ದೃಶ್ಯಂ ಫಿಲಂ ರೀತಿ ಕೊಲೆ ಮುಚ್ಚಿ ಹಾಕಲು ಪ್ಲಾನ್ ; ಅಕ್ರಮ ಸಂಬಂಧಕ್ಕೆ ಜೋತುಬಿದ್ದ ತಂದೆಯನ್ನು ಕೊಲೆಗೈದು ಸುಟ್ಟುಬಿಟ್ಟಿದ್ದ ತಾಯಿ, ಮಕ್ಕಳು!

02-10-21 04:01 pm       Headline Karnataka News Network   ಕ್ರೈಂ

ತೀರ್ಥಹಳ್ಳಿಯಲ್ಲಿ ಪತ್ನಿ ಮಕ್ಕಳೇ ಸೇರಿಕೊಂಡು ತಂದೆಯನ್ನು ಕೊಲೆಗೈದು ಪ್ರಕರಣ ಮುಚ್ಚಿ ಹಾಕಲು ಕಸರತ್ತು ನಡೆಸಿದ ಪ್ರಕರಣ ಬಯಲಾಗಿದೆ. 

ಶಿವಮೊಗ್ಗ, ಅ.2 : ದೃಶ್ಯಂ ಸಿನಿಮಾದಲ್ಲಿ ಒಂದು ಕೊಲೆಯನ್ನು ಮುಚ್ಚಿ ಹಾಕಲು ಸಾಕ್ಷ್ಯ ನಾಶ ಮಾಡಿ ಕೊನೆಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಚಿತ್ರಣ ಇತ್ತು. ಕ್ಷಣ ಕ್ಷಣಕ್ಕೂ ರೋಮಾಂಚನ ಸೃಷ್ಟಿಸಿದ್ದ ಚಿತ್ರದಲ್ಲಿ ರವಿಚಂದ್ರನ್ ಮತ್ತು ಪತ್ನಿ , ಮಕ್ಕಳು ಕೊಲೆ ಕೇಸ್ ಮುಚ್ಚಿ ಹಾಕಲು ಏನೆಲ್ಲಾ ಕಸರತ್ತು ನಡೆಸುತ್ತಾರೆ. ಅಂತಹದ್ದೇ ಮಾದರಿಯಲ್ಲಿ ಪತ್ನಿ ಮಕ್ಕಳೇ ಸೇರಿಕೊಂಡು ತಂದೆಯನ್ನು ಕೊಲೆಗೈದು ಪ್ರಕರಣ ಮುಚ್ಚಿ ಹಾಕಲು ಕಸರತ್ತು ನಡೆಸಿದ ಪ್ರಕರಣ ಬಯಲಾಗಿದೆ. 

ಸೆಪ್ಟೆಂಬರ್ 28ರಂದು ತೀರ್ಥಹಳ್ಳಿ ತಾಲೂಕಿನ ಮಿಟ್ಲುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸ್ವಿಫ್ಟ್ ಕಾರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೊತೆಗೆ, ಅದೇ ಕಾರಿನಲ್ಲಿ ಓರ್ವ ವ್ಯಕ್ತಿಯ ಶವವೂ ಅರ್ಧ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸಿದಾಗ ಮೊದಲು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿತ್ತು. ಕಾರಿನ ನಂಬರ್ ಪ್ಲೇಟ್‌ನಿಂದ ತನಿಖೆ ಪ್ರಾರಂಭಿಸಿ, ಕಾರು ಯಾರದ್ದು ಎಂದು ಪತ್ತೆ ಮಾಡಿದ್ದರು. ಈ ವೇಳೆ, ಕಾರು ಸಾಗರ ತಾಲೂಕು ಆಚಾಪುರದ ವಿನೋದ್(45) ಅವರದ್ದು ಎಂದು ತಿಳಿದು ಬಂದು ತನಿಖೆ ಆರಂಭಿಸಿದ್ದರು. ಹರ್ಬಲ್ ಲೈಫ್ ವ್ಯವಹಾರ ನಡೆಸುತ್ತಿದ್ದ ವಿನೋದ್ ಸಾವು ಹೇಗಾಯ್ತು ಅನ್ನೋದ್ರ ಬಗ್ಗೆ ಬೆನ್ನತ್ತಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿ ಹೊರಬಿದ್ದಿದೆ.

ವಿನೋದ್ ಮನೆಯಲ್ಲಿ ಪತ್ನಿ ಮತ್ತು ಬೆಳೆದು ನಿಂತ ಮಕ್ಕಳಿದ್ದರೂ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಎಂಬಲ್ಲಿನ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಈತನ ಮನೆಯಲ್ಲಿ ಪದೇ ಪದೇ ಗಲಾಟೆಗೆ ಕಾರಣವಾಗಿತ್ತು. ಹಣವನ್ನು ಮನೆಗೆ ನೀಡದೆ ಆತ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡುತ್ತಿದ್ದ ಎನ್ನುವ ದೂರು ಪತ್ನಿ, ಮಕ್ಕಳದಾಗಿತ್ತು. ಅಲ್ಲದೆ, ಇತ್ತೀಚೆಗೆ ತನ್ನ ಒಂದು ಎಕರೆ ಭೂಮಿಯನ್ನು ಮಾರಿ ಅದರಲ್ಲಿ ಸಿಕ್ಕಿರುವ 51 ಲಕ್ಷ ರೂ. ಸಾಲವನ್ನು ತೀರಿಸಿ, ಉಳಿದ ಹಣವನ್ನು ಮಹಿಳೆಗೆ ನೀಡಲು ವಿನೋದ್ ಯೋಜನೆ ರೂಪಿಸಿದ್ದ.

ಅಲ್ಲದೇ, ಈ ನಡುವೆ ತನ್ನ ಇನ್ನೊಂದು ಎಕರೆ ಭೂಮಿಯನ್ನು ಮಾರುವುದಕ್ಕೂ ತಯಾರಿಯನ್ನೂ ನಡೆಸಿದ್ದ. ಇದು ಕುಟುಂಬಸ್ಥರಿಗೆ ತಿಳಿದು ಪತ್ನಿ ಮಕ್ಕಳೇ ಸೇರಿಕೊಂಡು ಕೊಲೆಗೆ ಪ್ಲಾನ್ ಮಾಡಿದ್ದರು. ವಿನೋದ್‌ ಹೆಂಡತಿ ಬಿನು (42), ಹಿರಿಯ ಮಗ ವಿವೇಕ್ (21), ಕಿರಿಯ ಮಗ ವಿಷ್ಣು (19) ಸೇರಿ ತಮ್ಮ ಜಾಗವನ್ನೆಲ್ಲ ಖಾಲಿ ಮಾಡುತ್ತಾನೆಂದು ತಂದೆಯನ್ನೇ ಕೊಲೆ ನಡೆಸಲು ಮುಂದಾಗಿದ್ದು ಇದಕ್ಕೆ ಬಿನು ಅಕ್ಕನ ಮಗ ಅಶೋಕ್ (23) ಹಾಗೂ ವಿನೋದ್ ಸಹೋದರ ಸಂಜಯ್ (36) ಸಂಚು ಹೂಡಿದ್ದರು. 

ಈ ಬಗ್ಗೆ ಸೆಪ್ಟೆಂಬರ್ 25ರಂದು ಐವರೂ ಕುಳಿತು ಹತ್ಯೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನಂತರ 26 ರಂದು ಆನಂದಪುರದ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ. ಅಂದೇ ವಿನೋದ್ ಕುತ್ತಿಗೆಗೆ ಕಬ್ಬಿಣದ ತಂತಿಯಿಂದ ಬಿಗಿದು, ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಆನಂತರ ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್ ಮಾಡಿ ಮನೆಯಲ್ಲಿಯೇ ಬಿಟ್ಟು ಕಾರಿನಲ್ಲಿ ವಿನೋದ್ ಶವವನ್ನು ತೆಗೆದುಕೊಂಡು ಯಡೇಹಳ್ಳಿ, ರಿಪ್ಪನ್‌ಪೇಟೆ, ಹುಂಚದ ಕಟ್ಟೆ ಮಾರ್ಗವಾಗಿ ಹುಣಸೇಕೊಪ್ಪಕ್ಕೆ ರಾತ್ರಿ 11 ಗಂಟೆಗೆ ತಲುಪಿದ್ದಾರೆ.

ವಿನೋದ್ ಶವವನ್ನು ಕಾರಿನ ಡ್ರೈವಿಂಗ್ ಸೀಟ್‌ನಲ್ಲಿರಿಸಿ, ಹೊರಗಿನಿಂದ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಯಾವುದೇ ಗುರುತು ಸಿಗಬಾರದು ಎಂದು ಕಾರಿನ ನಂಬರ್ ಪ್ಲೇಟ್ ಕಿತ್ತು ಬಿಸಾಡಿದ್ದಾರೆ. ತಮ್ಮ ಗುರುತು ಸಿಗಬಾರದೆಂದು ಫಿನಾಯಿಲ್‌ನಿಂದ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಆ ಬಳಿಕ ಅಲ್ಲಿಂದ ಸೀದಾ ಮನೆಗೆ ತೆರಳಿದ್ದರು. ಮನೆಯ ಹಿಂಭಾಗ ತಮ್ಮ ಬಟ್ಟೆ, ಚಪ್ಪಲಿಯನ್ನೂ ಸುಟ್ಟು ಹಾಕಿದ್ದು ಯಾವುದೇ ಸಾಕ್ಷ್ಯ ಸಿಗದಂತೆ ನೋಡಿಕೊಂಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅನುಮಾನಗೊಂಡು ಕುಟಂಬದ ಐವರು ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಐವರಿಂದಲೂ ಸಹ ಬೇರೆ ಬೇರೆ ಉತ್ತರ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ತಮ್ಮ ವಿಚಾರಣೆಯನ್ನು ತೀವ್ರಗೊಳಿಸಿದಾಗ ಆರೋಪಿಗಳು ತಮ್ಮ ಕೃತ್ಯವನ್ನು ಬಾಯಿಬಿಟ್ಟಿದ್ದಾರೆ. ಸದ್ಯ ಎಲ್ಲರನ್ನೂ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಹಾಗೂ ಸಿಪಿಐ ಸಂತೋಷ್ ನೇತೃತ್ವದ ತಂಡ ಕೇವಲ ಮೂರು ದಿನದಲ್ಲಿ ಈ ಪ್ರಕರಣಕ್ಕೆ ಅಂತ್ಯ ಹಾಡಿದೆ.

Shivamogga police have arrested five of a family, including a wife and her sons in connection with the murder of a man from Sagar, which until now seemed more like a suicide. 
The body of Vinod (45), a native of Aachapura village, Sagar taluk, was found burnt inside a car inthe  forest region at Hunasekoppa village attached to Mitlugodu gram panchayat limits on September 28.