ದೆಹಲಿ ಗಲಭೆ ; ಜೆ ಎನ್ ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಲೀದ್ ಬಂಧನ

14-09-20 11:08 am       Headline Karnataka News Network   ಕ್ರೈಂ

ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ಸಂಚು ರೂಪಿಸಿದ ಆರೋಪದಲ್ಲಿ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಬಂಧಿಸಲಾಗಿದೆ.

ಹೊಸದಿಲ್ಲಿ, ಸೆಪ್ಟೆಂಬರ್ 14: ಕಳೆದ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ಸಂಚು ರೂಪಿಸಿದ ಆರೋಪದಲ್ಲಿ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಬಂಧಿಸಲಾಗಿದೆ.

ಕನಿಷ್ಠ 53 ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಪಡೆಯ ವಿಶೇಷ ಘಟಕ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿತ್ತು. ಖಾಲಿದ್ ಅವರನ್ನು ರವಿವಾರ ವಿಚಾರಣೆ ಸಲುವಾಗಿ ಕರೆಸಿಕೊಳ್ಳಲಾಗಿತ್ತು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೂ ಮುನ್ನ ಎರಡು ತಿಂಗಳಲ್ಲಿ ಎರಡು ಬಾರಿ ಖಾಲಿದ್ ಅವರನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. "ರವಿವಾರ ರಾತ್ರಿ ಖಾಲಿದ್ ಅವರನ್ನು ಬಂಧಿಸಲಾಗಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಘಟಕ ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಮುನ್ನ ಖಾಲಿದ್ ಅವರು ಮಾಜಿ ಎಎಪಿ ಕೌನ್ಸಿಲರ್ ತಾಹೀರ್ ಹುಸೈನ್ ಮತ್ತು ಹೋರಾಟಗಾರರಾದ ಖಾಲಿದ್ ಸೈಫಿ ಜತೆ ಸೇರಿ ದೆಹಲಿ ಗಲಭೆಯ ಸಂಚು ರೂಪಿಸಿದ್ದರು. ನಾಲ್ಕು ಆರೋಪಪಟ್ಟಿಗಳಲ್ಲಿ ವಿವರಿಸಿದಂತೆ ಎಎಪಿ ಮಾಜಿ ಕೌನ್ಸಿಲರ್ ಹುಸೈನ್‍ ಹಾಗೂ ಸೈಫಿಯವರನ್ನು ಖಾಲಿದ್ ಜನವರಿ 8ರಂದು ಶಹೀನ್‍ ಭಾಗ್ ಧರಣಿ ಸ್ಥಳದಲ್ಲಿ ಭೇಟಿ ಮಾಡಿ ದಂಗೆಯ ಯೋಜನೆ ರೂಪಿಸಿದ್ದರು. ಆದರೆ ಖಾಲಿದ್ ಪತ್ರಿಕಾ ಹೇಳಿಕೆ ನೀಡಿ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.

ತಾಹೀರ್ ಹುಸೈನ್, ಜಾಮಿಯಾ ವಿದ್ಯಾರ್ಥಿ ಮೀರನ್ ಹೈದರ್, ಜಾಮಿಯಾ ಸಂಚಾಲನಾ ಸಮಿತಿಯ ಮಾಧ್ಯಮ ಸಂಯೋಜಕರಾದ ಸಫೂರಾ ಝರ್ಗರ್ ಮತ್ತು ಪಿಂಜ್ರಾ ಟೋಡ್ ಹೋರಾಟಗಾರ್ತಿ ನತಾಶಾ ನರ್ವಾಲ್ ಹಾಗೂ ದೇವಾಂಗನಾ ಕಲಿತಾ ಅವರನ್ನು ಈಗಾಗಲೇ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.

Join our WhatsApp group for latest news updates