ಗಲಭೆ ಸೃಷ್ಟಿಸಿ ಕಾರ್ಪೊರೇಟರ್ ಸೇರಿ ಕೆಲವರನ್ನು ಮುಗಿಸಲು ಘಾತುಕ ಸಂಚು ; ಹೊರಬಿತ್ತು ಲೋಖಂಡ್ ವಾಲಾ ಖದೀಮರ ಪ್ಲಾನ್ ! ರೌಡಿ ಪಿಂಕಿ ನವಾಜ್ ಸೇರಿ ಐವರ ಅರೆಸ್ಟ್

22-10-21 07:57 pm       Giridhar Shetty, Mangaluru   ಕ್ರೈಂ

ಜಿಲ್ಲೆಯಲ್ಲಿ ಮತ್ತೆ ಕೋಮು ಗಲಭೆ ಸೃಷ್ಟಿಸಿ, ಸುರತ್ಕಲ್ ಭಾಗದ ಕಾರ್ಪೊರೇಟರ್ ಸೇರಿ ಸಂಘ ಪರಿವಾರದ ಕೆಲವರನ್ನು ಮುಗಿಸಲು ಸಂಚು ಹೂಡಿದ್ದ ಘಾತುಕ ಕೃತ್ಯವನ್ನು ಮಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ.

ಮಂಗಳೂರು, ಅ.22: ಜಿಲ್ಲೆಯಲ್ಲಿ ಮತ್ತೆ ಕೋಮು ಗಲಭೆ ಸೃಷ್ಟಿಸಿ, ಸುರತ್ಕಲ್ ಭಾಗದ ಕಾರ್ಪೊರೇಟರ್ ಸೇರಿ ಸಂಘ ಪರಿವಾರದ ಕೆಲವರನ್ನು ಮುಗಿಸಲು ಸಂಚು ಹೂಡಿದ್ದ ಘಾತುಕ ಕೃತ್ಯವನ್ನು ಮಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ. ನಾಲ್ಕು ವರ್ಷಗಳ ಹಿಂದಿನ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪಿಂಕಿ ನವಾಜ್ ಮತ್ತು ಆತನ ಸ್ನೇಹಿತರು ಕೋಮುಗಲಭೆಗೆ ಭಾರೀ ಸಂಚು ಹೂಡಿದ್ದರು ಅನ್ನೋದು ಬಯಲಾಗಿದೆ.  

ದೀಪಕ್ ರಾವ್ ಹೆಸರಲ್ಲಿ ಇತ್ತೀಚೆಗೆ ಕಾಟಿಪಳ್ಳದಲ್ಲಿ ಬಸ್ ನಿಲ್ದಾಣವನ್ನು ಸ್ಥಾಪಿಸಲಾಗಿತ್ತು. ಅದನ್ನು ಅಲ್ಲಿನ ಶಾಸಕ ಭರತ್ ಶೆಟ್ಟಿ ಅಧಿಕೃತವಾಗಿ ಉದ್ಘಾಟಿಸಿ, ಬಲಿಯಾದ ಹಿಂದು ಕಾರ್ಯಕರ್ತ ದೀಪಕ್ ಹೆಸರನ್ನು ಸದಾ ಸ್ಮರಿಸುವುದಕ್ಕಾಗಿ ಇದೇ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದಿದ್ದರು. ಆದರೆ, ದೀಪಕ್ ರಾವ್ ಹೆಸರಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದು ವಿರೋಧಿ ಪಾಳಯಕ್ಕೆ ಸಹಿಸಲು ಆಗಿರಲಿಲ್ಲ. ಇದೇ ವಿಚಾರದ ಬಗ್ಗೆ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಜ್ ಸೇರಿ ಕ್ರಿಮಿನಲ್ ಹಿನ್ನೆಲೆಯ ಕೆಲವಾರು ಖದೀಮರು ಸೇರಿಕೊಂಡು ಚರ್ಚೆ ನಡೆಸಿದ್ದಾರೆ.

ಇದಕ್ಕಾಗಿ ಲೋಖಂಡ್ ವಾಲಾ ಎನ್ನುವ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ರಚಿಸಿದ್ದು, ಅದರಲ್ಲಿ ಕ್ರಿಮಿನಲ್ ಹಿನ್ನೆಲೆಯಿದ್ದ ಒಂದು ಕೋಮಿನ ಹಲವಾರು ಸದಸ್ಯರನ್ನು ಸೇರಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಸುವುದು, ಇದಕ್ಕಾಗಿ ಮತ್ತೊಮ್ಮೆ ಕೋಮುಗಲಭೆ ಸೃಷ್ಟಿಸುವುದು ಮತ್ತು ಆ ಸಂದರ್ಭದಲ್ಲಿ ತಮ್ಮ ಹಿಟ್ ಲಿಸ್ಟ್ ನಲ್ಲಿರುವ ಕೆಲವರನ್ನು ಮುಗಿಸಲು ಪ್ಲಾನ್ ಹಾಕುವುದು ಇತ್ಯಾದಿ ಚರ್ಚೆಯಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ, ಇವರ ಒಳಗೆ ನಡೆಸಿದ್ದ ವಾಯ್ಸ್ ಮೆಸೇಜ್ ಹೊರಬಂದು ಜಾಲತಾಣದಲ್ಲಿ ವೈರಲ್ ಆಗಿತ್ತು.

ಆಡಿಯೋ ಮೆಸೇಜ್ ಬೆನ್ನತ್ತಿದ ಸುರತ್ಕಲ್ ಪೊಲೀಸರು ಪಿಂಕಿ ನವಾಜ್ ಸೇರಿ ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಘಾತಕ ಕೃತ್ಯದ ಸಂಚು ಬಯಲಿಗೆ ಬಂದಿದೆ. ಆರೋಪಿಗಳು ಜೋಕಟ್ಟೆ, ಕಾಟಿಪಳ್ಳ ಮತ್ತು ಚೊಕ್ಕಬೆಟ್ಟು ಪ್ರದೇಶದ ನಿವಾಸಿಗಳಾಗಿದ್ದು, ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್ ರಾವ್ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಸಿದ ಬಗ್ಗೆ ಮತ್ತು ಗಲಭೆಗೆ ಸಂಚು ಹೂಡಿ ಕೆಲವರನ್ನು ಕೊಲ್ಲಲು ಪ್ಲಾನ್ ಹಾಕಿದ್ದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ರೌಡಿ ಪಿಂಕಿ ನವಾಜ್ ಖತರ್ನಾಕ್ ಸಂಚು

2017ರಲ್ಲಿ ದೀಪಕ್ ರಾವ್ ಎಂಬ ಕಾರ್ಯಕರ್ತನನ್ನು ಹಾಡಹಗಲೇ ಕೊಲೆಗೈದು ಕಾರಿನಲ್ಲಿ ಪರಾರಿಯಾಗಿದ್ದ ವೇಳೆ ಪೊಲೀಸರು ಬೆನ್ನಟ್ಟಿ ಕಿನ್ನಿಗೋಳಿಯ ಬಳಿ ಅಡ್ಡಹಾಕಿ, ಶೂಟೌಟ್ ಮಾಡಿದ್ದರು. ಆ ಸಂದರ್ಭದಲ್ಲಿ ಪಿಂಕಿ ನವಾಜ್ ಕಾಲಿಗೂ ಗುಂಡು ಬಿದ್ದಿತ್ತು. ಆನಂತರ, ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟು ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯೂ ಆಗಿದ್ದ. ಕಳೆದ ಜನವರಿಯಲ್ಲಿ ಇದೇ ಪಿಂಕಿ ನವಾಜ್ ಮೇಲೆ ಆತನ ಸ್ನೇಹಿತರದ್ದೇ ಮತ್ತೊಂದು ತಂಡ ತಲವಾರು ದಾಳಿ ನಡೆಸಿತ್ತು. ಒಬ್ಬನ ಪತ್ನಿಯ ಮೇಲೆ ಇನ್ನೊಬ್ಬ ಕಣ್ಣು ಹಾಕಿದ್ದ ಎನ್ನುವ ವಿಚಾರದಲ್ಲಿ ವೈಷಮ್ಯ ಉಂಟಾಗಿ ಒಂದೇ ಕೋಮಿನ ಎರಡು ತಂಡಗಳು ಹೊಡೆದಾಡಿ, ಪಿಂಕಿ ನವಾಜ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಅದರಲ್ಲಿ ಸ್ವಲ್ಪದರಲ್ಲಿ ಜೀವ ಉಳಿಸಿಕೊಂಡು ಬಂದಿದ್ದ ನವಾಜ್ ಆನಂತರ ಮನೆಯಲ್ಲೇ ಇದ್ದುಬಿಟ್ಟಿದ್ದ.

ಪ್ರಾಬಲ್ಯ ತೋರಿಸಲು ಗ್ಯಾಂಗ್ ಸಕ್ರಿಯ ಮಾಡ್ತಿದ್ದ

ಆದರೆ, ಈ ನಡುವೆ ಪಿಂಕಿ ನವಾಜ್ ಕತೆ ಮುಗಿದು ಹೋಯ್ತು. ಕೈಕಾಲಿಗೆ ಪೆಟ್ಟು ಬಿದ್ದುದರಿಂದ ಇನ್ನೇನು ನಡೆಯೋದಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇಂಥ ಸಂದರ್ಭದಲ್ಲಿಯೇ ದೀಪಕ್ ರಾವ್ ಹೆಸರಲ್ಲಿ ಬಸ್ ನಿಲ್ದಾಣವೂ ಸ್ಥಾಪನೆಯಾಗಿದ್ದು ಇವರ ಕಣ್ಣು ಕುಕ್ಕುವಂತೆ ಮಾಡಿತ್ತು. ಇದಕ್ಕಾಗಿಯೇ ಮತ್ತೆ ರಿವೇಂಜ್ ತೋರಿಸುವುದು ಮತ್ತು ತಾನಿನ್ನೂ ಪ್ರಬಲನಾಗಿದ್ದೀನಿ ಎಂದು ತೋರಿಸಿಕೊಳ್ಳಲು ಎಲ್ಲ ಖದೀಮರನ್ನು ಒಂದೆಡೆ ಸೇರಿಸಿಕೊಂಡು ಮತ್ತೆ ಗ್ಯಾಂಗನ್ನು ಸಕ್ರಿಯವಾಗಿಸಲು ಪಿಂಕಿ ನವಾಜ್ ತಯಾರಾಗಿದ್ದ. ಕೋಮು ಗಲಭೆ, ಇನ್ನಿತರ ಯಾವುದೇ ಅಹಿತಕರ ಘಟನೆಗಳಾದಲ್ಲಿ ಸಹಾಯಕ್ಕೆ ತಮ್ಮದೇ ಗ್ಯಾಂಗನ್ನು ಸಂಪರ್ಕಿಸುವಂತೆ ಏಕ್ಟಿವ್ ಇರಬೇಕೆಂದು ಮಾತನಾಡಿಕೊಂಡಿದ್ದರು. ವೈಷಮ್ಯದ ಪ್ರಕರಣಗಳಾದಲ್ಲಿ ಒಂದು ಕಡೆಯಿಂದ ದುಡ್ಡು ಪಡೆದು, ಇಲ್ಲದಿದ್ದರೆ ವಸೂಲಿ ಮಾಡಿ ಕೃತ್ಯ ಎಸಗಲು ತಂಡ ಸಕ್ರಿಯ ಆಗಿರಬೇಕು ಎನ್ನುವುದಕ್ಕಾಗಿ ಯೋಜನೆ ಹಾಕಿದ್ದರು. ಆದರೆ, ಈ ಕುರಿತು ಕ್ರಿಮಿನಲ್ ಸ್ನೇಹಿತರ ನಡುವೆ ನಡೆದಿದ್ದ ವಾಯ್ಸ್ ಮೆಸೇಜ್, ಚಾಟಿಂಗ್ ಹೊರಬಂದು ಈಗ ಅವರೇ ಕಂಬಿ ಎಣಿಸುವಂತಾಗಿದೆ.

ಏನಿದು ಲೋಖಂಡ್ ವಾಲಾ ಕತೆ

ಶೂಟೌಟ್ ಎಟ್ ಲೋಖಂಡ್ ವಾಲಾ ಎನ್ನುವುದು 2007ರಲ್ಲಿ ರಿಲೀಸ್ ಆಗಿದ್ದ ಬಾಲಿವುಡ್ ಫಿಲ್ಮ್. 1991ರಲ್ಲಿ ಮುಂಬೈನ ಲೋಖಂಡ್ ವಾಲಾ ಎಂಬ ಗಲ್ಲಿ ಮಾರ್ಕೆಟ್ ನಲ್ಲಿ ನಡೆದಿದ್ದ ರೌಡಿಗಳ ಕಾಳಗ ಮತ್ತು ಪೊಲೀಸ್ ಶೂಟೌಟ್ ಕತೆಯ ರಿಯಲ್ ಸ್ಟೋರಿ. ಅದೇ ಕತೆಯನ್ನು ಆಧರಿಸಿ ಗ್ಯಾಂಗ್ ಸ್ಟರ್ ಗಳ ನಡುವಿನ ಕಾಳಗದ ಕ್ರೈಮ್, ಥ್ರಿಲ್ಲರ್ ಚಿತ್ರ ಮಾಡಲಾಗಿತ್ತು. ಮಹಿಂದ್ರಾ ಧೋಲಸ್ ಎನ್ನುವ ಮುಂಬೈ ಗ್ಯಾಂಗ್ ಸ್ಟರ್ ಪಾತ್ರವನ್ನು ವಿವೇಕ್ ಓಬೆರಾಯ್ ಮಾಡಿದ್ದು, ಆತ ಹೇಗೆ ಗ್ಯಾಂಗ್ ಕಟ್ಟಿದ್ದ ಮತ್ತು ಪೊಲೀಸರು, ಪ್ರಭಾವಿಗಳ ವಿರುದ್ಧವೇ ಸಂಚು ಹೂಡಿ ರೌಡಿಸಂ ಮಾಡ್ತಿದ್ದ ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ಹಾಗಾಗಿ, ಕೆಲವು ರೌಡಿಗಳ ಪಾಲಿಗೆ ಲೋಖಂಡ್ ವಾಲಾ ಚಿತ್ರದ ಕತೆ, ಅಲ್ಲಿನ ಮಾಯಾ ಗ್ಯಾಂಗಿನ ಓಬೆರಾಯ್ ತಮಗೆ ಮಾಡೆಲ್ ಅನ್ನುವಷ್ಟರ ಮಟ್ಟಿಗೆ ಅಚ್ಚೊತ್ತಿದೆ.  

Mangalore Pinky Nawaz including Five arrested for conspiring to kill Corporator and Witness in Deepak Roa Murder case. The Conspiracy was planned on a WhatsApp group called after a Movie name Lokhandwala. And the Conspiracy was out when an audio clip from the same group got leaked. Deepak Rao was hacked to death on January 3, 2018 after he was held back by a group of four individuals in a car. The incident took place at Katipalla near Surathkal. Local police caught hold of the miscreants immediately after the incident, following a filmy car chase.