ದೈವಸ್ಥಾನ, ಖಾಲಿ ಮನೆಗಳೇ ಟಾರ್ಗೆಟ್ ; ಒಂಟಿಯಾಗೇ ಬಂದು ಕಳವು ಕೃತ್ಯ! 13 ದೈವಸ್ಥಾನಗಳ ಆಭರಣ ಸೇರಿ 28 ಲಕ್ಷ ಮೌಲ್ಯದ ಸೊತ್ತು ವಶಕ್ಕೆ, ಇಬ್ಬರ ಬಂಧನ

09-12-21 04:50 pm       HK Desk news   ಕ್ರೈಂ

ದೈವಸ್ಥಾನ, ದೇವಸ್ಥಾನಗಳನ್ನೇ ಗುರಿಯಾಗಿರಿಸಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೈವದ ಮೊಗ, ಕಡ್ಸಲೆ ಸೇರಿದಂತೆ ವಿವಿಧ ಮಾದರಿಯ ದೈವದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Photo credits : Headline Karnataka

ಮಂಗಳೂರು, ಡಿ.9 : ದೈವಸ್ಥಾನ, ದೇವಸ್ಥಾನಗಳನ್ನೇ ಗುರಿಯಾಗಿರಿಸಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೈವದ ಮೊಗ, ಕಡ್ಸಲೆ ಸೇರಿದಂತೆ ವಿವಿಧ ಮಾದರಿಯ ದೈವದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿ ನಾಗಾ ನಾಯ್ಕ(55) ಮತ್ತು ದಾವಣಗೆರೆಯ ಚೆನ್ನಗಿರಿ ತಾಲೂಕಿನ ಕಣದಸಾಲು ಬೀದಿ ನಿವಾಸಿ ಮಾರುತಿ ಸಿ.ವಿ(33) ಬಂಧಿತರು. ನಾಗಾನಾಯ್ಕ ಕುಖ್ಯಾತ ಕಳ್ಳನಾಗಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ಅಚಾನಕ್ಕಾಗಿ. ಇತ್ತೀಚೆಗೆ ನ.11 ಮತ್ತು 12ರ ಮಧ್ಯೆ ಅಶೋಕನಗರದ ಮನೆಯೊಂದರಲ್ಲಿ ಕಳವು ನಡೆದಿತ್ತು. ತಮಿಳುನಾಡು ಮೂಲದ ವ್ಯಕ್ತಿಯೊಬ್ಬರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಮಗಳ ಮದುವೆ ಸಂಬಂಧ ಮಾತುಕತೆಗಾಗಿ ತಂಜಾವೂರಿಗೆ ತೆರಳಿದ್ದು 12ರಂದು ಬೆಳಗ್ಗೆ ಮನೆಗೆ ಬಂದು ಹಿಂತಿರುಗಿದಾಗ, ಹಿಂಬಾಗಿಲನ್ನು ಒಡೆದು ಕಪಾಟಿನಲ್ಲಿದ್ದ 6.86 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದು ಕಂಡುಬಂದಿತ್ತು. ಈ ಬಗ್ಗೆ ಉರ್ವಾ ಠಾಣೆಯಲ್ಲಿ ವ್ಯಕ್ತಿ ದೂರು ದಾಖಲಿಸಿದ್ದರು.

ಪ್ರಕರಣದ ಹಿನ್ನೆಲೆ ಪೊಲೀಸರು ಸಿಸಿಟಿವಿ ತಪಾಸಣೆ ನಡೆಸಿದಾಗ, ವ್ಯಕ್ತಿಯೊಬ್ಬನ ಚಹರೆ ದಾಖಲಾಗಿತ್ತು. ಇದನ್ನು ಅನುಸರಿಸಿ ಪೊಲೀಸರು ಕಳ್ಳನ ಟ್ರೇಸ್ ಮಾಡಿದ್ದಾರೆ. ಆರೋಪಿ ನಾಗಾ ನಾಯ್ಕ ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದು ಪೊಲೀಸರ ಲಿಸ್ಟಲ್ಲಿದ್ದ ಕುಖ್ಯಾತ ವ್ಯಕ್ತಿ. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಾಗಾ ನಾಯ್ಕನ ಕಳ್ಳತನದ ಪ್ರವರ ಹೊರಬಿದ್ದಿದೆ.

ಮಂಗಳೂರು ಆಸುಪಾಸಿನಲ್ಲಿ 13 ಕಡೆ ದೈವಸ್ಥಾನಗಳ ಆಭರಣಗಳನ್ನು ಕದ್ದಿರುವುದು ಮತ್ತು ಮೂರು ಕಡೆ ಮನೆ ಕಳ್ಳತನ ಮಾಡಿರುವುದನ್ನು ಪತ್ತೆ ಮಾಡಲಾಗಿದೆ. 2018ರಲ್ಲಿ ಉರ್ವಾ ಠಾಣೆ ವ್ಯಾಪ್ತಿಯ ಅಶೋಕನಗರದ ಮಾತಾ ಚೌಡೇಶ್ವರಿ ದೇವಸ್ಥಾನ, 2019ರಲ್ಲಿ ಎಡಪದವು ರಾಮ ಮಂದಿರ ಕಳ್ಳತನ, 2020ರಲ್ಲಿ ಸುರತ್ಕಲ್ ಠಾಣೆ ವ್ಯಾಪ್ತಿಯ ಕುಳಾಯಿ ಪಾಂಡುರಂಗ ಭಜನಾ ಮಂದಿರದ ಹತ್ತಿರದ ಸತ್ಯದೇವತಾ ದೇವಸ್ಥಾನ ಕಳವು, ಕುಳಾಯಿ ಕಲ್ಲುರ್ಟಿ ಪಂಜುರ್ಲಿ ದೇವಸ್ಥಾನ, 2021ರಲ್ಲಿ ಸುರತ್ಕಲ್ ವ್ಯಾಪ್ತಿಯ ಹೊಸಬೆಟ್ಟು ಕಲ್ಲುಟ್ಟಿ ಪಂಜುರ್ಲಿ ದೈವಸ್ಥಾನ, ಹೊಸಬೆಟ್ಟು ವರ್ತೇಶ್ವರಿ ಕಲ್ಲುರ್ಟಿ ದೈವಸ್ಥಾನ, ಸುರತ್ಕಲ್ ಕಾವಿನಕಲ್ಲು ಕಲ್ಲುರ್ಟಿ ದೈವಸ್ಥಾನ, ಬೈಕಂಪಾಡಿ ಮೀನಕಳಿಯ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಹಳೆಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಾವೂರು ವ್ಯಾಪ್ತಿಯ ದೇರೆಬೈಲ್ ರೇಣುಕಾ ಎಲ್ಲಮ್ಮ ದೇವಸ್ಥಾನ, ಉಳ್ಳಾಲ ವ್ಯಾಪ್ತಿಯ ಮಾಡೂರು ಕೋಟೆಕಾರು ಅಯ್ಯಪ್ಪ ಸ್ವಾಮಿ ಭಜನಾ ಮಂದಿರ, ಸುರತ್ಕಲ್ ವ್ಯಾಪ್ತಿಯ ಕುಳಾಯಿ ಧೂಮಾವತಿ ಮೈಸಂದಾಯ ದೈವಸ್ಥಾನದಲ್ಲಿ ಕಳ್ಳತನ ಮಾಡಿದ್ದನ್ನು ನಾಗಾ ನಾಯ್ಕ ಒಪ್ಪಿಕೊಂಡಿದ್ದಾನೆ.

ಇದಲ್ಲದೆ ಕಾವೂರು ಠಾಣೆ ವ್ಯಾಪ್ತಿಯ ಪಂಜಿಮೊಗರು ಬಳಿಯ ಮನೆ ಕಳ್ಳತನ, ಮುಲ್ಕಿ ಬಪ್ಪನಾಡು ಬಳಿಯ ಮನೆ ಕಳ್ಳತನ, ಇತ್ತೀಚೆಗೆ ಉರ್ವಾದ ಅಶೋಕನಗರದಲ್ಲಿ ಮನೆ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲಾಗಿದೆ. ಇವೆಲ್ಲ ಕಳ್ಳತನ ಪ್ರಕರಣ ಸೇರಿ ರೂ.18 ಲಕ್ಷ ಮೌಲ್ಯದ 406 ಗ್ರಾಮ್ ಚಿನ್ನಾಭರಣ ಹಾಗೂ 10.40 ಲಕ್ಷ ಮೌಲ್ಯದ 16 ಕೇಜಿ ಬೆಳ್ಳಿಯ ಆಭರಣಗಳು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಸೊತ್ತಿನ ಒಟ್ಟು ಮೌಲ್ಯ ರೂ.28.40 ಲಕ್ಷ ಆಗುತ್ತದೆ. ಕದ್ದ ಆಭರಣಗಳನ್ನು ದಾವಣಗೆರೆಯ ಜುವೆಲ್ಲರಿ, ಆರೋಪಿ ಮಾರುತಿಗೆ ಸೇರಿದ ಚೆನ್ನಗಿರಿಯಲ್ಲಿರುವ ಜುವೆಲ್ಲರಿ ಹಾಗೂ ನಾಗನಾಯ್ಕನ ಮನೆಯಿಂದ ವಶಕ್ಕೆ ಪಡೆಯಲಾಗಿರುತ್ತದೆ.

ಒಂಟಿಯಾಗೇ ಕಳವು ಕೃತ್ಯ ನಡೆಸುತ್ತಿದ್ದ !

ಹಿಂದೆ ಕರಾವಳಿಯನ್ನು ನಡುಗಿಸಿದ್ದ ರಿಪ್ಪರ್ ಚಂದ್ರನ್ ರೀತಿ, ನಾಗಾ ನಾಯ್ಕನೂ ಒಂಟಿಯಾಗೇ ಕೃತ್ಯ ನಡೆಸುತ್ತಿದ್ದ. ಚಿಕ್ಕಮಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದ ಈತ, ಮಂಗಳೂರಿನಲ್ಲಿ ಬಸ್ ನಿಲ್ದಾಣಗಳಲ್ಲಿ ಉಳಿದುಕೊಂಡು ಹಗಲಲ್ಲಿ ತಿರುಗಾಡಿ ಒಂಟಿ ಮನೆಗಳನ್ನು ಗುರುತು ಹಾಕುತ್ತಿದ್ದ. ಮನೆ ಖಾಲಿಯಾಗಿದೆ ಎನ್ನುವುದನ್ನು ದೃಢಪಡಿಸಿ, ಕಳವಿಗೆ ಹೊಂಚು ಹಾಕುತ್ತಿದ್ದ. ತಿರುಗಾಟದ ಸಂದರ್ಭದಲ್ಲಿ ಸಿಕ್ಕಿದ ದೈವಸ್ಥಾನಗಳಿಗೂ ಕನ್ನ ಹಾಕಿದ್ದ. ಕಳವು ಮಾಡುತ್ತಿದ್ದ ಚಿನ್ನಾಭರಣವನ್ನು ಬಸ್ಸಿನಲ್ಲಿಯೇ ತನ್ನ ಊರಿಗೆ ಒಯ್ದು ತನ್ನ ಮಿತ್ರ ಮಾರುತಿಯ ಮೂಲಕ ಜುವೆಲ್ಲರಿಗಳಲ್ಲಿ ಮಾರಾಟ ಮಾಡುತ್ತಿದ್ದ. ಮಾರುತಿ ದಾವಣಗೆರೆಯ ಚೆನ್ನಗಿರಿಯಲ್ಲಿ ಜುವೆಲ್ಲರಿ ಹೊಂದಿದ್ದು, ಆತನ ಸಂಪರ್ಕದಲ್ಲಿ ಬೇರೆ ಬೇರೆ ಕಡೆ ಚಿನ್ನ, ಬೆಳ್ಳಿಯನ್ನು ಮಾರುತ್ತಿದ್ದ.

ಆರೋಪಿ ಮಾರುತಿ ಈ ಹಿಂದೆ ಆಟೋ ಓಡಿಸುತ್ತಿದ್ದು, ನಾಗಾನಾಯ್ಕನ ಸಂಪರ್ಕದ ನಂತರ ಕಳ್ಳತನದ ಪಾಲು ಪಡೆದು ಜುವೆಲ್ಲರಿ ಆರಂಭಿಸಿದ್ದ. ಕಳ್ಳತನ ಮಾಲುಗಳನ್ನು ತನ್ನ ಜುವೆಲ್ಲರಿಗೆ ಕೊಂಡೊಯ್ದು ಅಲ್ಲಿರಿಸಿಕೊಂಡು ಬೇರೆ ಬೇರೆ ಕಡೆಗಳಿಗೆ ಅನುಮಾನ ಬಾರದಂತೆ ಮಾರಾಟ ಮಾಡುತ್ತಿದ್ದ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣವನ್ನು ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

The CCB police have arrested two persons in connection with various theft cases in and around Mangaluru here on December 9. The prime accused Naga Naika a notorious criminal, is involved in 13 temple theft cases and three house theft cases. Cases have been registered against him in various police stations. During interrogation, it was revealed that the accused was involved in various temple theft cases.