ಅತ್ತೆಯ ಹಣದಾಹಕ್ಕೆ ಸೊಸೆ ಬಲಿ ; ಚಿನ್ನ ಬ್ಯಾಂಕಲ್ಲಿಟ್ಟು ಕಿರುಕುಳ, ಹಿಂಸೆ! ಮೂರೇ ತಿಂಗಳಲ್ಲಿ ಮದುವೆ ಮನೆ ಸ್ಮಶಾನ !

27-06-21 07:10 pm       Satish,HK Staff   ಕ್ರೈಂ

19 ವರ್ಷದ ಮತ್ತೊಬ್ಬ ಹೆಣ್ಮಗಳು ಗಂಡನ ಮನೆಯವರ ವರದಕ್ಷಿಣೆಯ ಪೀಡಣೆಯಿಂದಾಗಿ ಸಾವಿಗೀಡಾಗಿರುವ ಘಟನೆ ಆಲುಪ್ಪುಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Photo credits : Manorama News

ತಿರುವನಂತಪುರ, ಜೂನ್ 27: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಸ್ಮಯಾ ಎಂಬ 23 ವರ್ಷದ ಸ್ಫುರದ್ರೂಪಿ ಹೆಣ್ಮಗಳು ಸಾವಿಗೆ ಶರಣಾಗಿದ್ದು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ 19 ವರ್ಷದ ಮತ್ತೊಬ್ಬ ಹೆಣ್ಮಗಳು ಗಂಡನ ಮನೆಯವರ ವರದಕ್ಷಿಣೆಯ ಪೀಡಣೆಯಿಂದಾಗಿ ಸಾವಿಗೀಡಾಗಿರುವ ಘಟನೆ ಆಲುಪ್ಪುಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಮಾರ್ಚ್ 21ರಂದು 19 ವರ್ಷದ ಸುಚಿತ್ರಾಳನ್ನು ಮೂರು ತಿಂಗಳ ಹಿಂದಷ್ಟೇ ಆಲುಪ್ಪುಳ ಜಿಲ್ಲೆಯ ವಲ್ಲಿಕುನ್ನು ನಿವಾಸಿ ಸೇನಾ ಯೋಧ ವಿಷ್ಣು ಜೊತೆ ಮದುವೆ ಮಾಡಲಾಗಿತ್ತು. ಗಂಡನ ಮನೆಯಲ್ಲಿ ಅತ್ತೆಯ ಜೊತೆಗೆ ವಾಸವಿದ್ದ ಸುಚಿತ್ರಾಗೆ ಆರಂಭದಿಂದಲೇ ಕಿರುಕುಳ ಎದುರಾಗಿತ್ತು. ಆದರೆ, ಜೂನ್ 22ರಂದು ಆಕೆಯ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿದ್ದು ಸುಚಿತ್ರಾ ಹೆತ್ತವರಲ್ಲಿ ಆಘಾತ ಮೂಡಿಸಿದೆ.

ಒಳ್ಳೆ ಸಂಬಂಧ ಕೂಡಿ ಬಂತೆಂದು ಸುಚಿತ್ರಾಗೆ ಸಣ್ಣ ವಯಸ್ಸಲ್ಲೇ ಮದುವೆಗೆ ಮುಂದಾಗಿದ್ದರು. ಅಲ್ಲದೆ, ಮಗಳ ಮದುವೆ ಬಗ್ಗೆ ಜ್ಯೋತಿಷಿ ಬಳಿ ಕೇಳಿದಾಗ, ಮದುವೆ ಆಗೋದಿದ್ದರೆ 20 ವರ್ಷ ತುಂಬುವ ಮೊದಲು ಮಾಡಿಸಬೇಕು. ಇಲ್ಲದಿದ್ದರೆ ವಿವಾಹ ಭಾಗ್ಯಕ್ಕೆ ಇನ್ನೂ ಏಳು ವರ್ಷ ಕಾಯಬೇಕಾಗುತ್ತದೆ ಎಂದು ಹೇಳಿದ್ದರು. ಒಳ್ಳೆ ಸಂಬಂಧ ಬಿಡುವುದು ಯಾಕೆಂದು ಪದವಿ ಓದುತ್ತಿದ್ದ ಸುಚಿತ್ರಾಳನ್ನು ಹೆತ್ತವರು ಅದ್ದೂರಿಯಾಗೇ ಮದುವೆ ಮಾಡಿಕೊಟ್ಟಿದ್ದರು. ಅಲ್ಲದೆ, ವರದಕ್ಷಿಣೆ ರೂಪದಲ್ಲಿ 51 ಪವನ್ ಚಿನ್ನಾಭರಣ ಮತ್ತು ಒಂದು ಕಾರನ್ನು ಕೂಡ ಕೊಡಿಸಿದ್ದರು.

ಆದರೆ, ಮದುವೆಯ ನಂತರ ಆಕೆಯ ಮನೆಯಲ್ಲಿ ಮತ್ತಷ್ಟು ಹಣ ತರುವಂತೆ ಮಗಳನ್ನು ಪೀಡಿಸಿದ್ದರು. ನಾವು ಮೊದಲಿಗೆ ಬೈಕ್ ಕೊಡಿಸುವುದು ಎಂದುಕೊಂಡಿದ್ದೆವು. ವಿಷ್ಣುವಿನ ತಂದೆ ಕಾರು ಕೊಡಿಸಲು ಕೇಳಿದ್ದಕ್ಕೆ, ಅದನ್ನೇ ಕೊಡಿಸಿದ್ದೆವು. ಆದರೆ ಮದುವೆಯ ನಂತರ ಹತ್ತು ಲಕ್ಷ ಹಣ ತರುವಂತೆ ಸುಚಿತ್ರಾಳನ್ನು ಪೀಡಿಸುತ್ತಿದ್ದರು. ಆನಂತರ ನನ್ನ ನಿವೃತ್ತಿ ಬಳಿಕ ಪಿಂಚಣಿ ಸಿಕ್ಕರೆ ಮತ್ತಷ್ಟು ಹಣ ಹೊಂದಿಸಿಕೊಡುವುದಾಗಿ ಹೇಳಿದ್ದೆ. ಆದರೆ, ವಿಷ್ಣುವಿನ ತಂದೆ ತನ್ನ ಇನ್ನೊಬ್ಬ ಮಗಳಿಗಾಗಿ ಹಣ ಅರ್ಜೆಂಟ್ ಬೇಕೆಂದು ಪೀಡಿಸಿದ್ದರು. ಅದಲ್ಲದೆ, ಮಗಳಿಗೆ ಕೊಟ್ಟಿದ್ದ ಬಂಗಾರವನ್ನು ಆಕೆಯ ಅತ್ತೆ ಬ್ಯಾಂಕ್ ಲಾಕರಿನಲ್ಲಿ ಇಡುವುದಾಗಿ ಕೊಂಡೊಯ್ದು ಸಾಲ ತೆಗೆದಿದ್ದರು. ಈ ವಿಚಾರದಲ್ಲಿ ಮನೆಯಲ್ಲಿ ಜಟಾಪಟಿ ಆಗ್ತಿತ್ತು ಎಂದು ಸುಚಿತ್ರಾ ತಂದೆ ಸುನಿಲ್ ಮನೋರಮಾ ನ್ಯೂಸ್ ಜೊತೆಗೆ ಹೇಳಿದ್ದಾರೆ.

ಲಾಕರಿನಲ್ಲಿಟ್ಟಿದ್ದ ಚಿನ್ನಾಭರಣದ ಬಗ್ಗೆ ಮಗಳು ಅತ್ತೆಯನ್ನು ಕೇಳಿದ್ದಕ್ಕೆ, ನಿನಗೆ ಅಷ್ಟು ನಂಬಿಕೆ ಇಲ್ಲವೇ ನನ್ನ ಮೇಲೆ ಎಂದು ಹೇಳಿ ದೈಹಿಕ ಹಲ್ಲೆಯನ್ನೂ ನಡೆಸಿದ್ದರು. ನಿರಂತರ ಕಿರುಕುಳ ಕೊಡುತ್ತಾ ಬಂದಿದ್ದರು. ಒಂದು ದಿನ ನನಗೆ ಕರೆ ಮಾಡಿ, ತುಂಬ ಅತ್ತುಕೊಂಡಿದ್ದಳು. ನೀವು ನನಗೆ ಯಾಕೆ ಬಂಗಾರ ಕೊಟ್ಟಿರಿ. ಈ ಬಂಗಾರದ ಹೆಸರಲ್ಲೇ ಮನೆಯಲ್ಲಿ ದಿನವೂ ಜಗಳ ಆಗುತ್ತಿದೆ ಎಂದು ಕೇಳಿದ್ದಳು ಎಂಬುದಾಗಿ ಸುಚಿತ್ರಾಳ ತಾಯಿ ಸುನಿತಾ ಏಶ್ಯಾನೆಟ್ ಜೊತೆಗೆ ಮಾತನಾಡಿದ್ದಾರೆ. ಗಂಡ ಸೇನೆಯಲ್ಲಿದ್ದರೂ ಆತನಿಗೆ ತಾಯಿಯೇ ಸೊಸೆಯ ಬಗ್ಗೆ ಏನೆಲ್ಲಾ ಹೇಳಿ, ಎತ್ತಿ ಕಟ್ಟುತ್ತಿದ್ದಳು. ವಿಷ್ಣು ಫೋನ್ ಮಾಡುತ್ತಿದ್ದಾಗ ಮನೆಯ ಹೊರಗೆ ನಿಂತು ನನಗೆ ಹಿಂಸೆ ನೀಡುತ್ತಿದ್ದಾಳೆಂದು ಹೇಳಿ, ಆತನನ್ನು ಕೆರಳಿಸುತ್ತಿದ್ದಳು ಎಂದು ಸುನಿತಾ ಹೇಳಿದ್ದಾರೆ.

ವಿಷ್ಣು ಮತ್ತವರ ಕುಟುಂಬ ಕೇವಲ ಹಣಕ್ಕಾಗಿಯೇ ಇದೆಲ್ಲವನ್ನೂ ಮಾಡ್ತಾ ಇತ್ತು. ಸುಚಿತ್ರಾಳನ್ನು ಮದುವೆಯಾಗುವುದಕ್ಕೂ ಮುನ್ನ ಬೇರೊಂದು ಸಂಬಂಧ ಆಗಿತ್ತು. ಮದುವೆಯ ಮೊದಲೇ ಹತ್ತು ಲಕ್ಷ ಹಣ ಕೇಳಿದ್ದಕ್ಕೆ ಆ ಕುಟುಂಬ ಸಂಬಂಧವನ್ನೇ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿತ್ತು. ಸುಚಿತ್ರಾ ಫ್ಯಾಮಿಲಿಗೂ ಅದೇ ಸ್ಥಿತಿಯಾಗಿದೆ. ಸುಚಿತ್ರಾಳ ತಂದೆ ಮೊದಲು ವ್ಯಾಗನರ್ ಕಾರು ತೆಗೆಸಿಕೊಡಲು ಮುಂದಾಗಿದ್ದರು. ಆದರೆ, ವಿಷ್ಣು ಕಡೆಯವರು ಟಾಟಾ ಕಂಪೆನಿಯ ಹೊಸ ಮಾಡೆಲ್ ಕಾರು ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಅದಕ್ಕೆ ಕೊನೆಗೆ ಒಪ್ಪಿಗೆಯನ್ನೂ ನೀಡಿದ್ದೆವು. ಆದರೆ, ಮದುವೆಗೆ ಇನ್ನೇನು ಕೆಲವು ದಿನ ಇದೆ ಎನ್ನುವಾಗ ಹತ್ತು ಲಕ್ಷ ಹೆಚ್ಚುವರಿ ಹಣ ನೀಡುವಂತೆ ಕೇಳಿದ್ದರು. ಈ ಹಿಂದೆ ಬೇರೊಂದು ಕುಟುಂಬಕ್ಕೆ ಮಾಡಿದ ರೀತಿಯಲ್ಲೇ ಹಣ ಕೇಳಲು ಬಂದಿದ್ದರು. ಆದರೆ, ಆಗ ನಮಗೆ ಇವರ ಹಣದಾಸೆಯ ಬುದ್ಧಿ ತಿಳಿದಿರಲಿಲ್ಲ. ಹಳೆಯ ಸಂಬಂಧದಲ್ಲಿ ಹಾಗಾಗಿದ್ದೂ ಗೊತ್ತಿರಲಿಲ್ಲ. ಈಗ ಸುಚಿತ್ರಾ ಸಾವಿನ ನಂತರ, ಹಿಂದೆ ಈ ಅನುಭವ ಆಗಿರುವ ಕುಟುಂಬಸ್ಥರು ತಮ್ಮ ನೋವಿನ ಬಗ್ಗೆ ನಮ್ಮನ್ನು ಸಂಪರ್ಕಿಸಿ ಹೇಳಿಕೊಂಡಿದ್ದಾರೆ ಎಂದು ಸುಚಿತ್ರಾ ಮಾವ ಸಜೀವನ್ ಮನೋರಮಾ ನ್ಯೂಸ್ ಗೆ ಅಲವತ್ತುಕೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಮೂರು ಹೆಣ್ಮಕ್ಕಳು ವರದಕ್ಷಿಣೆಯ ಕಿರುಕುಳದ ಕಾರಣದಿಂದ ಸಾವು ಕಂಡಿದ್ದಾರೆಂದು ವರದಿಯಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ ವಿಸ್ಮಯಾ ಎಂಬ ಆಯುರ್ವೇದ ಕಾಲೇಜಿನ ಪದವಿ ವಿದ್ಯಾರ್ಥಿನಿ ತನ್ನ ಗಂಡನ ಮನೆಯಲ್ಲಿ ನಿಗೂಢ ಸಾವು ಕಂಡಿದ್ದಳು. ಅದಕ್ಕೆ ಆಕೆಯ ಗಂಡನೇ ಕಾರಣ ಎಂದು ಆರೋಪ ಕೇಳಿಬಂದಿತ್ತು. ಅದೇ ಜೂನ್ 21ರಂದು ಅರ್ಚನಾ ಎಂಬ 24 ವರ್ಷದ ಯುವತಿ ತನ್ನ ಗಂಡನ ಮನೆಯಲ್ಲಿ ನಿಗೂಢ ಸಾವು ಕಂಡಿದ್ದೂ ವರದಿಯಾಗಿತ್ತು. ಆ ಪ್ರಕರಣದಲ್ಲಿಯೂ ಆಕೆಯ ಗಂಡ ಸುರೇಶ್ ವರದಕ್ಷಿಣೆ ತರುವಂತೆ ಪೀಡಿಸಿದ್ದಾಗಿ ಆರೋಪ ಕೇಳಿಬಂದಿತ್ತು. 

Read: 100 ಪವನ್ ಚಿನ್ನ, ಒಂದೆಕ್ರೆ ಭೂಮಿ, ಟಯೋಟಾ ಕಾರು ಕೊಟ್ಟರೂ ತೀರದ ದಾಹ ; ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ !

A 19-year-old married woman was found dead at her husband’s house at Vallikunnam on Tuesday. The deceased was identified as Suchitra, wife of Vishnu. Over the past one week, Kerala has reported multiple deaths of women, all of which are suspected dowry deaths. It was on June 21 that 22-year-old Vismaya, a final year Bachelor of Ayurvedic Medicine and Surgery student was found dead in her husband Kiran Kumar’s house in Kollam’s Sasthamkotta. Vismaya had previously shared with her family about the brutal assault at the hands of her husband with pictures.