ಶಿವಾಜಿ ಪ್ರತಿಮೆಗೆ ಮಸಿ, ಬೆಳಗಾವಿಯಲ್ಲಿ ಸಿಡಿದ ಕಿಚ್ಚು ; ಕನ್ನಡಿಗರ ಮೇಲೆ ಶಿವಸೇನೆ, ಎಂಇಎಸ್ ಗೂಂಡಾಗಿರಿ, ಕನ್ನಡಿಗರ ವಾಹನಗಳು ಪುಡಿ! ಸೆಕ್ಷನ್ ಜಾರಿ, 27 ಮಂದಿ ಬಂಧನ 

18-12-21 01:25 pm       HK Desk news   ಕ್ರೈಂ

ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಹೋರಾಟಗಾರರ ನಡುವೆ ಕಿಚ್ಚು ಹತ್ತಿಕೊಂಡಿದೆ.

ಬೆಳಗಾವಿ, ಡಿ.18 : ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಹೋರಾಟಗಾರರ ನಡುವೆ ಕಿಚ್ಚು ಹತ್ತಿಕೊಂಡಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟ ದ್ವೇಷದಲ್ಲಿ ಕನ್ನಡ ಪರ ಹೋರಾಟಗಾರ ಪುಂಡರು ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವ ಘಟನೆ ಬೆಳಗಾವಿಯಲ್ಲಿ ಕಿಡಿ ಹೊತ್ತಿಸಿದೆ. ಇದರ ದ್ವೇಷದಲ್ಲಿ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಲಾಗಿದೆ. ಹೀಗಾಗಿ ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಪರ ಪುಂಡರು ಕಾನೂನು ಕೈಗೆ ತೆಗೆದುಕೊಂಡಿದ್ದು ಬೀದಿಗೆ ಇಳಿದಿದ್ದಾರೆ.

ಮಹಾರಾಷ್ಟ್ರ ಗಡಿಭಾಗದಲ್ಲಿ ಕನ್ನಡಿಗರ ಕಾರು, ವಾಹನಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಲಾಗುತ್ತಿದೆ. ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದ್ದು, ಅಧಿವೇಶನ ಕರ್ತವ್ಯಕ್ಕೆ ಆಗಮಿಸಿರುವ ಸರಕಾರಿ ವಾಹನಗಳು, ಹೊಟೇಲ್ ಮುಂದೆ ನಿಲ್ಲಿಸಿರುವ ಕನ್ನಡಿಗರ ವಾಹನಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಬೆಳಗಾವಿ ನಗರದಲ್ಲಿ 20ಕ್ಕೂ ಹೆಚ್ಚು ವಾಹನಗಳಿಗೆ ಕಲ್ಲು ತೂರಿ ಪುಡಿ ಮಾಡಲಾಗಿದೆ.

ಶಿವಾಜಿ ಪ್ರತಿಮೆಗೆ ಅವಮಾನ ತಿಳಿಯುತ್ತಿದ್ದಂತೆ ಶುಕ್ರವಾರ ರಾತ್ರಿಯೇ ಮರಾಠಿಗರು ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿ ನಗರದಲ್ಲಿ ಸೇರಿದ್ದು, ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ ವೇಳೆ ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಆರಂಭಿಸಿದರೆ, ಮತ್ತೊಂದೆಡೆ ಎಂಇಎಸ್ ಪರ ಹೋರಾಟಗಾರರು ಕೂಡ ಬೀದಿಗೆ ಇಳಿದಿದ್ದಾರೆ. ಇದೇ ವೇಳೆ, ಕರ್ನಾಟಕದ ಗಡಿಭಾಗ ಮಹಾರಾಷ್ಟ್ರದಲ್ಲಿರುವ ಸಾಂಗ್ಲಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರು ಕನ್ನಡಿಗರ ವಾಹನಗಳು, ಕನ್ನಡದ ನಾಮಫಲಕದ ಮೇಲೆ ದಾಳಿ ಆರಂಭಿಸಿದ್ದಾರೆ. ಕನ್ನಡದಲ್ಲಿ ಹಾಕಿರುವ ಬೋರ್ಡ್ ಗಳನ್ನು ಕಿತ್ತು ಹಾಕಿ, ಮಸಿ ಬಳಿದು ಧಿಕ್ಕಾರ ಕೂಗಲು ಆರಂಭಿಸಿದ್ದಾರೆ.

ಬೆಳಗಾವಿಯ ಗಡಿಭಾಗ ಮೀರಜ್ ಪಟ್ಟಣದಲ್ಲಿ ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಐದು ಮಂದಿಗೆ ಗಾಯಗಳಾಗಿದ್ದು ಬಿಗುವಿನ ವಾತಾರಣ ನೆಲೆಸಿದೆ. ಶಿವಸೇನೆ ಪುಂಡರ ದಾಳಿಯಿಂದಾಗಿ ಕನ್ನಡಿಗ ವಾಹನ ಚಾಲಕರು, ವ್ಯಾಪಾರಸ್ಥರು ಭಯಗೊಂಡಿದ್ದಾರೆ. ಬೆಳಗಾವಿಯಲ್ಲಿ 30ಕ್ಕೂ ಹೆಚ್ಚು ಮಂದಿ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಬೆಳಗಾವಿ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಪುಂಡರ ಅಟ್ಟಹಾಸಕ್ಕೆ ನಿಯಂತ್ರಣ ಹೇರಲಾಗಿದೆ. ಬೆಳಗಾವಿ ಕ್ಯಾಂಪ್, ಖಡೇಬಜಾರ್, ಮಾರ್ಕೆಟ್ ಹಾಗೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಬೆಳಗಾವಿ ನಗರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

27 people had been arrested for attacking the Sangolli Rayanna statue in the Belagavi district of Karnataka, informed the police. "27 arrested in 3 police station limits in Belagavi for attacking the Sangolli Rayanna statue," said K Tyagarajan, commissioner of police, Belagavi.