ಪರೀಕ್ಷೆ ನಕಲು ಮಾಡಲು ಹೈಟೆಕ್ ತಂತ್ರಜ್ಞಾನ ; ಚಪ್ಪಲಿಗೇ ಬ್ಲೂಟೂತ್ ಅಳವಡಿಸಿ ಸಿಕ್ಕಿಬಿದ್ದ ಐವರು ಖದೀಮರು !

27-09-21 06:02 pm       Headline Karnataka News Network   ಕ್ರೈಂ

ರಾಜಸ್ಥಾನದಲ್ಲಿ ಚಪ್ಪಲಿಯನ್ನೇ ಹೈಟೆಕ್‌ ಬ್ಲೂಟೂತ್‌ ತಂತ್ರಜ್ಞಾನ ಅಳವಡಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಐವರು  ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಜೈಪುರ, ಸೆ, 27: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ಸಾಮಾನ್ಯ. ಆದರೆ ರಾಜಸ್ಥಾನದಲ್ಲಿ ಚಪ್ಪಲಿಯನ್ನೇ ಹೈಟೆಕ್‌ ಬ್ಲೂಟೂತ್‌ ತಂತ್ರಜ್ಞಾನ ಅಳವಡಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಐವರು  ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ರಾಜಸ್ಥಾನದ ಬಿಕಾನೇರ್‌ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ರೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಹೈಟೆಕ್ ಕುತಂತ್ರ ಬಯಲಾಗಿದೆ. 

ಚಪ್ಪಲಿಗೆ ಬ್ಲೂಟೂತ್‌ ಡಿವೈಸ್ ಅಳವಡಿಸಿ ವಿಶೇಷವಾಗಿ ವಿನ್ಯಾಸ ಮಾಡಲಾಗಿತ್ತು. ಆರು ಲಕ್ಷ ರೂ. ಕೊಟ್ಟು ಹೈಟೆಕ್ ಚಪಲಿಯನ್ನು  ಖರೀದಿಸಿದ್ದರು.  ಚಪ್ಪಲಿಗೆ ಸಿಮ್‌ ಅಳವಡಿಸಿ ಇಯರ್‌ ಫೋನ್‌ ಗೆ ಕನೆಕ್ಟ್ ಮಾಡಿದ್ದರು. ಹಾಯಾಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಜೈಲಿಗೆ ತಳ್ಳಿದ್ದಾರೆ. ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದು ಇವರಲ್ಲಿ ಒಬ್ಬಳು ಯುವತಿ  ಇದ್ದಳು. 

ಗಣೇಶ್ ರಾಮ್ ಎಂಬ ಒಬ್ಬನ ಬಗ್ಗೆ ಸಂಶಯ ಬಂದು ಪೊಲೀಸರು ತನಿಖೆ ನಡೆಸಿದ್ದು ಆಗ ತಾನು ಚಪ್ಪಲಿ ಬ್ಲೂಟೂತ್ ಖರೀದಿ ಮಾಡಿದ್ದನ್ನು ಹೇಳಿಕೊಂಡಿದ್ದ‌. ಆನಂತರ, ಇದೇ ಮಾದರಿಯಲ್ಲಿ ನಕಲಿ ಮಾಡಿದ್ದ ಆತನ ಸಹಚರರನ್ನೂ ಪೊಲೀಸರು ಬಂಧಿಸಿದ್ದಾರೆ. 

ಸೆ.26 ರಂದು ರಾಜಸ್ಥಾನದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿದ್ದು ರಾಜ್ಯಾದ್ಯಂತ 16 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು.

Rajasthan Police arrested five persons for allegedly selling Bluetooth device fitted 'chappals' worth Rs 6 lakh to candidates appearing in the exam held to select government school teachers in the state, officials said.