ರಾಮನ ಹಣಕ್ಕೇ ಕನ್ನ : ನಕಲಿ ಚೆಕ್ ಬಳಸಿ ಹಣ ವಿತ್ ಡ್ರಾ !

10-09-20 12:52 pm       Headline Karnataka News Network   ಕ್ರೈಂ

ಕಿಡಿಗೇಡಿಗಳು ರಾಮನ ಹಣವನ್ನೂ ಬಿಟ್ಟಿಲ್ಲ. ನಕಲಿ ಚೆಕ್ ಬಳಸಿ ರಾಮ ಜನ್ಮಭೂಮಿ ಟ್ರಸ್ಟ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ.

ಅಯೋಧ್ಯೆ, ಸೆಪ್ಟೆಂಬರ್ 10: ರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ರಾಮನ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿದೆ. ದೇಶಾದ್ಯಂತ ರಾಮನ ಭಕ್ತರು ಬಹುಕಾಲದ ಬೇಡಿಕೆ ಬಹುಬೇಗ ಈಡೇರಲೆಂದು ಹಣದ ನೆರವನ್ನೂ ನೀಡುತ್ತಿದ್ದಾರೆ. ಆದರೆ, ಇದೇ ವೇಳೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಾತೆಗೇ ಕಿಡಿಗೇಡಿಗಳು ಕನ್ನ ಹಾಕಿದ್ದಾರೆ. ನಕಲಿ ಚೆಕ್​ ಬಳಸಿ ಬ್ಯಾಂಕಿನಿಂದ ಹಣ ವಿತ್​ಡ್ರಾ ಮಾಡಿಕೊಳ್ಳಲಾಗಿದೆ.

ಲಕ್ನೋದ ಬ್ಯಾಂಕ್​ನಲ್ಲಿ ಇರುವ ಟ್ರಸ್ಟ್ ಖಾತೆಗಳಿಂದ ಹಣವನ್ನು ಲಪಟಾಯಿಸಲಾಗಿದೆ. ಎರಡು ಖಾತೆಗಳಿಂದ ಈ ಹಣವನ್ನು ವಿತ್​ಡ್ರಾ ಮಾಡಲಾಗಿದೆ. ಎರಡು ಬಾರಿ ವಿತ್​ಡ್ರಾ ಮಾಡಿದ ಬಳಿಕ ಮೂರನೇ ಬಾರಿಗೆ ಪ್ರಯತ್ನಿಸಿದಾಗ, ಬ್ಯಾಂಕ್​ನವರಿಗೆ ಸಂದೇಹ ಬಂದಿದೆ. ಅವರು ಕೂಡಲೇ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಮಾಹಿತಿ ನೀಡಿದ್ದಾರೆ. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಸೆಪ್ಟೆಂಬರ್ 1ರಂದು ಹಣ ವಿತ್​ಡ್ರಾ ಮಾಡಿಕೊಳ್ಳಲಾಗಿತ್ತು. ನಂತರ 3ನೇ ತಾರೀಕಿನಂದು ಮತ್ತೆ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲಾಗಿದೆ. ಮೂರನೇ ಬಾರಿಗೆ ಲಕ್ನೋದ ಬ್ಯಾಂಕ್ ಆಫ್ ಬರೋಡಾದಲ್ಲಿ 9.86 ಲಕ್ಷ ಚೆಕ್ ವಿತ್ ಡ್ರಾ ಮಾಡುವ ಯತ್ನದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಸಂಶಯ ಬಂದಿದ್ದು ಚಂಪತ್ ರಾಯ್ ಕರೆ ಮಾಡಿದ್ದಾರೆ. 

ಸದ್ಯ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಈಗಾಗ್ಲೇ ನಕಲಿ ಚೆಕ್​ ಬಳಸಿ ಸುಮಾರು 6 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿರುವ ಬಗ್ಗೆ ಹೇಳಲಾಗುತ್ತಿದೆ. ಅತ್ತ ರಾಮನ ಮಂದಿರದ ಕೆಲಸ ಆಗುತ್ತಿದ್ದರೆ ಇತ್ತ ರಾಮನ ಹೆಸರಿ‌ನ ಹಣವನ್ನು ಕಿಡಿಗೇಡಿಗಳು ನುಂಗಲು ಯತ್ನಿಸಿದ್ದಾರೆ.

Join our WhatsApp group for latest news updates