ಉಡುಪಿ: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ - ನಿರಂಜನ್ ಭಟ್ ಜಾಮೀನು ಅರ್ಜಿ ತಿರಸ್ಕೃತ

01-08-20 06:49 am       Udupi Reporter   ಕ್ರೈಂ

ನಾಲ್ಕು ವರ್ಷಗಳ ಹಿಂದೆ ಕರಾವಳಿ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಎನ್‌ಆರ್‌ಐ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ನಿರಂಜನ ಭಟ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.

ಉಡುಪಿ, ಆ 1: ನಾಲ್ಕು ವರ್ಷಗಳ ಹಿಂದೆ ಕರಾವಳಿ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಎನ್‌ಆರ್‌ಐ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ನಿರಂಜನ ಭಟ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.

2019ರ ಅ.28 ರಂದು ಸೆಶನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಅನಂತರ 2020 ರ ಫೆ.10ರಂದು ಆರೋಪಿಯೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಜು .27 ರಂದು ಆ ಜಾಮೀನು ಅರ್ಜಿಯೂ ತಿರಸ್ಕೃತಗೊಂಡಿದೆ.

ಈ ಹಿಂದೆ ಜೂನ್'ನಲ್ಲಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶದಿಂದಾಗಿ ಷರತ್ತು ಬದ್ಧ 15 ದಿನಗಳ ತಾತ್ಕಾಲಿಕ ಜಾಮೀನು ಮಂಜೂರುಗೊಳಿಸಿತ್ತು.

ಈ ಪ್ರಕರಣದ ಮುಖ್ಯ ಮತ್ತು ಮೊದಲ ಆರೋಪಿ ಮೃತ ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಎರಡನೇ ಆರೋಪಿ ಮತ್ತು ಮೃತನ ಮಗ ನವನೀತ್‌ ಶೆಟ್ಟಿ ಇನ್ನೂ ಜೈಲಿನಲ್ಲಿದ್ದಾರೆ. ಉಡುಪಿ ಮತ್ತು ದುಬೈನಲ್ಲಿ ಉದ್ಯಮಗಳನ್ನು ಹೊಂದಿದ್ದ ಭಾಸ್ಕರ ಶೆಟ್ಟಿ ಅವರನ್ನು ಜು.28, 2016 ರಂದು ಹತ್ಯೆ ಮಾಡಲಾಗಿತ್ತು. ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಅವರನ್ನು ಹತ್ಯೆ ಮಾಡಿ ಅನಂತರ ಶವವನ್ನು ಬೆಳ್ಮಣ್‌ಗೆ ಕೊಂಡೊಯ್ಯಲಾಗಿತ್ತು. ವೃತ್ತಿಯಲ್ಲಿ ಜ್ಯೋತಿಷಿಯೂ ಆಗಿರುವ ಆರೋಪಿ ನಿರಂಜನ್‌ ಭಟ್‌, ಮೃತ ಭಾಸ್ಕರ ಶೆಟ್ಟಿಯ ಶವವನ್ನು ಹೋಮ ಆಚರಣೆಗಳಿಗೆ ಬಳಸುವ ಹೋಮ ಕುಂಡದಲ್ಲಿ ಹಾಕಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು.