕುಗಳ ಹೆಸರಿನಲ್ಲಿ ಅಮಾಯಕರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈತನ ಕೃತ್ಯಕ್ಕೆ ಸ್ವತಃ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಆತನ ಸಂಬಂಧಿಯೂ ಆಗಿದ್ದ ಜೀವನ್ ಕುಮಾರ್ ಸಾಥ್ ನೀಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ತೆರಿಗೆ ವಂಚಿಸಲು ಹೋಗಿದ್ದೇ ಮುಳುವಾಯ್ತು..! 

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಡಿಕೆ ಮತ್ತು ತೆಂಗು ಬೆಳೆಗಾರ ಮೋಹನ್, ಬೆಂಗಳೂರಿನ ಚಿಕ್ಕಪೇಟೆಯ ಕುಂಬಾರ ಪೇಟೆಯಲ್ಲಿರುವ ವ್ಯಾಪಾರಿ ಭರತ್ ಎಂಬಾತನಿಗೆ ಅಡಿಕೆ ಮತ್ತು ಕೊಬ್ಬರಿ ಮಾರಾಟ ಮಾಡಿದ್ದರು. ಆದರೆ, ಭರತ್ ಕ್ಯಾಶ್ ಮಾಡಿರಲಿಲ್ಲ. 26 ಲಕ್ಷ ರುಪಾಯಿ ನಗದು ರೂಪದಲ್ಲಿ ನೀಡುವುದಾಗಿ ಹೇಳಿದ್ದ. ಅದರಂತೆ, ಮೋಹನ್ ತನ್ನ ಕೆಲಸಗಾರ ಶಿವಕುಮಾರ ಸ್ವಾಮಿಯನ್ನು ಭರತ್ ಬಳಿಗೆ ಕಳಿಸಿದ್ದ. ಆ.19ರಂದು ಶಿವಕುಮಾರ್ ಹಾಗೂ ಇನ್ನೊಬ್ಬ ಕೆಲಸಗಾರ ದರ್ಶನ್ ಕಾರಿನಲ್ಲಿ ಚಿಕ್ಕಪೇಟೆಗೆ ಬಂದು ಭರತ್ ಅವರಿಂದ ಹಣ ಪಡೆದು ಹಿಂತಿರುಗುತ್ತಿದ್ದರು. ಅದೇ ವೇಳೆಗೆ ಶಿವಕುಮಾರ್ ಗೆ ಕರೆ ಮಾಡಿದ್ದ ಮೋಹನ್ ಇನ್ನೂ ಎರಡು ಲಕ್ಷ ರುಪಾಯಿ ಬರಬೇಕು. ಅಲ್ಲೇ ಇರುವಂತೆ ಸೂಚಿಸಿದ್ದರು. ಹೀಗಾಗಿ ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ಬಳಿ ಕಾರು ಪಾರ್ಕಿಂಗ್ ಮಾಡಿ ಕುಳಿತಿದ್ದ ವೇಳೆ, ಅಲ್ಲಿಗೆ ಸ್ವಿಫ್ಟ್ ಕಾರಿನಲ್ಲಿ ಬಂದ ಜ್ಞಾನಪ್ರಕಾಶ್, ಎಸ್ಐ ಜೀವನ್ ಕುಮಾರ್ ಹಾಗೂ ಸಹಚರ ಕಿಶೋರ್ ಏಕಾಏಕಿ ಶಿವಕುಮಾರ್ ಮತ್ತು ದರ್ಶನ್ ಮೇಲೆ ಹಲ್ಲೆ ನಡೆಸಿದ್ದಾರೆ. ತಾವು ಪೊಲೀಸರು ಎಂದು ಬೆದರಿಸಿ ಹೇಳುವ ಜಾಗಕ್ಕೆ ಕಾರು ಚಲಾಯಿಸುವಂತೆ ಸೂಚಿಸಿದ್ದರು. ಇಬ್ಬರನ್ನೂ ಅವರದೇ ಕಾರಿನಲ್ಲಿ ಕೂರಿಸಿಕೊಂಡು ಯೂನಿಟಿ ಬಿಲ್ಡಿಂಗ್ ಬಳಿ ಕರೆದೊಯ್ದು  26.5 ಲಕ್ಷ ರೂ. ಇದ್ದ ಬ್ಯಾಗನ್ನು  ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿ ಬರುತ್ತಿದ್ದ ಸಹಚರರಿಗೆ ನೀಡಿದ್ದರು. ನಂತರ ಶಿವಕುಮಾರ್ ಹಾಗೂ ದರ್ಶನ್ನನ್ನು ಲಾಲ್ ಬಾಗ್ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಬಳಿಕ, ಮೋಹನ್ ಸೂಚನೆ ಮೇರೆಗೆ ಶಿವಕುಮಾರಸ್ವಾಮಿ ಸಿಟಿ ಮಾರ್ಕೆಟ್ ಠಾಣೆಗೆ ತೆರಳಿ ಕೃತ್ಯದ ಬಗ್ಗೆ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದರು. ಶಿವಕುಮಾರ ಸ್ವಾಮಿಯನ್ನು ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದ ರಸ್ತೆಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಆರೋಪಿಗಳ ಮುಖ ಚಹರೆ ಹಾಗೂ ಕಾರಿನ ನಂಬರ್ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಜ್ಞಾನಪ್ರಕಾಶ್ ಹಾಗೂ ಎಸ್ಐ ಜೀವನ್ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. 

ಸಂಬಂಧಕ್ಕೆ ಕಟ್ಟುಬಿದ್ದ ಇನ್ಸ್ ಪೆಕ್ಟರ್ ಗೆ ಜೈಲು ಕಂಬಿ 

ಜ್ಞಾನಪ್ರಕಾಶ್ ತನ್ನ ನಿಕಟ ಸಂಬಂಧಿಯಾಗಿರುವ ಎಸ್ಐ ಜೀವನ್ ಕುಮಾರ್ ನನ್ನು ಹಣ ದೋಚುವ ಕೃತ್ಯಕ್ಕೆ ಬಳಸುತ್ತಿದ್ದ. ಪೊಲೀಸರು ಎಂದು ಹೇಳಿ ದರೋಡೆ ಮಾಡಿದರೆ ತೆರಿಗೆ ವಂಚಿಸುವ ಉದ್ದೇಶ ಇರುವ ಆರೋಪಿಗಳು, ನಗದು ರೂಪದಲ್ಲಿ ಹಣ ಕೊಂಡೊಯ್ಯುವ ಕಾರಣಕ್ಕೆ ದೂರು ಕೊಡಲು ಮುಂದಾಗಲ್ಲ ಎಂಬ ಲೆಕ್ಕಾಚಾರದಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. 

ಜ್ಞಾನಪ್ರಕಾಶ್ ಬೆಂಗಳೂರಿನ ಎಂಟು ಕಡೆ ಹಾಗೂ ರಾಜ್ಯದ ಆರು ಜಿಲ್ಲೆಗಳಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಕಚೇರಿ ಹೊಂದಿದ್ದಾನೆ.  ಅಲ್ಲದೆ ತಾನೊಬ್ಬ ಪತ್ರಕರ್ತ ಎಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದ. 

ಬಸ್ ಕಂಡಕ್ಟರಾಗಿದ್ದಾತ ಈಗ ಐಷಾರಾಮಿ ! 

ಕಂಡಕ್ಟರ್ ಕಂ ಬಸ್ ಚಾಲಕನಾಗಿ ಕೆಲಸಕ್ಕೆ ಸೇರಿದ ಜ್ಞಾನಪ್ರಕಾಶ್ ಆಬಳಿಕ ನಿಯೋಜನೆ ಮೇಲೆ ವಿಧಾನಸೌಧದ ಹಣಕಾಸು ಇಲಾಖೆಯಲ್ಲೂ ಕೆಲ ಸಮಯ ಚಾಲಕನಾಗಿ ಕೆಲಸ ಮಾಡಿದ್ದ.  ಸಚಿವರಾಗಿದ್ದ ಆರ್.ವಿ ದೇಶಪಾಂಡೆ, ಸದಾನಂದ ಗೌಡ, ಟಿಬಿ ಜಯಚಂದ್ರ ಸೇರಿ ಹಲವರ ಬಳಿ ಚಾಲಕನಾಗಿ ಕೆಲಸ ಮಾಡಿದ್ದಲ್ಲದೆ, ಆನಂತರ ಅದೇ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ.  ಜನಜಾಗೃತಿ ಸಮಿತಿ ಮಾಡಿಕೊಂಡು ಸದಸ್ಯರಾಗಿ ಬರುವ ಮಹಿಳೆಯರನ್ನೂ ಬ್ಲಾಕ್ ಮೇಲ್ ಕೂಪಕ್ಕೆ ತಳ್ಳುತ್ತಿದ್ದ‌. ನಂಬಿಸಿ ಮೋಸ ಮಾಡಿ ಅವರಿಂದಲೇ ಹಣ ಗಳಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.