ಗೋರಖ್ ಪುರ ದೇಗುಲಕ್ಕೆ ಉಗ್ರ ನುಗ್ಗಿ ಬ್ಲಾಸ್ಟ್ ! ಕರೆಯ ಬೆನ್ನತ್ತಿ ಬೇಸ್ತು ಬಿದ್ದ ಪೊಲೀಸರು 

06-09-20 02:06 pm       Headline Karnataka News Network   ಕ್ರೈಂ

ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ದೇವಸ್ಥಾನಕ್ಕೆ ಉಗ್ರನೊಬ್ಬ ನುಗ್ಗಿದ್ದು ಯಾವುದೇ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಮಾಡಬಹುದು ಎಂದು ಹೇಳಿದ್ದ.

ಗೋರಖ್‌ಪುರ, ಸೆಪ್ಟೆಂಬರ್ 6: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೋರಖನಾಥ ದೇವಸ್ಥಾನಕ್ಕೆ ಭಯೋತ್ಪಾದಕ ನುಗ್ಗಿದ್ದಾನೆ ಎಂಬ ಎಂಬ ಕರೆಯ ಬೆನ್ನತ್ತಿದ  ಪೊಲೀಸರು ಬೇಸ್ತು ಬಿದ್ದಿದ್ದಾರೆ.

ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ದೇವಸ್ಥಾನಕ್ಕೆ ಉಗ್ರನೊಬ್ಬ ನುಗ್ಗಿದ್ದು ಯಾವುದೇ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಮಾಡಬಹುದು ಎಂದು ಹೇಳಿದ್ದ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಸೇರಿದ ದೇವಸ್ಥಾನ ಇದಾಗಿದ್ದು ಭಯೋತ್ಪಾದಕ ನುಗ್ಗಿದ ಕರೆ ಬಂದ ಕೂಡಲೇ ಪೊಲೀಸರು ಎಲರ್ಟ್ ಆಗಿದ್ದರು. ಸ್ಥಳಕ್ಕೆ ಶ್ವಾನ ದಳದೊಂದಿಗೆ ದೌಡಾಯಿಸಿದ ಪೊಲೀಸ್‌ ತಂಡ, ದೇವಾಲಯ ಮತ್ತು ಅಲ್ಲಿನ ಪರಿಸರವನ್ನು ಸಂಪೂರ್ಣ ಪರಿಶೀಲನೆ ನಡೆಸಿತು. ದೇವಾಲಯದ ಒಳಗೆ ಅಥವಾ ಹೊರಗೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿ ಪತ್ತೆಯಾಗಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ, ಸ್ಥಳೀಯರನ್ನು ವಿಚಾರಿಸಿದ ನಂತರ ಅದೊಂದು ಹುಸಿ ಕರೆ ಎಂಬ ನಿರ್ಧಾರಕ್ಕೆ ಬಂದರು ಪೊಲೀಸರು. 

ಆನಂತರ ಕರೆ ಮಾಡಿದ ವ್ಯಕ್ತಿಯ ಹುಡುಕಾಟ ನಡೆಸಿದಾಗ, ಆತನೂ ಸಿಕ್ಕಿಬಿದ್ದ. ಬನ್ಸ್‌ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿವೇಂದ್ರ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ ಕರೆ ಮಾಡಿದ್ದು ದೃಢವಾಗಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ, ಈತ ಮಾನಸಿಕ ಅಸ್ವಸ್ಥ ಎಂದಿದ್ದಾರೆ. ತನಿಖೆ ನಡೆಯುತ್ತಿದೆ.

Join our WhatsApp group for latest news updates