ಕ್ರೆಡಿಟ್ ಕಾರ್ಡ್ ಸರೆಂಡರ್ ಮಾಡಿದ್ರೂ ಹಣ ಎಗರಿಸಿದ ಖದೀಮರು ; ಏಪ್ ಬಳಸಿ ಖಾತೆಗೆ ಕನ್ನ ಹಾಕುತ್ತಿದ್ದ ಟಿಬೆಟ್ ಮೂಲದ ಇಬ್ಬರ ಸೆರೆ !

11-11-21 03:29 pm       Mangaluru Correspondent   ಕ್ರೈಂ

ಸರೆಂಡರ್ ಮಾಡಿದ್ದ ಕ್ರೆಡಿಟ್ ಕಾರ್ಡನ್ನು ಹ್ಯಾಕ್ ಮಾಡಿ, ಅದರಿಂದ ದುಡ್ಡು ಪೀಕಿಸಿದ್ದ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನೆಲೆಸಿರುವ ಇಬ್ಬರು ಟಿಬೆಟಿಯನ್ ಬುದ್ಧ ಭಿಕ್ಕುಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ನ.11: ಸರೆಂಡರ್ ಮಾಡಿದ್ದ ಕ್ರೆಡಿಟ್ ಕಾರ್ಡನ್ನು ಹ್ಯಾಕ್ ಮಾಡಿ, ಅದರಿಂದ ದುಡ್ಡು ಪೀಕಿಸಿದ್ದ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನೆಲೆಸಿರುವ ಇಬ್ಬರು ಟಿಬೆಟಿಯನ್ ಬುದ್ಧ ಭಿಕ್ಕುಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ತಾವರ ನಿವಾಸಿ ಸಿ.ಡಿ. ಅಲೆಗ್ಸಾಂಡರ್ ಎಂಬವರು ಕಳೆದ ಸೆ.9 ರಂದು ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಗೆ ಸರೆಂಡರ್‌ ಮಾಡಿದ್ದರೂ ಅದರಿಂದ 1.12 ಲಕ್ಷ ರೂ. ಡ್ರಾ ಆಗಿದ್ದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. 2021ರ ಮಾರ್ಚ್‌ 23 ರಂದು ಎಸ್ ಬಿಐ ಬ್ಯಾಂಕ್ ಶಾಖೆಗೆ ತೆರಳಿ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಹೆಚ್ಚಾಗಿದ್ದರಿಂದ ಅದನ್ನು ಮರಳಿ ಬ್ಯಾಂಕಿಗೆ ಕೊಟ್ಟಿದ್ದರು. ಆದರೆ ಮಾರ್ಚ್ 27 ರಂದು ಕ್ರೆಡಿಟ್ ಕಾರ್ಡ್ ಮೂಲಕ 1.12 ಲಕ್ಷ ರೂ. ಡ್ರಾ ಆಗಿತ್ತು. ಬ್ಯಾಂಕ್ ಸಿಬಂದಿ ಬಳಿ ಕೇಳಿದಾಗ, ಕ್ರೆಡಿಟ್ ಕಾರ್ಡ್ ಮೂಲಕ ಡ್ರಾ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದರು.

ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ, ಮೊಬಿವಿಕ್ ವ್ಯಾಲೆಟ್ ಏಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿತ್ತು.‌ ಅಲ್ಲದೆ, ಈ ಹಣವು ಉತ್ತರ ಕನ್ನಡ ಜಿಲ್ಲೆಯ ತಟ್ಟಿಹಳ್ಳಿಯ ಕೆನರಾ ಡಿಸಿಸಿ ಬ್ಯಾಂಕ್ ಶಾಖೆಯ ಮುಂಡಗೋಡ ನಿವಾಸಿ ಲೋಬ್ ಸ್ಯಾಂಗ್ ಸ್ಯಾಂಗಿಸ್ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದುಬಂದಿತ್ತು.

ಪ್ರಕರಣ ಸಂಬಂಧಿಸಿ ಮುಂಡಗೋಡದ ಟಿಬೆಟಿಯನ್ ಕಾಲನಿ ನಿವಾಸಿಗಳಾದ ಲೋಬ್ ಸ್ಯಾಂಗ್ ಸ್ಯಾಂಗಿಸ್ (24) ಮತ್ತು ದಕಪಾ ಪುಂಡೇ (40) ಎಂಬವರನ್ನು ಮಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ. ದಕಪಾ ಪುಂಡೆ ಮುಂಡಗೋಡದಲ್ಲಿದ್ದುಕೊಂಡೇ ಚೀನಾದ ನಿಷೇಧಿತ ಚೀನಾ ಏಪ್ ಗಳಾದ ವೀ ಚ್ಯಾಟ್ ಮತ್ತು ರೆಡ್ ಪ್ಯಾಕ್ ಇತ್ಯಾದಿ ಮೂಲಕ ಹವಾಲಾ ಜಾಲದಲ್ಲಿ ಹಣವನ್ನು ತರಿಸಿಕೊಂಡು ಸ್ಥಳೀಯ ಮನಿ ಎಕ್ಸ್ ಚೇಂಜ್ ಏಜಂಟರಲ್ಲಿ ನಗದು ಮಾಡಿಕೊಳ್ಳುತ್ತಿದ್ದರು. ಇಬ್ಬರನ್ನೂ ಟಿಬೇಟ್ ಕಾಲನಿಯಿಂದ ನ.10 ರಂದು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಗೆ ಸರೆಂಡರ್‌ ಮಾಡಿದ್ದರೂ, ಅದರ ಮಾಹಿತಿ ಆರೋಪಿಗಳಿಗೆ ರವಾನೆ ಆಗಿದ್ದು ಹೇಗೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Mangalore Cyber Crime Police arrest Two Tibetan from Mundgod arrested for transferring theft money of credit card.