ನೀರವ್ ಮೋದಿ, ಚೋಕ್ಸಿ ಹಗರಣಕ್ಕೂ ದೊಡ್ಡ ಸ್ಕ್ಯಾಮ್ ಬಯಲಿಗೆ ; BIKE BOT ಹೆಸರಲ್ಲಿ ಬರೋಬ್ಬರಿ 15 ಸಾವಿರ ಕೋಟಿ ದೋಖಾ!! ಉತ್ತರ ಪ್ರದೇಶದಲ್ಲಿ ಮುಚ್ಚಿ ಹೋಗಿದ್ದ ಹಗರಣಕ್ಕೆ ಮರುಜೀವ  

01-11-21 09:18 pm       Headline Karnataka News Desk   ಕ್ರೈಂ

ಬೈಕ್ ರೆಂಟ್ ಹೆಸರಲ್ಲಿ ಲಕ್ಷಾಂತರ ಮಂದಿಯಿಂದ ಹೂಡಿಕೆ ಮಾಡಿಸಿ, ಭಾರೀ ಪ್ರಮಾಣದ ಹಗರಣ ನಡೆಸಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ನವದೆಹಲಿ, ನ.1: ಬೈಕ್ ರೆಂಟ್ ಹೆಸರಲ್ಲಿ ಲಕ್ಷಾಂತರ ಮಂದಿಯಿಂದ ಹೂಡಿಕೆ ಮಾಡಿಸಿ, ಭಾರೀ ಪ್ರಮಾಣದ ಹಗರಣ ನಡೆಸಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ‘BIKE BOT’ ಹೆಸರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ದೇಶಾದ್ಯಂತ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, 15 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿ ದೋಖಾ ಮಾಡಿರುವ ಬಗ್ಗೆ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.  

ದೆಹಲಿ ಬಳಿಯ ನೋಯ್ಡಾ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದ ಗರ್ವಿತ್ ಇನ್ನೋವೇಟಿವ್ ಪ್ರಮೋಟರ್ಸ್ ಲಿಮಿಟೆಡ್ (GIPL) ಎಂಬ ಕಂಪನಿಯ ಹೆಸರಲ್ಲಿ ಭಾರೀ ದೊಡ್ಡ ಮೋಸದ ಹಗರಣ ಬಯಲಾಗಿದೆ. ಕಂಪನಿಯ ಮುಖ್ಯ ಆಡಳಿತ ನಿರ್ದೇಶಕ ಎನ್ನಲಾಗಿರುವ ಸಂಜಯ್ ಭಾಟಿಯಾ ಮತ್ತು ಇತರ 14 ಮಂದಿಯ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿದ್ದಾರೆ.

ದೇಶದಲ್ಲಿ ಬೆಳಕಿಗೆ ಬಂದಿರುವ ಅತಿದೊಡ್ಡ ಮೋಸದ ಹಗರಣ ಇದೆಂದು ಹೇಳಲಾಗುತ್ತಿದೆ. ಈ ಹಿಂದೆ ವಜ್ರದ ವಹಿವಾಟು ಹೆಸರಲ್ಲಿ 12 ಸಾವಿರ ಕೋಟಿ ರೂಪಾಯಿ ಮೋಸ ಎಸಗಿದ್ದಾರೆಂದು ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ವಿರುದ್ಧ ಆರೋಪ ಕೇಳಿಬಂದಿತ್ತು. ಪಂಜಾಬ್ ನ್ಯಾಶನಲ್ ಬ್ಯಾಂಕ್ ಒಂದಕ್ಕೇ ಏಳು ಸಾವಿರ ಕೋಟಿ ರೂಪಾಯಿ ಹಿಡಿಸಿ, ಇವರಿಬ್ಬರೂ ವಿದೇಶಕ್ಕೆ ಪರಾರಿಯಾಗಿದ್ದರು. ಇದೀಗ ಸಂಜಯ್ ಭಾಟಿಯಾ ಅದಕ್ಕಿಂತಲೂ ಹೆಚ್ಚು 15 ಸಾವಿರ ಕೋಟಿ ರೂಪಾಯಿ ಮೋಸ ಎಸಗಿದ್ದಾನೆಂದು ಸಿಬಿಐ ಅಧಿಕಾರಿಗಳು ತಮ್ಮ ಎಫ್ಐಆರ್ ನಲ್ಲಿಯೇ ನಮೂದಿಸಿದ್ದಾರೆ.

ಬೈಕ್ ಬೋಟ್ ಹೆಸರಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆ ಕೊಡುವ ನೆಪದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ 2016-17ರಲ್ಲಿ ಈ ಕಂಪನಿ ಆರಂಭಿಸಲಾಗಿತ್ತು. 50ಕ್ಕೂ ಹೆಚ್ಚು ನಗರಗಳಲ್ಲಿ ಕಚೇರಿಯನ್ನು ಆರಂಭಿಸಿ, ಹೂಡಿಕೆ ಆಕರ್ಷಿಸುವ ಸಲುವಾಗಿ ಜಾಹೀರಾತು ನೀಡಲಾಗಿತ್ತು. ಹೂಡಿಕೆದಾರರು ಒಂದು, ಮೂರು, ಐದು ಅಥವಾ ಏಳು ಬೈಕ್ ಗಳ ಹೆಸರಲ್ಲಿ ಹಣದ ಹೂಡಿಕೆ ಮಾಡಬೇಕಿತ್ತು. ಬೈನರಿ ಪ್ರಕಾರ ಹೂಡಿಕೆ ಮಾಡಿದರೆ, ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಆಕರ್ಷಕ ಬಡ್ಡಿ ಅಲ್ಲದೆ, ಬೋನಸ್ ನೀಡುವುದಾಗಿ ಹೇಳಲಾಗಿತ್ತು. ಸಾರ್ವಜನಿಕರು ಒಮ್ಮೆಲೇ ಇಲ್ಲದಿದ್ದರೆ, ತಿಂಗಳ ಕಂತಿನ ರೀತಿಯಲ್ಲೂ ಹೂಡಿಕೆ ಮಾಡಲು ಅವಕಾಶ ಇತ್ತು. ಆದರೆ, ಈ ರೀತಿಯ ಹೂಡಿಕೆಗೆ ಚೈನ್ ಲಿಂಕ್ ರೀತಿ ಎರಡು ಕಡೆಯಿಂದ ತಲಾ ಇಬ್ಬರು ಹೂಡಿಕೆದಾರರನ್ನೂ ಸೇರಿಸಬೇಕಿತ್ತು. ಹೀಗೆ ಮಾಡಿದರೆ ರಿಟರ್ನ್ಸ್ ಹೆಚ್ಚು ಎಂದು ನಂಬಿಸಲಾಗಿತ್ತು.

2017ರಲ್ಲಿ ಪತ್ರಿಕೆಗಳಲ್ಲಿ ಬರುತ್ತಿದ್ದ ಜಾಹೀರಾತು ನೋಡಿ ಭಾರೀ ಸಂಖ್ಯೆಯಲ್ಲಿ ಜನರು ಆಕರ್ಷಣೆಗೊಂಡು ಹಣದ ಹೂಡಿಕೆ ಮಾಡಿದ್ದರು. ಉತ್ತರ ಭಾರತದ ಹೆಚ್ಚಿನ ನಗರಗಳಲ್ಲಿ ಕಂಪನಿಯ ಹೂಡಿಕೆಗೆ ಕಚೇರಿ ತೆರೆಯಲಾಗಿತ್ತು. 2018ರಲ್ಲಿ ಪೆಟ್ರೋಲ್ ಬೈಕ್ ಗಳಿಗೆ ಬೆಲೆ ಮತ್ತು ರಿಜಿಸ್ಟ್ರೇಶನ್ ವೆಚ್ಚ ಹೆಚ್ಚಿದಾಗ, ಕಂಪನಿಯಿಂದ ಇ-ಬೈಕ್ ಎಂಬ ಹೆಸರಲ್ಲಿ ಹೊಸ ಯೋಜನೆ ನೀಡಲಾಗಿತ್ತು. ಇ-ಬೈಕ್ ಹೆಸರಲ್ಲಿ ಹೂಡಿಕೆ ಮಾಡಿದರೆ, ಇನ್ನಷ್ಟು ರಿಟರ್ನ್ಸ್ ಸಿಗಲಿದೆ ಎಂದು ಆಮಿಷ ನೀಡಲಾಗಿತ್ತು. ಪತ್ರಿಕೆ, ಸೋಶಿಯಲ್ ಮೀಡಿಯಾಗಳಲ್ಲಿ BIKE BOT – The Bike Taxi Powered By GIPL ಎಂಬ ಹೆಸರಲ್ಲಿ ಜಾಹೀರಾತು ಕೊಟ್ಟು ಇದರ ಲಾಭ ಪಡೆಯಲು ಆದಷ್ಟು ಬೇಗ ಹೂಡಿಕೆ ಮಾಡುವಂತೆ ನಂಬಿಸುತ್ತಿದ್ದರು. ಇದನ್ನು ನಂಬಿ ಎರಡು ಲಕ್ಷಕ್ಕೂ ಹೆಚ್ಚು ಜನ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾಗಿ ಸಿಬಿಐ ಎಫ್ಐಆರ್ ನಲ್ಲಿ ಹೇಳಿದೆ.

ಈ ನಡುವೆ, ನೋಯ್ಡಾದಲ್ಲಿಯೇ ಕಂಪನಿಯ ಮೋಸದ ಬಗ್ಗೆ ಕೆಲವು ವಂಚನೆಗೊಳಗಾದವರು ಪೊಲೀಸ್ ದೂರು ನೀಡಿದ್ದರು. ಆದರೆ, ನೋಯ್ಡಾ ಜಿಲ್ಲಾಡಳಿತ ಆಗಲೀ, ಪೊಲೀಸರಾಗಲೀ ಈ ಬಗ್ಗೆ ಕ್ರಮ ಜರುಗಿಸಲಿಲ್ಲ. ಬದಲಿಗೆ, ಪೊಲೀಸ್ ಅಧಿಕಾರಿಗಳು, ಕ್ರೈಂ ಬ್ರಾಂಚ್ ಅಧಿಕಾರಿಗಳು ದೂರುದಾರರಿಗೇ ಒತ್ತಡ ಹೇರಿ, ದೂರು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಆನಂತರ, ಕಂಪನಿಯ ಹಣದ ವಹಿವಾಟಿನಲ್ಲಿ ಅಕ್ರಮ ಕಂಡುಬಂದಿದ್ದ ಕಾರಣ ಇಡಿ ಅಧಿಕಾರಿಗಳು ಸಂಜಯ್ ಭಾಟಿಯಾ ವಿರುದ್ಧ ತನಿಖೆ ಕೈಗೊಂಡಿದ್ದರು. ಕಂಪನಿ ಹೆಸರಲ್ಲಿ ಭಾರೀ ಮೋಸ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗೌತಮ್ ಬುದ್ಧ್ ನಗರ, ಗಾಜಿಯಾಬಾದ್, ಬುಲಂದ್ ಶಹರ್, ಖಾನ್ ಪುರ್, ಇಂದೋರ್ ಹೀಗೆ 22 ಕಡೆಗಳಲ್ಲಿದ್ದ ಸ್ಥಿರಾಸ್ತಿಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಲ್ಲದೆ, 22 ಬ್ಯಾಂಕ್ ಖಾತೆಗಳನ್ನೂ ಸೀಜ್ ಮಾಡಿತ್ತು. ಈ ಬಗ್ಗೆ ಇಡಿ ಅಧಿಕಾರಿಗಳು 2019ರಲ್ಲಿ ಗೌತಮ್ ಬುದ್ಧ್ ನಗರದ ದಾದ್ರಿ ಪೊಲೀಸ್ ಠಾಣೆಯಲ್ಲಿ ಸಂಜಯ್ ಭಾಟಿಯಾ ಮತ್ತು ಆತನ ಕಂಪನಿ ವಿರುದ್ಧ ದೂರು ದಾಖಲಿಸಿದ್ದರು. ಇಡಿ ಅಧಿಕಾರಿಗಳು ಸ್ಥಿರಾಸ್ತಿ ಮತ್ತು ಬ್ಯಾಂಕ್ ಖಾತೆ ಸೇರಿ ಒಟ್ಟು 216 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.

ಆದರೆ, ದೇಶದಲ್ಲೇ ಅತಿದೊಡ್ಡದು ಎನ್ನಲಾಗಿರುವ ಈ ಹಗರಣವೇ ನಡೆದಿಲ್ಲ ಎನ್ನುವ ರೀತಿ ಬಿಂಬಸಲಾಗಿತ್ತು. ಸಿಬಿಐ ಅಥವಾ ಸ್ವತಂತ್ರ ತನಿಖಾ ಆಯೋಗಕ್ಕೆ ವಹಿಸದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಉತ್ತರ ಪ್ರದೇಶದ ರಾಜ್ಯ ತನಿಖಾ ತಂಡಗಳು ಕೂಡ ಸರಿಯಾದ ತನಿಖೆ ನಡೆಸಿರಲಿಲ್ಲ. ಲಕ್ಷಾಂತರ ಮಂದಿಗೆ ದೋಖಾ ನಡೆದಿದ್ದರೂ, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಸೇರಿ ಇಡೀ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು. ಎರಡು ವರ್ಷಗಳ ನಂತರ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ಏಜನ್ಸಿ ಸಿಬಿಐಗೆ ವಹಿಸಲಾಗಿತ್ತು.

ಇದೀಗ ಉತ್ತರ ಪ್ರದೇಶದ ಚುನಾವಣೆ ಹೊತ್ತಲ್ಲಿ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದು, ಸಂಜಯ್ ಭಾಟಿಯಾ ಮತ್ತು ಇತರರು ಸೇರಿ ಅಂದಾಜು 15 ಸಾವಿರ ಕೋಟಿ ರೂಪಾಯಿ ಅಕ್ರಮ ಎಸಗಿದ್ದಾರೆಂದು ಹೇಳಿದ್ದಾರೆ. ದೇಶದ ವಿವಿಧೆಡೆಗಳಲ್ಲಿ ಜನರಿಂದ ಹಣ ಸಂಗ್ರಹಿಸಿ ಮೋಸದ ಉದ್ದೇಶ ಇರಿಸಿಕೊಂಡು ಹಗರಣ ನಡೆಸಿದ್ದಾರೆ ಎಂದು ಎಫ್ಐಆರ್ ನಲ್ಲಿ ನಮೂದಿಸಿದ್ದಾರೆ. ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಇದೇ ರೀತಿ ಅಕ್ರಮ ಎಸಗಿ ವಿದೇಶಕ್ಕೆ ಹಾರಿದ್ದರು. ಈತನೂ ವಿದೇಶಕ್ಕೆ ಹಾರುವ ಮುನ್ನ ಪಾಪಿ ಸಂಜಯ್ ಭಾಟಿಯಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಬೇಕಾಗಿದೆ. 

Karnataka Assembly Bypolls Results Live: Congress leading from Hangal assembly constituency after second round. BJP- 8897, Congress- 9025, JDS - 75 after second round of counting. Counting of votes for the October 30 bypolls in Sindgi and Hangal assembly constituencies in Karnataka are underway to decide the fate of 19 candidates who are in the fray from the two constituencies, including six from Sindgi and 13 from Hangal. Two candidates from Sindgi are women