ಬೆಲೆಬಾಳುವ ಗಿಫ್ಟ್ ಕಳಿಸುವ ಆಮಿಷವೊಡ್ಡಿ ಬರೋಬ್ಬರಿ 45 ಲಕ್ಷ ರೂ. ಪಂಗನಾಮ ! 

22-11-21 07:41 pm       HK News Desk   ಕ್ರೈಂ

‘ಇನ್‌ಸ್ಟಾಗ್ರಾಮ್‌' ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಗಿಫ್ಟ್ ಕಳುಹಿಸುತ್ತೇನೆಂದು ಹೇಳಿ ಮಹಿಳೆಯೊಬ್ಬರಿಂದ ಬರೋಬ್ಬರಿ 45 ಲಕ್ಷ ರೂ. ಪೀಕಿಸಿಕೊಂಡು ಪಂಗನಾಮ ಹಾಕಿದ ಘಟನೆ ನಡೆದಿದೆ.

ಬೆಂಗಳೂರು, ನ.22 :  ‘ಇನ್‌ಸ್ಟಾಗ್ರಾಮ್‌' ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಗಿಫ್ಟ್ ಕಳುಹಿಸುತ್ತೇನೆಂದು ಹೇಳಿ ಮಹಿಳೆಯೊಬ್ಬರಿಂದ ಬರೋಬ್ಬರಿ 45 ಲಕ್ಷ ರೂ. ಪೀಕಿಸಿಕೊಂಡು ಪಂಗನಾಮ ಹಾಕಿದ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. 

ವರ್ತೂರು ನಿವಾಸಿ 30 ವರ್ಷದ ಮಹಿಳೆಗೆ ಅಲೆಕ್ಸ್ ಎರಿನ್ ಎಂಬ ಹೆಸರಿನ ವ್ಯಕ್ತಿ ‘ಇನ್‌ಸ್ಟಾಗ್ರಾಮ್‌' ನಲ್ಲಿ ಪರಿಚಯವಾಗಿದ್ದ. ತಾನು ಹಡಗಿನಲ್ಲಿ ಕ್ಯಾಪ್ಟನ್ ಆಗಿದ್ದಾಗಿ ಹೇಳಿಕೊಂಡು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಇದನ್ನು ನಂಬಿದ್ದ ಮಹಿಳೆ, ಗೆಳೆತನಕ್ಕೆ ಒಪ್ಪಿ ಚಾಟಿಂಗ್ ಆರಂಭಿಸಿದ್ದರು. ಈ ನಡುವೆ ಆರೋಪಿ ತಮ್ಮ ಸ್ನೇಹದ ನೆನಪಿಗಾಗಿ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ. ಅದಕ್ಕೆ ಮಹಿಳೆ ಸಮ್ಮತಿಸಿದ್ದರು. ಅದರಂತೆ ಸೆ.30ರಂದು ಮಹಿಳೆಗೆ ಕರೆ ಮಾಡಿದ್ದ ಮತ್ತೊಬ್ಬ ವ್ಯಕ್ತಿ, ತಾನು ದಿಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮಗೆ ವಿದೇಶದಿಂದ ಬೆಲೆಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿದ್ದ. ಅದನ್ನು ಸ್ವೀಕರಿಸಲು ಕೆಲವು ಶುಲ್ಕಗಳನ್ನು ಪಾವತಿಸಬೇಕು ಎಂದು ಸೂಚಿಸಿದ್ದು ಶುಲ್ಕ ತುಂಬದಿದ್ದರೆ ಜೈಲು ಶಿಕ್ಷೆಯಾಗುವುದಾಗಿ ಮಹಿಳೆಯನ್ನು ಹೆದರಿಸಿದ್ದ. 

ಆರೋಪಿಯ ಮಾತು ನಂಬಿದ ಮಹಿಳೆ, ಆತ ಹೇಳಿದ್ದ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಹಂತ ಹಂತವಾಗಿ 45.31 ಲಕ್ಷ ರೂ. ಪಾವತಿಸಿದ್ದರು. ಆದರೆ ಹಣ ಪಡೆದ ಆರೋಪಿಗಳು ಯಾವುದೇ ಉಡುಗೊರೆ ಕಳುಹಿಸಿಲ್ಲ. ಅಲ್ಲದೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. 

ವಂಚನೆಗೊಳಗಾದ ಮಹಿಳೆ ನೀಡಿರುವ ದೂರಿನಂತೆ ಆರೋಪಿಗಳಾದ ಅಲೆಕ್ಸ್ ಎರಿಕ್, ವೀರ್ ಪಾಲ್, ಬೆನ್ ಹಾಗೂ ಮಥುರಾ ಅನಿವರ್ ಎಂಬವರ ವಿರುದ್ಧ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Bangalore Woman Cheated of 45 lakhs on Instagram