ಅನುಯಾಯಿಗಳಿಗೇ ಲೈಂಗಿಕ ಶೋಷಣೆ ; ಪತ್ರ ಹೊರಬಿಟ್ಟಿದ್ದನೆಂದು ಆಶ್ರಮದ ಮ್ಯಾನೇಜರನ್ನು ಕೊಲ್ಲಿಸಿದ್ದ ಸ್ವಯಂಘೋಷಿತ ಬಾಬಾನಿಗೆ ಮತ್ತೆ ಜೀವಾವಧಿ

18-10-21 08:47 pm       Headline Karnataka News Network   ಕ್ರೈಂ

ದೇರಾ ಸಚ್ಚಾ ಸೌದಾ ಸಂಘಟನೆಯ ಮುಖ್ಯಸ್ಥ, ಸ್ವಯಂಘೋಷಿತ ಬಾಬಾ ಗುರ್ಮೀತ್ ಸಿಂಗ್ ರಾಮ್ ರಹೀಮ್ ಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನವದೆಹಲಿ, ಅ.18: ದೇರಾ ಸಚ್ಚಾ ಸೌದಾ ಸಂಘಟನೆಯ ಮುಖ್ಯಸ್ಥ, ಸ್ವಯಂಘೋಷಿತ ಬಾಬಾ ಗುರ್ಮೀತ್ ಸಿಂಗ್ ರಾಮ್ ರಹೀಮ್ ಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2002ರಲ್ಲಿ ತನ್ನ ಆಶ್ರಮದ ಮ್ಯಾನೇಜರ್ ನನ್ನು ಕೊಲ್ಲಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟ್ ಗುರ್ಮೀತ್ ಸೇರಿ ನಾಲ್ಕು ಮಂದಿಯನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು. ಇಂದು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿ ಕೋರ್ಟ್ ತೀರ್ಪು ನೀಡಿದೆ.

ಶಿಕ್ಷೆಯ ಜೊತೆಗೆ ಗುರ್ಮಿತ್ ಬಾಬಾನಿಗೆ 31 ಲಕ್ಷ ರೂಪಾಯಿ ದಂಡ ಮತ್ತು ಇತರ ನಾಲ್ವರಿಗೆ ತಲಾ 50 ಸಾವಿರ ರೂ. ದಂಡವನ್ನೂ ವಿಧಿಸಿದೆ. ಗುರ್ಮಿತ್ ಆಶ್ರಮದಲ್ಲಿ ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್ ಎಂಬಾತನನ್ನು 2002ರಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಆಶ್ರಮದಲ್ಲಿ ಬಾಬಾನೇ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾನೆಂದು ಅನಾಮಧೇಯ ಪತ್ರವೊಂದು ವೈರಲ್ ಆಗಿತ್ತು. ಅದನ್ನು ರಂಜಿತ್ ಸಿಂಗ್ ಮಾಡಿದ್ದಾನೆಂದು ಗುರ್ಮಿತ್ ಆತನನ್ನು ಕೊಲ್ಲಿಸಿದ್ದ.

ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಗುರ್ಮಿತ್ ರಾಮ್ ರಹೀಂ ಸ್ವತಃ ತನ್ನ ಮ್ಯಾನೇಜರನ್ನು ಕೊಲ್ಲಿಸಿದ್ದ. ತನ್ನ ವಿರುದ್ಧ ಬರೆಯಲಾಗಿದ್ದ ಅನಾಮಧೇಯ ಪತ್ರವನ್ನು ಹೊರಬಿಟ್ಟು ಸುದ್ದಿಯಾಗಲು ಕಾರಣವಾಗಿದ್ದ ಅನ್ನುವ ನೆಲೆಯಲ್ಲಿ ಆತನೇ ಸಹಚರರ ಮೂಲಕ ಕೊಲ್ಲಿಸಿದ್ದ ಎಂದು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಬೇರೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಗುರ್ಮೀತ್ ಬಾಬಾನ ಜೊತೆಗೆ ಆತನ ಸಹಚರರು ಕೂಡ ಈಗ ಜೈಲು ಪಾಲಾಗಿದ್ದಾರೆ.

ಗುರ್ಮೀತ್ ಜೊತೆಗೆ ಜಸ್ಬೀರ್ ಸಿಂಗ್, ಸಾಬ್ದಿಲ್, ಅವತಾರ್ ಸಿಂಗ್, ಕಿಶನ್ ಲಾಲ್ ಮತ್ತು ಈಗಾಗಲೇ ಮೃತಪಟ್ಟಿರುವ ಇಂದರ್ ಸೇನ್ ತಪ್ಪಿತಸ್ಥರು ಎಂದು ಅ.8ರಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಆರು ಮಂದಿಯ ವಿರುದ್ಧ ಕೊಲೆ (302) ಮತ್ತು 120 ಬಿ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾಗಿದ್ದ ಜಸ್ಬೀರ್ ಮತ್ತು ಸಾಬ್ದಿಲ್ ಸೇರಿಕೊಂಡು, ರಂಜಿತ್ ಸಿಂಗ್ ನನ್ನು ಹರ್ಯಾಣದ ಕುರುಕ್ಷೇತ್ರ ಎಂಬಲ್ಲಿಗೆ ಕರೆದೊಯ್ದು ಗುಂಡು ಹಾರಿಸಿ ಕೊಲೆ ನಡೆಸಿದ್ದು ಸಾಬೀತಾಗಿದ್ದರಿಂದ ಅವರ ವಿರುದ್ಧ ಆರ್ಮ್ಸ್ ಏಕ್ಟ್ ಪ್ರಕಾರ ಕೇಸು ದಾಖಲಾಗಿತ್ತು.

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಶಿಕ್ಷೆ

ಗುರ್ಮೀತ್ ರಾಮ್ ರಹೀಂ ತನ್ನ ಆಶ್ರಮದಲ್ಲಿ ಇಬ್ಬರು ಅನುಯಾಯಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣದಲ್ಲಿ ಸದ್ಯ 20 ವರ್ಷಗಳ ಜೈಲು ವಾಸದಲ್ಲಿದ್ದಾನೆ. 2017ರಲ್ಲಿ ಪಂಚ್ ಕುಲಾದ ಸಿಬಿಐ ವಿಶೇಷ ಕೋರ್ಟ್ ಈ ಪ್ರಕರಣದಲ್ಲಿ ತೀರ್ಪು ನೀಡಿತ್ತು. 2019ರಲ್ಲಿ ಪತ್ರಕರ್ತ ರಾಮಚಂದ್ರ ಛತ್ರಪತಿ ಕೊಲೆ ಪ್ರಕರಣದಲ್ಲಿಯೂ ಗುರ್ಮೀತ್ ಮತ್ತು ಇತರ ಮೂವರನ್ನು ಕೋರ್ಟ್ ಅಪರಾಧಿಗಳೆಂದು ಘೋಷಣೆ ಮಾಡಿತ್ತು. 2002ರಲ್ಲಿ ಗುರ್ಮೀತ್ ಬಾಬಾ ವಿರುದ್ಧ ಬಂದಿದ್ದ ಅನಾಮಧೇಯ ಪತ್ರಗಳನ್ನು ಆಧರಿಸಿ, ಬಾಬಾ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ್ದ ಎಂದು ರಾಮಚಂದ್ರ ಛತ್ರಪತಿ ವರದಿ ಬರೆದಿದ್ದರು. 

A special Central Bureau of Investigation (CBI) court at Panchkula on Monday sentenced former head of Dera Sacha Sauda Gurmeet Ram Rahim Singh to life imprisonment for the murder of one Ranjeet Singh