ಬ್ರೇಕಿಂಗ್ ನ್ಯೂಸ್
03-12-21 10:11 pm HK Desk news ಕ್ರೈಂ
ಮಂಗಳೂರು, ಡಿ.3: ಅವರದ್ದು ಅತ್ಯಂತ ಬಡ ಕುಟುಂಬ. ಮಂಗಳೂರು ಹೊರವಲಯದ ಬಜ್ಪೆಯಲ್ಲಿ ಹೆದ್ದಾರಿ ಬದಿಯಲ್ಲೇ ಬಾಡಿಗೆ ಮನೆಯಲ್ಲಿದ್ದು ಜೀವನ ನಡೆಸುತ್ತಾರೆ. ದಿವಾಕರ್ ಆಚಾರಿ ಮನೆಯಲ್ಲೇ ಚಿನ್ನದ ಕೆಲಸ ಮಾಡಿಕೊಂಡಿದ್ದಾರೆ. ಚಿನ್ನದ ಕುಸುರಿ ಕೆಲಸ ಮಾಡುತ್ತಾ ಇಬ್ಬರು ಮಕ್ಕಳನ್ನು ಕಷ್ಟಪಟ್ಟು ಓದಿಸಿದ್ದರು. ದೊಡ್ಡ ಮಗ ಶರಣ್ ಸುಂಕದಕಟ್ಟೆ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾ ಓದಿದ್ದ. ಡಿಪ್ಲೋಮಾ ಮುಗಿಸಿ ಆರು ತಿಂಗಳ ಕಾಲ ಮನೆಯಲ್ಲೇ ಇದ್ದ ಶರಣ್ ಗೆ ಕೊನೆಗೆ ಬೆಂಗಳೂರಿನ ಟೊಯೊಟಾ ಕಂಪನಿಯಲ್ಲಿ ಉದ್ಯೋಗ ಲಭಿಸಿತ್ತು. ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಶರಣ್, ದುರದೃಷ್ಟವಶಾತ್ 2019ರ ಜ.2ರಂದು ಅಪಘಾತಕ್ಕೀಡಾಗಿ ತೀರಿಕೊಂಡಿದ್ದ.
ಮನೆಮಂದಿಗೆ ಆಸರೆಯಾಗಿದ್ದುಕೊಂಡು ಬೆಳೆದು ನಿಂತಿದ್ದ ಮಗ ಅರಳುತ್ತಿರುವಾಗಲೇ ಇಲ್ಲವಾಗಿದ್ದ. ವೃದ್ಧ ತಂದೆ ಮತ್ತು ತಾಯಿ ದಿಕ್ಕಿಲ್ಲದಂತಾಗಿದ್ದರು. ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಐಸಿಯುನಲ್ಲಿದ್ದ ಶರಣ್ ಮೆದುಳು ನಿಷ್ಕ್ರಿಯಗೊಂಡಿತ್ತು. ಇನ್ನೇನು ಮಗ ಬದುಕಲ್ಲ, ಅಂಗಾಂಗ ದಾನ ಮಾಡುವುದಿದ್ದರೆ ಹೇಳಿ ಎಂದಿದ್ದ ವೈದ್ಯರಿಗೆ, ನಮ್ಮ ಮಗ ಹೋಗಿದ್ದಾನೆ. ಅವನ ದೇಹದ ಅಂಗಗಳು ಬೇರೆ ಯಾರಿಗಾದ್ರೂ ಆಗುವುದಿದ್ದರೆ ಬಳಸಿಕೊಳ್ಳಿ ಎಂದಿದ್ದರು ಹೆತ್ತವರು. ಮಗನ ಶವವನ್ನು ಬಳಿಕ ಆಸ್ಪತ್ರೆಯ ಸಿಬಂದಿಯೇ ಆಂಬುಲೆನ್ಸ್ ಮಾಡಿಸಿ ಫ್ರೀಯಾಗೇ ಬಜ್ಪೆಗೆ ತಂದುಕೊಟ್ಟಿದ್ದರು. ಟೊಯೊಟಾ ಕಂಪನಿಯ ಪ್ರತಿನಿಧಿಗಳು ಕೂಡ ಶರಣ್ ಶವದ ಜೊತೆ ಮನೆಗೆ ಬಂದು ಸಾಂತ್ವನ ಹೇಳಿದ್ದರು. ಮಗನ ಶವ ಕಂಡು ರೋದಿಸಿದ ಹೆತ್ತವರಿಗೆ ಕಂಪನಿ ಕಡೆಯಿಂದ ಏನೇನು ಸವಲತ್ತು ಸಿಗುತ್ತೆ, ಅದನ್ನು ಪೂರ್ತಿ ತೆಗೆದುಕೊಡುವುದಾಗಿ ಹೇಳಿದ್ದರು. ಅದರಂತೆ, ಕಂಪನಿ ಎಚ್ ಆರ್ ಸಿಬಂದಿ ನಡೆದುಕೊಂಡಿದ್ದು, ತಂದೆಯ ಬ್ಯಾಂಕ್ ಖಾತೆ ಪಡೆದು ಕೆಲವೇ ತಿಂಗಳಲ್ಲಿ ನೇರವಾಗಿಯೇ 35 ಲಕ್ಷ ರೂ. ಪರಿಹಾರದ ಹಣವನ್ನು ಸಂದಾಯ ಮಾಡಿದ್ದರು.
ಇದನ್ನು ತಿಳಿದ ದಿವಾಕರ ಆಚಾರಿಯವರ ದೂರದ ಸಂಬಂಧಿಯೂ ಆಗಿರುವ ಮಂಗಳೂರಿನಲ್ಲಿ ವೃತ್ತಿ ನಡೆಸುವ ಧೂರ್ತ ವಕೀಲ ಪದ್ಮನಾಭ ಕುಮಾರ್ ಎಂಬಾತ ಇನ್ಶೂರೆನ್ಸ್ ನೆಪದಲ್ಲಿ ಹತ್ತಿರವಾಗಿದ್ದ. ಮಗ ಬೈಕ್ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಬೈಕ್ ಇನ್ಶೂರೆನ್ಸ್ ತೆಗೆಸಿಕೊಡುತ್ತೇನೆಂದು ಹೇಳಿ, ಬಡ ದಂಪತಿಯ ಮನೆಗೆ ಬಂದು ಅವರನ್ನು ಒಪ್ಪಿಸಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದ. ಬೈಕ್ ನಲ್ಲಿ ಅಪಘಾತವಾದಲ್ಲಿ 15 ಲಕ್ಷ ರೂ. ಇನ್ಶೂರೆನ್ಸ್ ಪೂರ್ತಿ ಪಾವತಿಯಾಗುವಂತೆ ಕೋರ್ಟಿನಲ್ಲಿ ಕೇಸು ನಡೆಸುತ್ತೇನೆಂದು ಹೇಳಿ ಆಚಾರಿ ದಂಪತಿಯನ್ನು ನಂಬಿಸಿದ್ದಲ್ಲದೆ, ಅವರಿಗೆ ಸಂಬಂಧಪಟ್ಟ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಎಲ್ಲವನ್ನೂ ತೆಗೆದುಕೊಂಡಿದ್ದ. ಇದಲ್ಲದೆ, ಖಾಲಿ ಕಾಗದ ಪತ್ರಗಳಿಗೆ ಸಹಿಯನ್ನೂ ಹಾಕಿಸಿಕೊಂಡಿದ್ದ. ಕೇಳಿದ್ದಕ್ಕೆ ಅದು ಬೇಕಾಗುತ್ತದೆ, ಇನ್ಶೂರೆನ್ಸ್ ಕಂಪನಿಗೆ ಅರ್ಜಿಗಳನ್ನು ಬರೆಯಲು ಮತ್ತೆ ನಿಮ್ಮ ಬಳಿ ಬರಲಾಗುವುದಿಲ್ಲ ಎಂದಿದ್ದ ವಕೀಲ.
ಕೋರ್ಟ್ ಆವರಣದಲ್ಲೇ ಬ್ಯಾಂಕ್ ಖಾತೆ
ಇದೇ ಕಾಗದ ಪತ್ರಗಳನ್ನು ಬಳಸಿಕೊಂಡು ವಕೀಲ ಪದ್ಮನಾಭ ಕುಮಾರ್, ಶರಣ್ ತಾಯಿ ಶಕುಂತಳಾ ಹೆಸರಿನಲ್ಲಿ ಮಂಗಳೂರಿನ ಕೋರ್ಟ್ ಆವರಣದಲ್ಲಿರುವ ಪೋಸ್ಟಲ್ ಬ್ಯಾಂಕ್ ನಲ್ಲಿ ಹೊಸದಾಗಿ ಖಾತೆ ತೆರೆದಿದ್ದಾನೆ. ಶರಣ್ ತಂದೆ ಮತ್ತು ತಾಯಿಗೆ ಬಜ್ಪೆಯಲ್ಲಿ ವಿಜಯಾ ಬ್ಯಾಂಕ್ ಬಿಟ್ಟರೆ ಬೇರಾವುದೇ ಕಡೆ ಬ್ಯಾಂಕ್ ಖಾತೆಗಳೇ ಇರಲಿಲ್ಲ. ಕಂಪನಿ ಕಡೆಯಿಂದಲೂ ಪರಿಹಾರದ ಹಣ ಅದೇ ಖಾತೆಗೆ ತಲುಪಿತ್ತು. ಆದರೆ, ಬಡ ಮತ್ತು ಮುಗ್ಧ ದಂಪತಿಯನ್ನು ಯಾಮಾರಿಸಲೆಂದೇ ವಕೀಲ ಕೋರ್ಟ್ ಕಚೇರಿ ಬಳಿಯಲ್ಲಿ ಪೋಸ್ಟಲ್ ಬ್ಯಾಂಕಿನಲ್ಲಿ ಶಕುಂತಳಾ ಹೆಸರಲ್ಲಿ ಖಾತೆ ತೆರೆದಿದ್ದ.
15 ಲಕ್ಷದ ಚೆಕ್ ತನ್ನದೇ ಹೆಸರಿಗೆ ಹಾಕಿಸಿದ್ದ !
ಕಳೆದ ಬಾರಿ ಜುಲೈ ತಿಂಗಳಲ್ಲಿ ಲೋಕ ಅದಾಲತ್ ನಡೆದು ಗ್ರಾಹಕರ ನ್ಯಾಯಾಲಯ, ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಗೆ 15 ಲಕ್ಷ ರೂ. ಪಾವತಿಗೆ ಆದೇಶ ಮಾಡಿತ್ತು. ಅದರಂತೆ, ಇನ್ಶೂರೆನ್ಸ್ ಕಂಪನಿ ಕಡೆಯಿಂದ 15 ಲಕ್ಷ ರೂ. ಚೆಕ್ ನೀಡಲಾಗಿತ್ತು. ಆದರೆ, ವಂಚಕ ವಕೀಲ ಚೆಕ್ಕಿನಲ್ಲಿ ಶಕುಂತಳಾ ಹೆಸರು ಬರೆದಿದ್ದೇ ತಪ್ಪಾಗಿದೆ ಎಂದು ಹೇಳಿ ಚೆಕ್ಕನ್ನು ತನ್ನಲ್ಲೇ ಉಳಿಸಿಕೊಂಡಿದ್ದ. ಆ ಚೆಕ್ಕನ್ನು ವಕೀಲ ಕಳೆದ ಸೆಪ್ಪಂಬರ್ ತಿಂಗಳ ಆರಂಭದಲ್ಲಿ ತಾನು ರಹಸ್ಯವಾಗಿ ಓಪನ್ ಮಾಡಿದ್ದ ಪೋಸ್ಟಲ್ ಬ್ಯಾಂಕಿನ ಖಾತೆಗೆ ಹಾಕಿದ್ದಾನೆ. ಕಳ್ಳ ವಕೀಲ, ಯಾರಿಗೂ ತಿಳಿಯದೆಂದು ಶಕುಂತಳಾ ಹೆಸರಲ್ಲಿ ಓಪನ್ ಮಾಡಿದ್ದ ಬ್ಯಾಂಕ್ ಖಾತೆಯಿಂದ ನೇರವಾಗಿ ಶಕುಂತಳಾ ಮೊಬೈಲಿಗೆ ಮೆಸೇಜ್ ಹೋಗಿತ್ತು. ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರಿಂದ 15 ಲಕ್ಷ ರೂ. ಕ್ರೆಡಿಟ್ ಆಗಿದ್ದ ಬಗ್ಗೆ ಸೆ.15ರಂದು ಮೆಸೇಜ್ ಬಂದಿತ್ತು.
ವಕೀಲನ ಸಿಕ್ಕಿಸಿ ಹಾಕಿದ್ದೇ ಆಧಾರ್ ಲಿಂಕ್
ಆದರೆ, ಇದ್ಯಾವುದೂ ತಿಳಿದಿರದ ಆ ಬಡ ದಂಪತಿ, 15 ಲಕ್ಷ ಬಂದಿದೆ ಅನ್ನುವ ಮೆಸೇಜ್ ಓದಿದರೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಯಾವುದೋ ನಕಲಿ ಮೆಸೇಜ್ ಆಗಿರಬೇಕು, ನಾವು ವಿಜಯಾ ಬ್ಯಾಂಕ್ ಬಿಟ್ಟರೆ ಬೇರಾವುದೇ ಖಾತೆಯನ್ನೇ ಹೊಂದಿಲ್ಲ ಎಂದು ಸುಮ್ಮನಿದ್ದರು. ಆದರೆ, ಸೆ.20ರಂದು 5 ಲಕ್ಷ ರೂ. ಡೆಬಿಟ್ ಆಗಿದ್ದ ಬಗ್ಗೆ ಮತ್ತೊಂದು ಮೆಸೇಜ್ ಬಂದಿದ್ದು ದಂಪತಿಗೆ ಗಾಬರಿಯಾಗಿತ್ತು. ಮರುದಿನವೇ ಮತ್ತೊಮ್ಮೆ ಹತ್ತು ಲಕ್ಷ ರೂ. ಕಡಿತ ಆಗಿರುವ ಬಗ್ಗೆ ಮೆಸೇಜ್ ಬಂದಿತ್ತು. ಈ ಬಗ್ಗೆ ವಕೀಲ ಪದ್ಮನಾಭ ಕುಮಾರ್ ನಲ್ಲಿ ಕೇಳಿದರೆ, ಏನೋ ನನಗೆ ಗೊತ್ತಿಲ್ಲ. ನಿಮ್ಮ ಚೆಕ್ ನಾನು ಹೇಗೆ ಕ್ರೆಡಿಟ್ ಮಾಡೋಕೆ ಸಾಧ್ಯ ಎಂದು ಮರು ಪ್ರಶ್ನೆ ಹಾಕಿದ್ದ.
ಇನ್ಶೂರೆನ್ಸ್ ದುಡ್ಡಲ್ಲಿ ಪರ್ಸೆಂಟೇಜ್ ಪಡೀತಿದ್ದ
ಈ ಬಗ್ಗೆ ಬಡ ದಂಪತಿ ತಮ್ಮ ಬೇರೆ ಸಂಬಂಧಿಕರಲ್ಲಿ ಕೇಳಿದಾಗ, ನಿಮ್ಮದೇ ಇನ್ಶೂರೆನ್ಸ್ ದುಡ್ಡು ಆಗಿರಬೇಕು. ಪೋಸ್ಟಲ್ ಬ್ಯಾಂಕಿನಲ್ಲಿ ಚೆಕ್ ಮಾಡುವಂತೆ ಹೇಳಿದ್ದರು. ಅದರಂತೆ, ಕೋರ್ಟ್ ಕಚೇರಿ ಬಳಿಯ ಪೋಸ್ಟಲ್ ಬ್ಯಾಂಕಿನಲ್ಲಿ ಚೆಕ್ ಮಾಡಿದಾಗ, ಶಕುಂತಳಾ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿದ್ದು ಕಂಡಬಂದಿತ್ತು. ಅಲ್ಲದೆ, ಪೋಸ್ಟಲ್ ಬ್ಯಾಂಕಿನ ಅದೇ ಖಾತೆಯಿಂದ ವಕೀಲನ ಖಾತೆಗೆ 15 ಲಕ್ಷ ರೂ. ಹಣ ಪಾವತಿ ಆಗಿದ್ದನ್ನು ಬ್ಯಾಂಕಿನ ಸಿಬಂದಿ ತಿಳಿಸಿದ್ದಾರೆ. ಬ್ಯಾಂಕಿನಲ್ಲಿ ಶಕುಂತಳಾ ಹೆಸರಲ್ಲಿ ಚೆಕ್ ಬುಕ್ ಪಡೆದು ಅದಕ್ಕೆ ಪೋರ್ಜರಿ ಸಹಿ ಮಾಡಿ, ಹಣವನ್ನು ತನ್ನ ಖಾತೆಗೆ ವಕೀಲನೇ ಹಾಕಿಸಿಕೊಂಡಿದ್ದ. ಖದೀಮ ವಕೀಲನ ವಂಚನೆ ಪುರಾಣ ತಿಳಿಯುತ್ತಲೇ ದಂಪತಿ ಮತ್ತು ಅವರ ಕುಟುಂಬಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಣ ಎಲ್ಲಿದೆ ಅಂದರೆ, ನನಗೆ ಕಮಿಟ್ ಮೆಂಟ್ ಇದೆ, ನಿಮ್ಮ ಹಣದಲ್ಲಿ ನನಗೆ ಪರ್ಸೆಂಟೇಜ್ ಬರಲಿಕ್ಕಿದೆ, 35 ಲಕ್ಷದಲ್ಲಿಯೂ ಪರ್ಸೆಂಟೇಜ್ ಕೊಡಲಿಲ್ಲ. 15 ಪರ್ಸೆಂಟ್ ಹಣ ನನಗೆ ಸಿಗಬೇಕು. ಅದರಲ್ಲಿ ಪಾಲು ಕೊಟ್ಟಿಲ್ಲ ಎಂದು ಇದನ್ನು ನಾನೇ ಪಡೆದಿದ್ದೇನೆ ಎಂದು ವಾದಿಸಿದ್ದ. ವಕಾಲತ್ತು ಮಾಡಿ, ಇನ್ಶೂರೆನ್ಸ್ ಹಣ ತೆಗೆಸಿಕೊಟ್ಟಿದ್ದರೆ, ಅದಕ್ಕಾಗಿ ತನ್ನ ಫೀಸು ತೆಗೆದುಕೊಳ್ಳುವುದು ವಕೀಲನ ಕೆಲಸ. ಆದರೆ, ಈ ಕಪಟಿ ಪದ್ಮನಾಭ ಕುಮಾರ, ಬಡ ದಂಪತಿಗೆ ಮಗನ ಸಾವಿನ ನೆಪದಲ್ಲಿ ಬಂದಿದ್ದ ಹಣವನ್ನೇ ಅರ್ಧಕ್ಕೇ ಗುಳುಂ ಮಾಡಲು ಹೊರಟಿದ್ದಾನೆ. ತನ್ನ ಫೀಸಿನ ನೆಪದಲ್ಲಿ ಬಡ ದಂಪತಿಯ ಇನ್ಶೂರೆನ್ಸ್ ಹಣವನ್ನೇ ಪೂರ್ತಿಯಾಗಿ ಗುಳುಂ ಮಾಡಿದ್ದಾನೆ.
ವಕೀಲಿ ವೃತ್ತಿಗೇ ಕಳಂಕ, ದೂರು
ವಕೀಲನ ವೃತ್ತಿಗೆ ಕಳಂಕ ತಂದಿರುವ ಈತನನ್ನು ವಿರುದ್ಧ ಬಾರ್ ಕೌನ್ಸಿಲ್ ಸದಸ್ಯತ್ವದಿಂದಲೇ ವಜಾ ಮಾಡಬೇಕೆಂದು ದಿವಾಕರ ಆಚಾರ್ಯ ಮಂಗಳೂರಿನ ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗಡೆ ಅವರನ್ನೂ ಭೇಟಿಯಾಗಿದ್ದಾರೆ. ಈ ಬಗ್ಗೆ ನರಸಿಂಹ ಹೆಗಡೆ ಫೋನ್ ಮಾಡಿದರೆ, ನೀವು ಇದರ ಮಧ್ಯೆ ಬರಬೇಡಿ. ನಮ್ಮದು ಬೇರೆ ವಿಚಾರ ಎಂದು ಅವರಲ್ಲಿ ಹೊಸ ರಾಗ ಎಳೆದಿದ್ದಾನೆ. ಈ ಬಗ್ಗೆ ಕೊನೆಗೆ ಬೇಸತ್ತು ನಗರ ಪೊಲೀಸ್ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಅವರನ್ನು ಭೇಟಿಯಾಗಿ ದೂರು ಹೇಳಿಕೊಂಡಿದ್ದಾರೆ. ಅವರ ಸೂಚನೆಯಂತೆ, ಬಂದರು ಠಾಣೆಯಲ್ಲಿ ವಂಚಕ ವಕೀಲನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಬಡ ದಂಪತಿಯ ಹಣವನ್ನು ನುಂಗಿ ಹಾಕಿರುವ ವಕೀಲ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ದೊಡ್ಡ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾನೆ. ವಕೀಲನ ನರಿ ಬುದ್ಧಿಯನ್ನು ತಿಳಿದಿರುವ ನ್ಯಾಯಾಧೀಶರು, ಜಾಮೀನು ಕೊಟ್ಟಿಲ್ಲ. ತೀರ್ಪು ನೀಡದೇ ಮೂರು ಬಾರಿ ಮುಂದಕ್ಕೆ ಹಾಕಿದ್ದಾರೆ.
ಉಲ್ಟಾ ಕತೆಕಟ್ಟಿರುವ ದೊಡ್ಡ ವಕೀಲರು
ಮಂಗಳೂರಿನಲ್ಲಿ ಹೆಸರು ಮಾಡಿರುವ ದೊಡ್ಡ ವಕೀಲರು ತನಗೆ ಹಣ ಬಂದರೆ ಸಾಕು, ಬಡವರಿಗೆ ವಂಚನೆ ಆದರೇನೆಂದು ದಂಪತಿಯ ಬಗ್ಗೆಯೇ ಉಲ್ಟಾ ಕತೆಕಟ್ಟಿ ಜಾಮೀನಿಗಾಗಿ ಮೊರೆ ಇಟ್ಟಿದ್ದಾರೆ. ಸದ್ಯಕ್ಕೆ ಜಾಮೀನು ಅರ್ಜಿ ಡಿ.6ಕ್ಕೆ ಮುಂದೂಡಿಕೆಯಾಗಿದೆ. ಕಾಕತಾಳೀಯ ಅಂದ್ರೆ, ಅದೇ ವಂಚಕ ವಕೀಲ ಬಡ ದಂಪತಿಯ ಪರವಾಗಿ ಮಗನ ಅಪಘಾತ ಪ್ರಕರಣದಲ್ಲಿಯೂ ವಕಾಲತ್ತು ನಡೆಸುತ್ತಿದ್ದಾರೆ. ಆದರೆ, ಇನ್ಶೂರೆನ್ಸ್ ಹಣವನ್ನೇ ನುಂಗಿ ಹಾಕಿರುವ ವಕೀಲ ನಮಗೆ ಬೇಡವೆಂದು ದಂಪತಿ ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಇದರ ವಿಚಾರಣೆಯೂ ಡಿ.6ರಂದೇ ನಡೆಯಲಿದ್ದು, ಈ ಹಿಂದೆ ಎರಡು ಬಾರಿ ಕೋರ್ಟಿಗೆ ಹಾಜರಾಗದೆ ತಪ್ಪಿಸಿಕೊಂಡಿರುವ ಪದ್ಮನಾಭ ಕುಮಾರ್, ಡಿ.6ರಂದು ಹಾಜರಾಗದೇ ಇದ್ದರೆ ಕೇಸು ಕೈತಪ್ಪಲಿದೆ. ಕೋರ್ಟಿಗೆ ಬಂದರೆ, ಪೊಲೀಸರು ಅರೆಸ್ಟ್ ಮಾಡುವ ಭಯ. ಬರದಿದ್ದರೆ ಕೇಸು ಕೈತಪ್ಪಿ ತನಗೆ ಮೈನಸ್ ಆಗುತ್ತೆ ಎಂಬ ಭಯವೂ ಆತನಿಗೆ ಕಾಡುವಂತಾಗಿದೆ.
ಹಲವರಿಗೆ ವಂಚಿಸಿರುವ ವಂಚಕ ವಕೀಲ
ವಂಚಕ ಪದ್ಮನಾಭ ಕುಮಾರ್ ಬಂದರು ಠಾಣೆ ಅಲ್ಲದೆ, ಕಂಕನಾಡಿ ನಗರ ಠಾಣೆಯಲ್ಲೂ ಹಲವು ಕೇಸುಗಳನ್ನು ಎದುರಿಸುತ್ತಿದ್ದಾನೆ. ಇನ್ಶೂರೆನ್ಸ್ ಹೆಸರಲ್ಲಿ ಸಂಬಂಧಿಕರು ಸೇರಿದಂತೆ ಹಲವರಿಗೆ ಟೋಪಿ ಹಾಕಿ ವಂಚಿಸಿರುವ ಬಗ್ಗೆ ಮತ್ತು ದಾಖಲೆ ಪೋರ್ಜರಿ ಮಾಡಿ ಜಾಗ ನುಂಗಿ ಹಾಕಿರುವ ಬಗ್ಗೆಯೂ ಕೇಸುಗಳಿವೆ. ಇಂಥ ಪಾಪಿ ವಕೀಲರು ಜನರಿಗೆ ನ್ಯಾಯ ದೊರಕಿಸುವ ನೆಪದಲ್ಲಿ ವೃತ್ತಿ ಮುಂದುವರಿಸಬೇಕೇ ಎನ್ನುವುದನ್ನು ಬಾರ್ ಕೌನ್ಸಿಲ್ ನಿರ್ಧರಿಸಬೇಕು. ಈಗಾಗ್ಲೇ ಒಬ್ಬಾತ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟು ತಲೆಮರೆಸಿಕೊಂಡಿದ್ದಾನೆ. ಆತನ ಸಾಲಿಗೆ ಈ ಪದ್ಮನಾಭನೂ ಸೇರಿದ್ದಾನೆ. ಫೀಸಿನ ಹೆಸರಲ್ಲಿ ಬಡವರಿಗೆ ಸಿಗಬೇಕಾದ ಇನ್ಶೂರೆನ್ಸ್ ಹಣವನ್ನೇ ನುಂಗುವ ಹೇತ್ಲಂಡಿ ವಕೀಲರನ್ನು ಜನರೇ ಬಹಿಷ್ಕರಿಸಬೇಕು.
ಇದಲ್ಲದೆ, ಯಾವುದೇ ಬ್ಯಾಂಕ್ ವಹಿವಾಟು ನಡೆಸುವುದಿದ್ದರೂ ಖುದ್ದಾಗಿ ಖಾತಾದಾರರು ಬ್ಯಾಂಕಿಗೆ ಬರಬೇಕು ಎಂಬ ನಿಯಮ ಇದೆ. ಪೋಸ್ಟಲ್ ಬ್ಯಾಂಕಿನವರು ಖಾತೆದಾರರು ಬರದೇ ಇದ್ದರೂ, ಚೆಕ್ ಪಡೆದಿದ್ದು ಮತ್ತು ಬ್ಯಾಂಕ್ ಖಾತೆ ಆರಂಭಿಸಿದ್ದು ಹೇಗೆ ಅನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕಾಗಿದೆ. ವಂಚಕ ವಕೀಲನ ಕಿತಾಪತಿಯಲ್ಲಿ ಪೋಸ್ಟಲ್ ಬ್ಯಾಂಕಿನವರದ್ದೂ ಶಾಮೀಲಾತಿ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸಿದರೆ, ವಂಚನೆ ಪುರಾಣ ಹೊರಬೀಳಬಹುದು.
The family of a youth, who was killed in an accident, was to get an insurance amount of Rs 15 lac. The family was waiting for the money, but it got the message that the entire amount of Rs 15 lac had been withdrawn. The family members became suspicious after receiving the message on the mobile phone. After making enquiries, they came to know that the advocate who happens to be their relative and on whom they had enormous trust had usurped their money.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm