ಒಂಬತ್ತು ಎಕರೆ ಆಸ್ತಿಗಾಗಿ ಕುಟುಂಬಸ್ಥರನ್ನೆಲ್ಲ ಕೊಲ್ಲಲು ಪ್ಲಾನ್ ! 20 ವರ್ಷದಲ್ಲಿ ಐವರನ್ನು ಕೊಂದು ಮುಗಿಸಿದ್ದ ನರ ಹಂತಕ ಲೀಲು ಕೊನೆಗೂ ಜೈಲುಪಾಲು !!

26-09-21 04:01 pm       Headline Karnataka News Network   ಕ್ರೈಂ

ಪಿತ್ರಾರ್ಜಿತ ಆಸ್ತಿ ಪೂರ್ತಿ ತನಗೊಬ್ಬನಿಗೇ ಸೇರಬೇಕೆಂದು ದುರುಳನೊಬ್ಬ ಕುಟುಂಬದ ಐದು ಮಂದಿಯನ್ನು ಸದ್ದಿಲ್ಲದೆ ಕೊಂದು ಮುಗಿಸಿದ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಗಾಜಿಯಾಬಾದ್, ಸೆ.26: ಪಿತ್ರಾರ್ಜಿತ ಆಸ್ತಿ ಪೂರ್ತಿ ತನಗೊಬ್ಬನಿಗೇ ಸೇರಬೇಕೆಂದು ದುರುಳನೊಬ್ಬ ಕುಟುಂಬದ ಐದು ಮಂದಿಯನ್ನು ಸದ್ದಿಲ್ಲದೆ ಕೊಂದು ಮುಗಿಸಿದ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ. 20 ವರ್ಷಗಳ ಅವಧಿಯಲ್ಲಿ ತನ್ನ ಸೋದರ ಸೇರಿದಂತೆ ಕುಟುಂಬ ಸದಸ್ಯರನ್ನೇ ಒಬ್ಬರ ನಂತರ ಒಬ್ಬರಂತೆ ಆತ ಕೊಂದು ಮುಗಿಸಿದ್ದ.

ಇತ್ತೀಚೆಗೆ ರೇಶು ಎನ್ನುವ ಯುವಕನ ನಾಪತ್ತೆ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ, ಈ ಹಿಂದೆ ಆಗಿಹೋಗಿದ್ದ ಐದು ಕೊಲೆಗಳ ಪ್ರಕರಣ ಬಯಲಿಗೆ ಬಂದಿದೆ. ಮುರಾದ್ ನಗರದ ನಿವಾಸಿ, ಎಕರೆಗಟ್ಟಲೆ ಆಸ್ತಿ ಹೊಂದಿದ್ದ ಲೀಲು ತ್ಯಾಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಒಂದೇ ಕುಟುಂಬದ ಐದು ಮಂದಿಯನ್ನು ಆಸ್ತಿ ಕಾರಣಕ್ಕಾಗಿಯೇ ಕೊಂದು ಮುಗಿಸಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧಿಸಿ ಪೊಲೀಸರು ಲೀಲು ತ್ಯಾಗಿ, ಆತನಿಗೆ ನೆರವು ನೀಡಿದ್ದ ನಿವೃತ್ತ ಪೊಲೀಸ್ ಇನ್ ಸ್ಪೆಕ್ಟರ್ ಸುರೇಂದ್ರ ತ್ಯಾಗಿ, ಚಾಲಕ ರಾಹುಲ್ ಎಂಬವರನ್ನು ಬಂಧಿಸಿದ್ದಾರೆ. ಬಾಡಿಗೆ ಹಂತಕ ವಿಕ್ರಾಂತ್ ಮತ್ತು ಆತನ ಸಹಚರ ಮುಕೇಶ್ ನಾಪತ್ತೆಯಾಗಿದ್ದಾನೆ.

ಲೀಲು ತ್ಯಾಗಿ ಕುಟುಂಬಕ್ಕೆ 9 ಎಕರೆ ಆಸ್ತಿಯಿದೆ. ಸದ್ಯ ಅದರ ಮಾರುಕಟ್ಟೆ ಬೆಲೆ ಅಂದಾಜು 5 ಕೋಟಿ ಇದೆ. 2001ರಲ್ಲಿ ಸೋದರರಾದ ಸುಧೀರ್, ಬೃಜೇಶ್ ಮತ್ತು ಲೀಲುಗೆ ಸಮಾನವಾಗಿ ಆಸ್ತಿಯನ್ನು ಹಂಚಿಕೆ ಮಾಡಲಾಗಿತ್ತು. ಆಗ ಲೀಲು ತ್ಯಾಗಿ 28 ವರ್ಷದ ಯುವಕ. ಒಟ್ಟು ಆಸ್ತಿ ತನಗೇ ಸೇರಬೇಕೆಂದು ಆಗಲೇ ಸಂಚು ಹೂಡಿದ್ದ ಲೀಲು, ಒಬ್ಬೊಬ್ಬರನ್ನೇ ಕೊಂದು ಮುಗಿಸಲು ಮುಂದಾಗಿದ್ದ. ಆಸ್ತಿ ಹಂಚಿಕೆಯಾದ ಬೆನ್ನಲ್ಲೇ, ಸುಭಾಷ್ ಎಂಬಾತ ಬಾಡಿಗೆ ಹಂತಕನಿಗೆ ಲೀಲು ತ್ಯಾಗಿ ಒಂದು ಲಕ್ಷ ಕೊಟ್ಟು ಅಣ್ಣ ಸುಧೀರ್ ನನ್ನು ಕೊಲ್ಲಿಸಿದ್ದಾನೆ. ಸುಧೀರ್ ಮೃತದೇಹ ಆನಂತರ ಕಾಳಿ ನದಿಯಲ್ಲಿ ಪತ್ತೆಯಾಗಿತ್ತು. ಸುಧೀರ್ ನನ್ನು ಶೂಟ್ ಮಾಡಿ ಕೊಂದು ನದಿಗೆ ಎಸೆಯಲಾಗಿತ್ತು. ಆದರೆ, ಸುಧೀರ್ ಸ್ವ ಇಚ್ಚೆಯಿಂದಲೇ ಮನೆ ಬಿಟ್ಟು ಹೋಗಿದ್ದ ಎಂದು ಹೇಳಿಕೊಂಡಿದ್ದ ಲೀಲು ಗ್ರಾಮಸ್ಥರಲ್ಲಿ ಸುಧೀರ್ ನದ್ದು ಆತ್ಮಹತ್ಯೆ ಎನ್ನುವಂತೆ ಬಂಬಿಸಿದ್ದ.

ಆನಂತರ, ಸುಧೀರ್ ಪತ್ನಿ ಅನಿತಾಳನ್ನೇ ಲೀಲು ಮದುವೆಯಾಗಿದ್ದ. ಅದಾಗಲೇ ಸುಧೀರ್ – ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದರು. ಪಾಯಲ್ ಮತ್ತು ಪಾರುಲ್ ಎಂಬ ಇಬ್ಬರು ಹೆಣ್ಮಕ್ಕಳು. 2003ರಲ್ಲಿ ಲೀಲು- ಅನಿತಾ ದಾಂಪತ್ಯದಲ್ಲಿ ಮತ್ತೊಂದು ಮಗ ಹುಟ್ಟಿದ್ದ. ಆತನಿಗೆ ಶಾಂಕಿ ಎಂದು ಹೆಸರಿಟ್ಟಿದ್ದರು. 2006ರಲ್ಲಿ ಅನಿತಾ ತನ್ನ ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಎಂಟು ವರ್ಷದವಳಿದ್ದ ಮಗಳು ಪಾಯಲ್ ಗೆ ಆಹಾರದಲ್ಲಿ ವಿಷ ಬೆರಸಿ ಸಾಯಿಸಿದ್ದಾನೆ. ಆನಂತರ, ಮನೆ ಮಂದಿಯಲ್ಲಿ ಹೊಲದಲ್ಲಿದ್ದಾಗ ವಿಷಕಾರಿ ಹಾವು ಕಡಿದು ಪಾಯಲ್ ಸಾವನ್ನಪ್ಪಿದ್ದಾಗಿ ನಂಬಿಸಿದ್ದ. 2009ರಲ್ಲಿ ಮತ್ತೆ ಪಾಯಲ್ ಸೋದರಿ ಪಾರುಲ್ ಕತೆಯನ್ನೂ ಅದೇ ರೀತಿ ಮುಗಿಸಿದ್ದ. 15 ವರ್ಷ ಆಗಿದ್ದ ಪಾರುಲ್ ಗೆ ವಿಷ ಉಣಿಸಿ ಸಾಯಿಸಿ ಶವವನ್ನು ಗಂಗಾ ಕಾಲುವೆಗೆ ಎಸೆದಿದ್ದ. ಆದರೆ ಮನೆಯವರಲ್ಲಿ ಬೇರೆಯದೇ ಕತೆ ಕಟ್ಟಿದ್ದ. ಪಾರುಲ್, ಬೇರೊಬ್ಬ ಹುಡುಗನ ಜೊತೆ ಪ್ರೀತಿಯ ಸಂಬಂಧ ಬೆಳೆಸಿದ್ದಳು. ಆಕೆಯ ನಾಪತ್ತೆ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ನಮ್ಮ ಮರ್ಯಾದೆಯೇ ಹೋಗುತ್ತದೆ. ಈ ಬಗ್ಗೆ ದೂರು ಕೊಡುವುದು ಬೇಡ ಎಂದು ಸಂತೈಸಿದ್ದ. ಕಾಲುವೆಯಲ್ಲಿ ಸಿಕ್ಕಿದ್ದ ಅಪ್ರಾಪ್ತ ಹುಡುಗಿಯ ಶವವನ್ನು ಪೊಲೀಸರಿಗೆ ಹೇಳದೆಯೇ, ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು.

ಆನಂತರ, ಲೀಲು ತನ್ನ ಇನ್ನೊಬ್ಬ ಸೋದರ ಬೃಜೇಶ್ ಮತ್ತು ಆತನ ಇಬ್ಬರು ಮಕ್ಕಳ ಮೇಲೆ ಕಣ್ಣು ಹಾಕಿದ್ದ. ಬೃಜೇಶ್ ಗೆ ನಿಶು ಮತ್ತು ರೇಶು ಎಂಬ ಇಬ್ಬರು ಗಂಡು ಮಕ್ಕಳಿದ್ದರು. 2013ರಲ್ಲಿ 16 ವರ್ಷದ ನಿಶುವನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಲೀಲು, ಶವವನ್ನು ಹಿಂಡನ್ ನದಿಗೆ ಎಸೆದಿದ್ದ. ಆನಂತರ, ಮನೆಯವರು ಹುಡುಗ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ, ನಿಶು ಡ್ರಗ್ಸ್ ಚಟಕ್ಕೆ ಬಿದ್ದಿದ್ದ. ಎಲ್ಲಿಗೋ ಊರು ಬಿಟ್ಟು ಹೋಗಿದ್ದಾನೆ. ಡ್ರಗ್ಸ್ ವ್ಯಸನಿಯಾಗಿದ್ದ ಆತನ ಬಗ್ಗೆ ಪೊಲೀಸ್ ದೂರು ನೀಡಿದರೆ, ನಮ್ಮದೇ ಮರ್ಯಾದೆ ಹೋಗುತ್ತದೆ ಎಂದು ಹೇಳಿದ್ದ ಲೀಲು ದೂರು ನೀಡದಂತೆ ನೋಡಿಕೊಂಡಿದ್ದ.

ಇತ್ತೀಚೆಗೆ ಮೂರು ತಿಂಗಳ ಹಿಂದೆ, ಇನ್ನೊಬ್ಬ ಹುಡುಗ ರೆಶು(24)ವನ್ನು ಕೊಲ್ಲಲು ಲೀಲು ಪ್ಲಾನ್ ಹಾಕಿದ್ದ. ಅದಕ್ಕಾಗಿ ನಿವೃತ್ತ ಪೊಲೀಸ್ ಅಧಿಕಾರಿ ರವೀಂದ್ರ ತ್ಯಾಗಿ ಎಂಬಾತನ ಸಹಾಯ ಪಡೆದು ಬಾಡಿಗೆ ಹಂತಕ ವಿಕ್ರಾಂತ್ ಗೆ 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದ. ಕಳೆದ ಆಗಸ್ಟ್ 8ರಂದು ವಿಕ್ರಾಂತ್ ತನ್ನ ಐ ಟ್ವೆಂಟಿ ಕಾರಿನಲ್ಲಿ ಮುರಾದ್ ನಗರಕ್ಕೆ ಬಂದಿದ್ದ. ಆತನ ಜೊತೆಗೆ, ರವೀಂದ್ರ ಮತ್ತು ಮುಕೇಶ್ ಕೂಡ ಕಾರಿನಲ್ಲಿದ್ದರು. ಅಲ್ಲಿಗೆ, ರೆಶುವನ್ನು ಕರಕೊಂಡು ಲೀಲು ತ್ಯಾಗಿಯೂ ಬಂದಿದ್ದು, ಯಾವುದೋ ಕಾರಣ ಹೇಳಿ ಒಟ್ಟಾಗಿ ಕಾರಿನಲ್ಲಿ ತೆರಳಿದ್ದಾರೆ. ಆದರೆ, ಕಾರಿನಲ್ಲಿ ತೆರಳುತ್ತಲೇ ರೆಶುವನ್ನು ಕುತ್ತಿಗೆಗೆ ಹಗ್ಗ ಬಿಗಿದು ಹಂತಕರು ಕೊಲೆ ಮಾಡಿದ್ದಾರೆ. ಬಳಿಕ ರೆಶು ಬಾಡಿಯನ್ನು ಗೋಣಿ ಚೀಲದಲ್ಲಿ ತುಂಬಿಸಿ, ಬುಲಂದ್ ಶಹರ್ ಗೆ ಕೊಂಡೊಯ್ದು ಅಲ್ಲಿ ಕಾಲುವೆ ಒಂದಕ್ಕೆ ಎಸೆದಿದ್ದಾರೆ.

ಆನಂತರ, ಮಗ ಕಾಣೆಯಾಗಿದ್ದನ್ನು ತಿಳಿದು ಆತಂಕಗೊಂಡ ಅಪ್ಪ ಬೃಜೇಶ್ ತ್ಯಾಗಿ, ಆಗಸ್ಟ್ 15ರಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪೊಲೀಸರು ಒಂದು ತಿಂಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕಳೆದ ಸೆ.23ರಂದು 48 ವರ್ಷದ ಲೀಲು ತ್ಯಾಗಿಯನ್ನು ವಶಕ್ಕೆ ಪಡೆದಿದ್ದಾರೆ. ಎರಡೇಟು ಬಿಗಿದು ಲೀಲು ಬಾಯಿ ಬಿಡಿಸಿದಾಗ, ಪೊಲೀಸರು ಊಹಿಸದೇ ಇದ್ದ ಸಂಗತಿಗಳನ್ನು ಹೊರಗೆಡವಿದ್ದಾನೆ. ‘ಯೇ ಮರ್ಡರ್ ಕ್ಯಾ ಪೂಚ್ ರಹೇ ಹೋ.. ಇಸೇ ಪೆಹ್ಲೇ ಚಾರ್ ಕಾ ಭೀ ಪೂಚೋ..’’ (ಆ ಒಂದು ಕೊಲೆಯ ಬಗ್ಗೆ ಯಾಕೆ ಕೇಳ್ತೀರಾ ನೀವು. ಅದಕ್ಕೂ ಹಿಂದಿನ ನಾಲ್ಕು ಕೊಲೆಗಳ ಬಗೆಗೂ ಕೇಳಿ..) ಎಂದು ಆರೋಪಿ ಲೀಲು ತ್ಯಾಗಿ ಇದಕ್ಕೂ ಹಿಂದಿನ ಕೊಲೆಗಳ ಬಗ್ಗೆಯೂ ಹೇಳುತ್ತಾ ಹೋಗಿದ್ದಾನೆ. ಪೊಲೀಸರಿಗೇ ಈತನ ಕತೆ ಕೇಳಿ ನಂಬುವುದಕ್ಕೂ ಆಗಲಿಲ್ಲ.

ಕೋಟ್ಯಂತರ ಬೆಲೆಬಾಳುವ ಒಟ್ಟು ಆಸ್ತಿಯನ್ನು ತನಗೇ ಮಾಡಿಸಿಕೊಂಡು ಮಗ ಶಾಂಕಿ ಹೆಸರಲ್ಲಿ ಬರೆಸಲು ಪ್ಲಾನ್ ಹಾಕಿದ್ದ ಲೀಲು ತ್ಯಾಗಿ ಅದಕ್ಕಾಗಿ ಕುಟುಂಬದ ಎಲ್ಲ ಸದಸ್ಯರನ್ನೂ ಮುಗಿಸಲು ಹೊಂಚು ಹಾಕಿದ್ದ. ಇನ್ನು ಒಬ್ಬ ಸೋದರ ಬೃಜೇಶ್ ಮಾತ್ರ ಉಳಿದುಕೊಂಡಿದ್ದ. ಆತನನ್ನೂ ಕಾರು ಡಿಕ್ಕಿಯಾಗಿಸಿ ಕೊಲೆ ಮಾಡಲು ಹಂತಕ ವಿಕ್ರಾಂತ್ ಮೂಲಕ ಪ್ಲಾನ್ ರೆಡಿಯಾಗಿತ್ತು. ಬೃಜೇಶ್ ಪತ್ನಿಯನ್ನೂ ಅದೇ ರೀತಿ ಕೊಲೆ ಮಾಡಲು ಸಂಚು ಹೂಡಿದ್ದ. ಆದರೆ, ಈ ನಡುವೆ ಮಗನ ಸಾವಿನ ಸುದ್ದಿ ಕೇಳಿ, ಆಘಾತಕ್ಕೊಳಗಾಗಿದ್ದ ತಾಯಿ ಆಸ್ಪತ್ರೆ ಸೇರಿದ್ದಳು.

ಸ್ವಂತ ತಮ್ಮ ಲೀಲು ತ್ಯಾಗಿ ಒಂದು ಆಸ್ತಿಗಾಗಿ ತನ್ನ ಕುಟುಂಬಸ್ಥರನ್ನೆಲ್ಲ ಭೀಕರವಾಗಿ ಕೊಲೆಗೈದಿದ್ದ ಎನ್ನುವ ವಿಚಾರ ಕೇಳಿದ ಅಣ್ಣ ಬೃಜೇಶ ಸ್ವತಃ ಶಾಕ್ ಆಗಿದ್ದ. ಪೊಲೀಸರು ಲೀಲುವನ್ನು ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಿದರೆ ಯಾವೊಂದೂ ಚಿಂತೆಯ ನೆರಿಗೆಯೂ ಆತನ ಮುಖದಲ್ಲಿ ಕಾಣಲಿಲ್ಲ. ‘‘ಮೈ ರಾಜಾ ಕೀ ತರಾ ಆಯಾ ಥಾ, ರಾಜಾ ಕೀ ಥರಾ ಜಾವೂಂಗಾ..’’ (ನಾನು ರಾಜನ ರೀತಿಯಲ್ಲೇ ಬಂದಿದ್ದೇನೆ. ರಾಜನ ಥರಾನೇ ಹಿಂದೆ ಹೋಗಲಿದ್ದೇನೆ) ಎಂದು ಹೇಳುತ್ತಾ ಪೊಲೀಸರನ್ನು ಕೆಕ್ಕರಿಸಿಕೊಂಡು ನೋಡುತ್ತಾ ಹೋಗಿದ್ದು ಅಲ್ಲಿದ್ದ ಪತ್ರಕರ್ತರನ್ನೂ ದಂಗುಬಡಿಸಿತ್ತು.

A Man was arrested for killing five members of his family over a period of 20 years to obtain ancestral property in Ghaziabad. Ghaziabad Police had arrested the accused, Leelu Tyagi, who is a resident of Murad Nagar on Wednesday, according to a report by The Indian Express.