ಹರ್ಭಜನ್ ಸಿಂಗ್‌ ಗೆ 4 ಕೋಟಿ ವಂಚನೆ ; ಠಾಣೆ ಮೆಟ್ಟಿಲೇರಿದ ಸ್ಪಿನ್ ಮಾಂತ್ರಿಕ !

10-09-20 01:28 pm       Headline Karnataka News Network   ಕ್ರೈಂ

ಬಿಸಿನೆಸ್ ಮ್ಯಾನ್ ಒಬ್ಬ ತನಗೆ ನಾಲ್ಕು ಕೋಟಿ ರೂಪಾಯಿ ವಂಚನೆ ಎಸಗಿದ್ದಾಗಿ ಹರ್ಭಜನ್ ಸಿಂಗ್‌ ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.

ಚೆನ್ನೈ, ಸೆಪ್ಟೆಂಬರ್ 10: ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಿಸಿನೆಸ್ ಮ್ಯಾನ್ ಒಬ್ಬ ತನಗೆ ನಾಲ್ಕು ಕೋಟಿ ರೂಪಾಯಿ ವಂಚನೆ ಎಸಗಿದ್ದಾಗಿ ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. 

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಹರ್ಭಜನ್ ಸಿಂಗ್ ಸದ್ಯಕ್ಕೆ ಚೆನ್ನೈನಲ್ಲಿ ತಂಡದ ಪರವಾಗಿ ಅಭ್ಯಾಸ ನಿರತರಾಗಿದ್ದಾರೆ. 2015ರಲ್ಲಿ ಚೆನ್ನೈನ ಜುಹು ಬೀಚ್ ನಲ್ಲಿ ವಿಹಾರ ಸಂದರ್ಭ ಪರಿಚಯ ಆಗಿದ್ದ ಜಿ. ಮಹೇಶ್ ಎನ್ನುವಾತ ಅನಂತರ ಗೆಳೆತನ ಸಂಪಾದಿಸಿದ್ದ. ಆಬಳಿಕ ಸಾಲದ ರೂಪದಲ್ಲಿ ಹಣ ಪಡೆದಿದ್ದು ಮತ್ತೆ ಹಿಂತಿರುಗಿಸಿಲ್ಲ. ಮಹೇಶ್ ನನ್ನು ಆಬಳಿಕ ಸಂಪರ್ಕಿಸಲು ಯತ್ನಿಸಿದಾಗ ತಪ್ಪಿಸುತ್ತಿದ್ದಾನೆ. ಕಳೆದ ಆಗಸ್ಟ್ 18ರಂದು 25 ಲಕ್ಷ ರೂಪಾಯಿ ಚೆಕ್ ನೀಡಿದ್ದ. ಆದರೆ ಚೆಕ್ ಖಾತೆಯಲ್ಲಿ ಹಣ ಇಲ್ಲದೆ ಬೌನ್ಸ್ ಆಗಿದೆ ಎಂದು ದೂರಿನಲ್ಲಿ ಹರ್ಭಜನ್ ತಿಳಿಸಿದ್ದಾರೆ. 


ಇತ್ತೀಚೆಗೆ ಚೆನ್ನೈ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದ ಹರ್ಭಜನ್ ಸಿಂಗ್, ಮಹೇಶ್ ಮತ್ತು ಕೆಲವರ ವಿರುದ್ಧ ದೂರು ನೀಡಿದ್ದರು. ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದು ಮಹೇಶ್ ನನ್ನು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದರು. ಸಮನ್ಸ್ ಹಾಜರಾಗುವ ಬದಲು ಮಹೇಶ್ ಮದ್ರಾಸ್ ಹೈಕೋರ್ಟ್ ಕದ ತಟ್ಟಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. 

ಮಹೇಶ್ ಕೋರ್ಟಿಗೆ ಸಲ್ಲಿಕೆ ಮಾಡಿದ ಅಫಿಡವಿಟಲ್ಲಿ ಹರ್ಭಜನ್ ಸಿಂಗ್ ಬಳಿ ಹಣ ಸಾಲ ತೆಗೆದುಕೊಳ್ಳುವ ಸಂದರ್ಭ ತಾಲಂಬೂರಿನಲ್ಲಿರುವ ಜಾಗವನ್ನು ಅಡವು ಇಟ್ಟಿದ್ದೆ. ಆನಂತರ ಪವರ್ ಆಫ್ ಅಟಾರ್ನಿ ಡೀಡ್ ಕೂಡ ಹರ್ಭಜನ್ ಪರವಾಗಿ ನೀಡಿದ್ದೇನೆ. ತಿರುಪೂರ್ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಬಗ್ಗೆ ರಿಜಿಸ್ಟರ್ ಮಾಡಿಕೊಂಡಿರುವ ದಾಖಲೆ ಹೊಂದಿದ್ದೇನೆ. ಅಲ್ಲದೆ ಉಳಿದ ಹಣವನ್ನೂ ಪೂರ್ತಿಯಾಗಿ ಹಿಂತಿರುಗಿಸಿದ್ದೇನೆ ಎಂದು ಮಹೇಶ್ ತಿಳಿಸಿದ್ದಾನೆ.

Join our WhatsApp group for latest news updates