ಇನ್ಸ್ ಪೆಕ್ಟರ್ ಸೈಕಲ್ ಬೆನ್ನತ್ತಿ ಸಿಕ್ಕಿಬಿದ್ದ ಚೋರರು ;  9 ಸೈಕಲ್ ವಶಕ್ಕೆ, ಜೂಜು, ಕುಡಿತಕ್ಕಾಗಿ ಸೈಕಲ್ ಕದ್ದು ಮಾರುತ್ತಿದ್ದರು!  

30-08-21 10:25 pm       Mangaluru Correspondent   ಕ್ರೈಂ

ಇನ್ಸ್ ಪೆಕ್ಟರ್ ಪುತ್ರನ ಸೈಕಲ್ ಕಳವು ಪ್ರಕರಣದ ಬೆನ್ನತ್ತಿ ಹೋದ ಬರ್ಕೆ ಠಾಣೆಯ ಪೊಲೀಸರು ಸಾವಿರಾರು ರೂಪಾಯಿ ಬೆಲೆಬಾಳುವ 9 ಸೈಕಲ್ ಗಳನ್ನು ಪತ್ತೆ ಮಾಡಿದ್ದು, ಮೂವರನ್ನು ಸೆರೆಹಿಡಿದಿದ್ದಾರೆ. 

ಮಂಗಳೂರು, ಆಗಸ್ಟ್ 30: ಇನ್ಸ್ ಪೆಕ್ಟರ್ ಪುತ್ರನ ಸೈಕಲ್ ಕಳವು ಪ್ರಕರಣದ ಬೆನ್ನತ್ತಿ ಹೋದ ಬರ್ಕೆ ಠಾಣೆಯ ಪೊಲೀಸರು ಸಾವಿರಾರು ರೂಪಾಯಿ ಬೆಲೆಬಾಳುವ 9 ಸೈಕಲ್ ಗಳನ್ನು ಪತ್ತೆ ಮಾಡಿದ್ದು, ಮೂವರನ್ನು ಸೆರೆಹಿಡಿದಿದ್ದಾರೆ. 

ಆಗಸ್ಟ್ 26ರಂದು ರಾತ್ರಿ ಉರ್ವಾ ಮಾರ್ಕೆಟ್ ಬಳಿಯ ಚೈತನ್ಯ ಅಪಾರ್ಟ್ಮೆಂಟ್ ನಲ್ಲಿ ಮನೆ ಹೊಂದಿರುವ ಟ್ರಾಫಿಕ್ ಇನ್ ಸ್ಪೆಕ್ಟರ್ ಮಹಮ್ಮದ್ ಶರೀಫ್ ಅವರ ಪುತ್ರನ ಸೈಕಲ್ ಕಳವಾಗಿತ್ತು. ಕಳ್ಳನಿಗೇನು ಗೊತ್ತು. ಇದು ಇನ್ಸ್ ಪೆಕ್ಟರ್ ಪುತ್ರನ ಸೈಕಲ್ ಎಂದು. ಕಳ್ಳ ಎಂದಿನಂತೆ, ಫ್ಲಾಟ್ ಕೆಳಗೆ ಪಾರ್ಕಿಂಗ್ ನಲ್ಲಿ ಇರಿಸಿದ್ದ ಸೈಕಲನ್ನು ಎಗರಿಸಿಕೊಂಡು ಹೋಗಿದ್ದ. ಸೈಕಲ್ ಎತ್ತಿಕೊಂಡು ಹೋಗಿದ್ದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಸಿಸಿಟಿವಿ ಫೋಟೋ ಹಿಡಿದು ಬರ್ಕೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ರಾತ್ರಿ ವೇಳೆ ಅಡ್ಡಾಡುತ್ತಿದ್ದ ಪುಂಡು ಪೋಕರಿಗಳು ಸಿಕ್ಕಿಬಿದ್ದಿದ್ದಾರೆ. ಉರ್ವಾ ಮಾರ್ಕೆಟ್ ಆಸುಪಾಸಿನಲ್ಲಿ ಅಡ್ಡಾಡುತ್ತಿದ್ದ ಒಬ್ಬಾತನನ್ನು ಹಿಡಿದು ಬಾಯಿ ಬಿಡಿಸಿದಾಗ ಸೈಕಲ್ ಕಳವು ಜಾಲದ ಕತೆ ಹೊರಬಿದ್ದಿದೆ.

ಇವರು ಹಗಲು ಹೊತ್ತಿನಲ್ಲಿ ಇಸ್ಪೀಟ್ ಆಡುವುದು, ಪುಂಡು ಪೋಕರಿಗಳ ರೀತಿ ಅಡ್ಡಾಡುವುದು, ರಾತ್ರಿ ವೇಳೆ ಕುಡಿದು ಟೈಟ್ ಆಗಿ ಮಲಗುತ್ತಿದ್ದರು. ಸಿಕ್ಕ ಸಿಕ್ಕಲ್ಲಿ ಮಲಗುತ್ತಿದ್ದ ಇವರಿಗೆ ಲೋಕದ ಪರಿವೆ ಇರಲಿಲ್ಲ. ಹಣಕ್ಕಾಗಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದರು. ಇವರಿಗೆ ಸುಲಭದಲ್ಲಿ ದಕ್ಕಿದ್ದು ಅಪಾರ್ಟ್ಮೆಂಟ್ ಕೆಳಗಡೆ ನಿಲ್ಲಿಸುತ್ತಿದ್ದ ಸೈಕಲ್ ಗಳು. 20 ಸಾವಿರ, 30 ಸಾವಿರ ಬೆಲೆಯ ಸೈಕಲನ್ನು ಎತ್ತಿಕೊಂಡು ಹೋಗಿ ಅದರ ಬೆಲೆಯೇ ಗೊತ್ತಿಲ್ಲದೆ 500, ಒಂದು ಸಾವಿರ ರೂ.ಗೆ ಮಾರುತ್ತಿದ್ದರು. ಇವರಿಗೆ ಆಯಾ ದಿನದ ಖರ್ಚಿಗೆ ಸಿಕ್ಕರೆ ಸಾಕಿತ್ತು.

ಸದ್ಯಕ್ಕೆ ಮೂವರನ್ನು ಬಂಧಿಸಿ, 9 ಸೈಕಲ್ ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಮೂಲದ ಹನುಮಂತ(35), ಶಿವಮೊಗ್ಗ ಜಿಲ್ಲೆ ವಿನೋಬಾ ನಗರದ ಮಂಜುರಾಜ್ (29), ಕುತ್ತಾರ್ ನಿವಾಸಿ ಶಂಕರ ಶೆಟ್ಟಿ (66) ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಾಮಾನ್ಯವಾಗಿ ಸೈಕಲ್ ಕಳವಾದರೆ, ಯಾರು ಕೂಡ ಪೊಲೀಸ್ ದೂರು ಕೊಡುವುದಿಲ್ಲ. ಹೀಗಾಗಿ ಸೈಕಲನ್ನು ಕದಿಯುವುದನ್ನು ಆರೋಪಿಗಳು ಸುಲಭದ ದಾರಿ ಮಾಡಿಕೊಂಡಿದ್ದರು.

ಪೊಲೀಸ್ ಇನ್ಸ್ ಪೆಕ್ಟರ್ ಮನೆಗೇ ಕನ್ನ ! ಸೈಕಲ್ ಎಗರಿಸಿ ಪರಾರಿಯಾದ ಕಳ್ಳ !!

Three persons were arrested for stealing a bicycle from an apartment in Urwa. On August 28, the accused stole the bicycle from the apartment. The cycle belonged to a police inspector’s son. The arrested are identified as Hanumantha (30) from Haveri, Manjuraj (29) from Shivamogga and Shankar Shetty (66) from Kuthar.